More

    ಮೊಟ್ಟೆ ಮೋಸ ತನಿಖೆ ಆಮೆಗತಿ

    ಉಡುಪಿ: ಮೊಟ್ಟೆ ಇಡುವ ಕೋಳಿ ಮರಿ ವ್ಯಾಪಾರದ ಹೆಸರಲ್ಲಿ ಉಡುಪಿ ಸೇರಿದಂತೆ ರಾಜ್ಯದ ಹಲವು ರೈತರನ್ನು ನಂಬಿಸಿ ಲಕ್ಷಾಂತರ ರೂ. ಕೊಳ್ಳೆ ಹೊಡೆದ ಆರೋಪಿಗಳ ಬಂಧನಕ್ಕೆ ಇನ್ನೂ ವಿಶೇಷ ತನಿಖಾ ತಂಡ ರಚನೆಯಾಗಿಲ್ಲ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದರೂ, ತನಿಖೆ ಇನ್ನೂ ಠಾಣಾಮಟ್ಟದಲ್ಲಿ ಆಮೆ ವೇಗದಲ್ಲಿದೆ. ರಾಜ್ಯಾದ್ಯಂತ ರೈತರಿಗೆ ಕೋಳಿಮೊಟ್ಟೆ ಹೆಸರಲ್ಲಿ ನೂರಾರು ಕೋಟಿ ರೂ.ವಂಚನೆ ನಡೆದ ಆರೋಪ ಕೇಳಿ ಬಂದಿದೆ. ಉಡುಪಿಯಲ್ಲಿ 10ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಬಹುತೇಕ ಮಧ್ಯಮವರ್ಗದ ರೈತರು ಸರಾಸರಿ 2 ಲಕ್ಷದಿಂದ ರಿಂದ 4 ಲಕ್ಷ ರೂ.ವನ್ನುಕಳೆದು ಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಪ್ರಕರಣ ದಾಖಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎರಡು ಪ್ರಕರಣ ದಾಖಲಾಗಿದ್ದು, ಒಟ್ಟು ವಂಚನೆ ಮೊತ್ತ 40 ಲಕ್ಷಕ್ಕೂ ಮೀರಿದೆ ಎನ್ನಲಾಗುತ್ತಿದೆ.

    ಪಂಗನಾಮ ಹಾಕಿದ ಸಂಸ್ಥೆ: ಒಮೇಗಾ 36 ಎಂಬ ಸಂಸ್ಥೆ ನಂಜನಗೂಡಿನಲ್ಲಿ ಕಚೇರಿ ತೆರೆದು ರಾಜ್ಯಾದ್ಯಂತ ಕೋಳಿ ಮರಿ ವ್ಯಾಪಾರ ಶುರುಮಾಡಿತ್ತು. 18 ತಿಂಗಳು ಮೊಟ್ಟೆ ಇಡುವ ಕೋಳಿ ಮತ್ತು ಅಧಿಕ ಲಾಭಕ್ಕೆ ಸಂಬಂಧಿಸಿ ಜಾಹೀರಾತು ನೀಡಿ ಮಧ್ಯಮ ವರ್ಗದ ರೈತರನ್ನು ತಮ್ಮತ್ತ ಸೆಳೆದಿದ್ದರು. 10 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡು ಕೋಳಿಗಳನ್ನು ಸರಬರಾಜು ಮಾಡುತ್ತೇವೆ. ಬಳಿಕ ಮೊಟ್ಟೆಗಳನ್ನು ಖರೀದಿಸುತ್ತೇವೆ, ಸತ್ತ ಕೋಳಿಗಳನ್ನು ಬದಲಾಯಿಸಿ ಕೊಡುತ್ತೇವೆ ಎಂದು ಸಂಸ್ಥೆ ರೈತರನ್ನು ನಂಬಿಸಿತ್ತು. ರೈತರು ಶೆಡ್ ನಿರ್ಮಾಣ ಹಾಗೂ ಕೋಳಿ ಮರಿ ಖರೀದಿಗಾಗಿ ಲಕ್ಷಾಂತರ ರೂ.ಬಂಡವಾಳ ಹೂಡಿದ್ದರು. ಒಮ್ಮೆ ಕೋಳಿಗಳನ್ನು ತಂದುಕೊಟ್ಟಿದ್ದ ಸಂಸ್ಥೆ, ಮೊಟ್ಟೆಯನ್ನೂ ಖರೀದಿಸಿತ್ತು. ಆದರೆ ನಂತರ ಕೆಲವರಿಗೆ ಅರ್ಧಂಬರ್ಧ ಹಣ ನೀಡಿತು. ಹಲವರಿಗೆ ಹಣವನ್ನೇ ನೀಡದೆ ಪಂಗನಾಮ ಹಾಕಿದೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳು ರಾತ್ರೋರಾತ್ರಿ ಕಚೇರಿ ಬಂದ್ ಮಾಡಿ ಪರಾರಿಯಾಗಿದ್ದರು. ಪ್ರಸಕ್ತ ಅವರೆಲ್ಲ ಕೇರಳದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದು ಬಿಟ್ಟರೆ, ಬೇರೆ ಯಾವ ರೀತಿಯ ತನಿಖೆಯೂ ನಡೆದಿಲ್ಲ. ಹೊರ ರಾಜ್ಯಕ್ಕೆ ತೆರಳಿ ತನಿಖೆ ನಡೆಸುವ ಬಗ್ಗೆ ಪೊಲೀಸರಲ್ಲೇ ಸ್ಪಷ್ಟತೆ ಇಲ್ಲ.

    ರೈತರ ಮೇಲೆ ಸುಳ್ಳು ಕೇಸು: ರಾಜ್ಯದ 59 ರೈತರು ವಂಚನೆಗೊಳಗಾಗಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳು ಕೇರಳದ ನ್ಯಾಯಾಲಯದಲ್ಲಿ ರೈತರ ಮೇಲೆಯೇ ಸುಳ್ಳು ಕೇಸು ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ತಮಗೆ ನೊಟೀಸ್ ಬಂದಿದೆ ಎಂದು ಹಣ ಕಳೆದುಕೊಂಡ ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಉಡುಪಿಯಲ್ಲಿ 29 ಮಂದಿ ವಂಚನೆಗೊಳಗಾಗಿದ್ದಾರೆ. ಕೊಡಗು, ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ಹೊಸಪೇಟೆ ಜಿಲ್ಲೆಯಲ್ಲೂ ವಂಚನೆ ನಡೆದಿದೆ. ವಂಚನೆಗೊಳಗಾದವರೆಲ್ಲರೂ ಮಧ್ಯಮ ವರ್ಗದ ರೈತರು. ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ವ್ಯಾಪಾರಕ್ಕೆ ಹೂಡಿಕೆ ಮಾಡಿದ್ದರು.

    ವಂಚನೆಗೊಳಗಾದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಇನ್ನೂ ನಮಗೆ ಅವರಿಂದ ಉತ್ತ ರ ಬಂದಿಲ್ಲ. ಆರೋಪಿಗಳು ಕೇರಳ ಅಥವ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ. ನೋಟಿಸ್‌ಗೆ ಪ್ರತಿಕ್ರಿಯಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿಶೇಷ ತಂಡ ರಚನೆ ಮಾಹಿತಿ ಇಲ್ಲ. ಸದ್ಯಕ್ಕೆ ಠಾಣೆಯ ಮಟ್ಟದಲ್ಲೇ ತನಿಖೆ ನಡೆಯುತ್ತಿದೆ.
    – ಹೆಸರು ಬಹಿರಂಗಪಡಿಸಲು ಇಚ್ಛಿಸದ ಠಾಣಾಧಿಕಾರಿ.

    ಇದೊಂದು ದೊಡ್ಡ ವಂಚನಾ ಜಾಲ. ಆರೋಪಿಗಳನ್ನು ಶೀಘ್ರ ಬಂಧಿಸಿ ವಂಚನೆಗೊಳಗಾದ ರೈತರಿಗೆ ಪೊಲೀಸ್ ಇಲಾಖೆ ನ್ಯಾಯ ಒದಗಿಸಬೇಕು. ಈ ಪ್ರಕರಣಕ್ಕೆ ವಿಶೇಷ ತಂಡ ರಚನೆಯಾಗಿ ತನಿಖೆ ನಡೆಯಬೇಕಿದೆ. ಗೃಹ ಸಚಿವರಿಗೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ.
    – ರಾಘವೇಂದ್ರ ರಾವ್ ಉಪ್ಪೂರು, ಪ್ರದಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts