More

    ಇನ್ನೇನು ಜಲ್ಲಿಕಟ್ಟು ಶುರುವಾಗುತ್ತೆ ಅಂದಾಗ ಅನುಮತಿ ಇಲ್ಲ ಎಂದರು; ಜನರಿಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ!

    ತಮಿಳುನಾಡು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎನ್ನುವುದು ಅತ್ಯಂತ ಜನಪ್ರಿಯ ಕ್ರೀಡೆ. ಈ ಹಿಂದೆ ಪೆಟಾ ಸಂಸ್ಥೆ ಅದರ ಮೇಲೆ ಪ್ರಾಣಿಹಿಂಸೆಯ ಆಕ್ಷೇಪಣೆ ಸಲ್ಲಿಸಿ ಅದೊಂದು ದೊಡ್ಡ ವಿವಾದವೇ ಆಗಿ ಹೋಗಿತ್ತು.

    ಇನ್ನೇನು ಜಲ್ಲಿಕಟ್ಟು ಸ್ಪರ್ಧೆ ಆರಂಭ ಆಗುತ್ತೆ ಎನ್ನುವಾಗ ಬಂದ ಪೊಲೀಸರು, ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದರು. ಸ್ಪರ್ಧೆಗೆ ಎಲ್ಲಾ ರೀತಿಯಲ್ಲಿ ತತಯಾರಾಗಿ ಬಂದಿದ್ದ ಜನರು ಇದರಿಂದ ಸಿಟ್ಟಿಗೇಳದೇ ಇರುತ್ತಾರಾ? ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ಜನರು ಹೆದ್ದಾರಿ ತಡೆ ನಡೆಸಿ, ಪೋಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.

    ಈ ಘಟನೆ ನಡೆದದ್ದು ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕೊಪ್ಪಚಂದ್ರಂ ಗ್ರಾಮದಲ್ಲಿ. ಜಲ್ಲಿಕಟ್ಟು ಆಚರಣೆಗೆ ಗ್ರಾಮಸ್ಥರು ಸಿದ್ದತೆ ನಡೆಸಿದ್ದರು. ಜನಪ್ರಿಯ ಜಲ್ಲಿಕಟ್ಟನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕೂಡ ಆಗಮಿಸಿದ್ದರು. ಜಲ್ಲಿಕಟ್ಟಿನಲ್ಲಿ ಭಾಗವಹಿಸಲು ನೂರಾರು ಸಂಖ್ಯೆಯಲ್ಲಿ ರಾಸುಗಳ‌ನ್ನೂ ಜನರು ಸ್ಪರ್ಧೆಗೆ ಕರೆತಂದಿದ್ದರು.

    ಆದರೆ ಸ್ಪರ್ಧೆ ಶುರುವಾಗುವ ಕೆಲ ಸಮಯದ ಮುನ್ನ, ಅನುಮತಿ ಇಲ್ಲ ಎಂದು ಪೋಲೀಸರು ಅಡ್ಡಿ ಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಹೆದ್ದಾರಿ ತಡೆ ನಡೆಸಿ ಪೋಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ವಾಹನಗಳು ಓಡಾಡದಂತೆ ಹೆದ್ದಾರಿಯಲ್ಲಿ ಕಲ್ಲುಗಳನ್ನ ಅಡ್ಡಲಾಗಿಟ್ಟು ಪ್ರತಿಭಟನೆ ಕೂಡ ಮಾಡಿದ್ದಾರೆ. ಹೆದ್ದಾರಿಯಲ್ಲಿ ಸಾವಿರಾರು ಜನರು ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದು ವಾಹನಗಳ ಮೇಲೆ ಹತ್ತಿ ಜನರು ಪುಂಡಾಟ ತೋರಿಸಿದ್ದಾರೆ.

    ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ಜನರನ್ನು ನಿಯಂತ್ರಣ ಮಾಡಲು ಪೋಲೀಸರು ಹರಸಾಹಸ ಪಟ್ಟಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಇದನ್ನು ತಣ್ಣಗಾಗಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ. ಇದಾದ ಕೆಲ ಸಮಯದ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts