More

    ಕುಟುಂಬದ ಮಡಿಲು ಸೇರಿದ ಮಾನಸಿಕ ಅಸ್ವಸ್ಥೆ

    ಜಗಳೂರು: ಮನೆ ಬಿಟ್ಟು ಬಂದು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮರಳಿ ತನ್ನ ಕುಟುಂಬವನ್ನು ಸೇರಿದ್ದಾಳೆ.
    ದಾವಣಗೆರೆ ಮೂಲದ ಅವಿವಾಹಿತ ಮಹಿಳೆ ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ಮನೆ ಬಿಟ್ಟು ಎಲ್ಲೆಂದರಲ್ಲಿ ಒಬ್ಬಂಟಿಯಾಗಿ ತಿರುಗಾಡುತ್ತಿದ್ದಳು. ಜಗಳೂರು ರಸ್ತೆಯಲ್ಲಿ ಮೆದಗಿನಕೆರೆ ಕ್ರಾಸ್ ಬಳಿ ಓಡಾಡುತ್ತಿರುವುದನ್ನು ಗಮನಿಸಿದ ಗ್ರಾಮದ ಮಂಜುನಾಥ್ ಹಾಗೂ ಗೌಡ್ರು ವೀರಣ್ಣ ಅವರು ಭಾನುವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.
    ಮಹೇಶ್ವರಪ್ಪ ಅವರು ತಮ್ಮ ಇಲಾಖೆ ಸಿಬ್ಬಂದಿ ಜತೆ ಧಾವಿಸಿ ಮಹಿಳೆಯನ್ನು ಉಪಚರಿಸಿದರು. ಸರಿಯಾಗಿ ತಿಂಡಿ-ಊಟವಿಲ್ಲದೆ ತಿರುಗಾಡಿದ್ದರಿಂದ ಬಸವಳಿದಿದ್ದ ಮಹಿಳೆಗೆ ಮೊದಲು ನೀರು ಕುಡಿಸಿದರು. ನಂತರ ಊಟ ಕೊಟ್ಟು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುವಂತೆ ಸಮಾಧಾನ ಹೇಳಿದರು.
    ನಂತರದಲ್ಲಿ ಆಕೆ ಜತೆ ಮಾತಿಗೆ ಇಳಿದು ಪೂರ್ವಾಪರ ಹಿನ್ನೆಲೆ ಅರಿಯುವ ಪ್ರಯತ್ನ ನಡೆಸಿದರು. ಹೀಗೆ ಮಾತಿಗಿಳಿದಾಗ ಆಕೆ ತಾನು ದಾವಣಗೆರೆಯವಳೆಂದು ಮಾಹಿತಿ ನೀಡಿದ್ದಾಳೆ. ಬಡ ಕುಟುಂಬದ ಮಹಿಳೆ ದಾವಣಗೆರೆಯಲ್ಲಿ ಅವರಿವರ ಮನೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆದರೆ, ಇತ್ತೀಚೆಗೆ ಅತಿಯಾದ ಒತ್ತಡದಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಳು.
    ಮೆದಗಿನಕೆರೆ ಕ್ರಾಸ್ ಬಳಿ ಸಿಕ್ಕ ಮಹಿಳೆಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೆರವು ಪಡೆದು ಆಂಬ್ಯುಲೆನ್ಸ್ ವಾಹನದಲ್ಲಿ ದಾವಣಗೆರೆಗೆ ಕರೆದೋಯ್ದು ಪಾಲಕರಿಗೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts