More

    ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಪ್ರಕರಣ: ಡಿಎಚ್‌ಒ ಡಾ.ಟಿ.ಎನ್.ಧನಂಜಯ ಹೇಳಿಕೆ

    ಮಂಡ್ಯ: ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚು ಕಂಡುಬರುತ್ತಿದೆ. ಆದ್ದರಿಂದ ರೋಗದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಸಲಹೆ ನೀಡಿದರು.
    ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಶಿಕ್ಷಣ ಇಲಾಖೆ ಹಾಗೂ ಆರಕ್ಷಕ ಇಲಾಖೆಯ ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ಜಂತುಹುಳು ನಿವಾರಣಾ ದಿನ ಹಾಗೂ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತ ಹೀನತೆ ಕಾಡುವುದಕ್ಕೆ ಜಂತುಹುಳು ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ 6 ತಿಂಗಳಿಗೊಮ್ಮ ಜಂತು ಹುಳುವಿನ ಮಾತ್ರೆಯನ್ನು ತೆಗೆದುಕೊಳ್ಳಬೇಕು ಎಂದರು.
    ಸ್ವಾಸ್ಥ್ಯ-ಮನ ಸ್ವಚ್ಛ-ಮನೆ ಎಂಬ ಘೋಷವಾಕ್ಯ ಅನುಸಾರ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಎಲ್ಲ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳವಳಿಕೆ ನೀಡುವುದು. ಆರೋಗ್ಯ ಮತ್ತು ಕ್ಷೇಮಕೇಂದ್ರಗಳಲ್ಲಿ ದೊರಕುವ ಆರೋಗ್ಯ ಸೇವೆಗಳ ಬಗ್ಗೆ ತಿಳಿಸುವ ಉದ್ದೇಶವಾಗಿದೆ. ಅಂತೆಯೇ ಜಿಲ್ಲೆಯಲ್ಲಿ 267 ಆರೋಗ್ಯ ಕ್ಷೇಮ ಕೇಂದ್ರ ತೆರೆದಿದ್ದೇವೆ. 3 ರಿಂದ 4 ಸಾವಿರ ಜನಸಂಖ್ಯೆಗೆ ಒಬ್ಬರು ಸಮುದಾಯ ಆರೋಗ್ಯಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ಇನ್ನು ಸಾರ್ವಜನಿಕರಿಗೆ ಗ್ರಾಮೀಣ ಮಟ್ಟದಲ್ಲಿ ಅವರ ಮನೆ ಬಾಗಿಲಿಗೆ ಔಷಧ ದೊರೆಯುವಂತೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದರು.
    ಕ್ಯಾನ್ಸರ್ ಜಾಗೃತಿ ಮತ್ತು ಜಂತುಹುಳು ನಿರ್ಮೂಲನಾ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಮೂಲಕ ಜನ ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ತಿಂಗಳ 14ರಂದು ಎಲ್ಲ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆರೋಗ್ಯ ಮೇಳ ನಡೆಯಲಿದೆ. ಅದರಂತೆ ಒಂದೊಂದು ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತೇವೆ. ಈ ತಿಂಗಳು ಕ್ಯಾನ್ಸರ್ ಹಾಗೂ ಜಂತುಹಳುವಿನ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಆರೋಗ್ಯ ಶಿಕ್ಷಣಾಧಿಕಾರಿ ವೇಣುಗೋಪಾಲ್, ತಂಬಾಕು ನಿಯಂತ್ರಣಾಧಿಕಾರಿ ತಿಮ್ಮರಾಜು, ಶಿವಸ್ವಾಮಿ, ಚಿಕ್ಕಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts