More

    ತ್ಯಾಜ್ಯದಿಂದ ಅಶುಚಿತ್ವ ತಾಂಡವ

    ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದಲ್ಲಿರುವ ವಾಹನಗಳ ಪಾರ್ಕಿಂಗ್ ಸ್ಥಳದಿಂದ ಮೂಡಿಗೆರೆ ರಸ್ತೆ, ದೇಗುಲದ ಯಾತ್ರಿ ನಿವಾಸಕ್ಕೆ ತೆರಳುವ ಅಗಳು ಹೊಂಡದ ರಸ್ತೆ ಪಕ್ಕದಲ್ಲಿ ತ್ಯಾಜ್ಯ ರಾಶಿ ಹೆಚ್ಚಿದ್ದು, ನಾಗರಿಕರು ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

    ಪಟ್ಟಣದಲ್ಲಿರುವ ಕೆಲ ಅಂಗಡಿ, ಮುಂಗಟ್ಟು, ಮಾಂಸದಂಗಡಿ ಮತ್ತು ಮನೆ ಮಾಲೀಕರು, ಬಾಡಿಗೆದಾರರು ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದರೂ ಪುರಸಭೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಈ ನಡುವೆ ಕೆಲವರು ಹಳೇ ಮನೆ ರೀಪೇರಿ ವಸ್ತುಗಳು, ಮನೆಯಲ್ಲಿ ಉಪಯೋಗಿಸಿದ ತ್ಯಾಜ್ಯವನ್ನು ದೇಗುಲ ಹಿಂಭಾಗದಲ್ಲಿನ ಅಗಳು ಹೊಂಡದ ಪಕ್ಕಕ್ಕೆ ತಂದು ಹಾಕುತ್ತಿದ್ದಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹೆಚ್ಚಾಗುವ ಸಾಧ್ಯತೆ ಇದೆ.

    ಈ ಮಾರ್ಗದಲ್ಲಿ ಒಮ್ಮೆಯಾದರೂ ಪ್ರವಾಸೋದ್ಯಮ ಮತ್ತು ದೇಗುಲದ ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿಯವರು, ಓಡಾಡಿದರೆ ಇಲ್ಲಿನ ನರಕಸದೃಶ ಕಣ್ಣಿಗೆ ಬೀಳುತ್ತದೆ. ಇಲ್ಲಿನ ತ್ಯಾಜ್ಯ ತಿನ್ನಲು ಬರುವ ನಾಯಿಗಳು ತ್ಯಾಜ್ಯವನ್ನೆಲ್ಲ ಎಳೆದು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇದು ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಜನರು ಇಲ್ಲಿಗೆ ತ್ಯಾಜ್ಯ ತಂದು ಹಾಕದಂತೆ ಅಗತ್ಯ ಕ್ರಮ ವಹಿಸುವುದರ ಜತೆಗೆ ಹಾಕುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಆ ಮೂಲಕ ಪ್ರವಾಸಿಗರು, ಸ್ಥಳೀಯರ ಆರೋಗ್ಯ ಕಾಪಾಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

    ಹೆಚ್ಚುತ್ತಿದೆ ಅಶುಚಿತ್ವ: ಚನ್ನಕೇಶವಸ್ವಾಮಿ ದೇಗುಲ ಆಡಳಿತ ಮಂಡಳಿ ವಾಹನಗಳ ನಿಲುಗಡೆ ಸ್ಥಳದಲ್ಲಿ ಈ ಹಿಂದೆ ಘನತ್ಯಾಜ್ಯ ಘಟಕ ನಿರ್ಮಿಸಿತ್ತು. ದೇಗುಲದ ಆಸುಪಾಸಿನಲ್ಲಿ ಸಂಗ್ರಹವಾಗುವ ಕಸವನ್ನು ಘನತ್ಯಾಜ್ಯ ಘಟಕದಲ್ಲಿ ವಿಂಗಡಿಸಿ ಗೊಬ್ಬರ ಮಾಡಲಾಗುತ್ತಿತ್ತು. ಈ ಘಟಕ ಸ್ಥಳ ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದು ಎಂಬ ಕಾರಣಕ್ಕಾಗಿ ಇಲಾಖೆ ಅಧಿಕಾರಿಗಳು ಘಟಕವನ್ನು ತೆರವುಗೊಳಿಸಿದ್ದರಿಂದ ಇಲ್ಲಿನ ಕಸವನ್ನೆಲ್ಲ ಪುರಸಭೆ ವಾಹನಕ್ಕೆ ಹಾಕಲಾಗುತ್ತಿದೆ. ಆದರೆ ಪಟ್ಟಣದ ಕೆಲ ಸಾರ್ವಜನಿಕರು ಮತ್ತು ವಸತಿ ಗೃಹಗಳ ಮಾಲೀಕರು ಅಳಿದುಳಿದ ಕಸ ಹಾಗೂ ವಸ್ತುಗಳನ್ನು ಹೊಂಡದ ಪಕ್ಕಕ್ಕೆ ಸುರಿಯುತ್ತಿದ್ದಾರೆ. ಇದರಿಂದಾಗಿ ಅಶುಚಿತ್ವ ಹಾಚ್ಚಾಗುತ್ತಿದೆ.

    ನಿರ್ದಾಕ್ಷಿಣ್ಯ ಕ್ರಮ ಅಗತ್ಯ: ಪಟ್ಟಣ ಸಮೀಪ ಘನತ್ಯಾಜ್ಯ ಘಟಕ ನಿರ್ಮಿಸಿ ಒಣ ಕಸ, ಹಸಿ ಕಸವನ್ನು ಪುರಸಭೆಯಿಂದ ಪ್ರತ್ಯೇಕವಾಗಿ ಸಂಗ್ರಹಿಸಿ ಗೊಬ್ಬರ ತಯಾರು ಮಾಡಲಾಗುತ್ತಿದೆ. ಜತೆಗೆ ನಿತ್ಯ ಆಟೋ ಟಿಪ್ಪರ್‌ಗಳು ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿದ್ದರೂ ಕೆಲವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಗೂ ಅಗಳ ಹೊಂಡದ ರಸ್ತೆ ಬದಿಯಲ್ಲಿ ಸುರಿಯುವ ಮೂಲಕ ಕಲುಷಿತ ಪರಿಸರ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಅಂತಹವರ ವಿರುದ್ಧ ದೇಗುಲ ಮತ್ತು ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯ.

    ದಂಡ ಪ್ರಯೋಗ: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ಉದ್ದೇಶದಿಂದ ಪುರಸಭೆಯಿಂದ ಕೆಲವೆಡೆ ನಾಮಫಲಕದೊಂದಿಗೆ ಸಿಸಿ ಕ್ಯಾಮರಾವನ್ನೂ ಅಳವಡಿಸಿತ್ತು. ಮುಲಾಜಿಲ್ಲದೆ ದಂಡ ವಿಧಿಸಲಾರಂಭಿಸಿದ್ದರಿಂದ ಸಾರ್ವಜನಿಕರು ವಿಧಿ ಇಲ್ಲದೆ ದೇಗುಲ ಹಿಂಭಾಗಕ್ಕೆ ಸುರಿಯುತ್ತಿದ್ದಾರೆ. ಇದೀಗ ಈ ಸ್ಥಳ ಕೊಳೆತು ಗಬ್ಬು ನಾರುತ್ತಿದೆ.

    ಬೇಲೂರಿನ ಚನ್ನಕೇಶವ ದೇಗುಲದ ಹಿಂಭಾಗದಲ್ಲಿರುವ ಹೊಂಡದ ರಸ್ತೆ ಪಕ್ಕದಲ್ಲಿ ಕಸ ಹಾಗೂ ಮಾಂಸದ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಈ ಭಾಗದ ಜನರ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಮಾಂಸದಂಗಡಿಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳಬೇಕಿದೆ. ಜತೆಗೆ ಈ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿ ಓಡಾಡುವಂತಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ.
    ಆರ್.ವೆಂಕಟೇಶ್ ನಾಗರಿಕ ಕೆರೆಬೀದಿ ಕೋಟೆ ಬೇಲೂರು

    ಈ ಹಿಂದೆಯೂ ಸಾಕಷ್ಟು ಬಾರಿ ದೇಗುಲ ಹಿಂಭಾಗದಲ್ಲಿ ಹಾಕಿದ್ದ ಕಸ ಸೇರಿದಂತೆ ಇತರ ತ್ಯಾಜ್ಯವನ್ನು ಪುರಸಭೆಯವರಿಗೆ ಹೇಳಿ ಸ್ವಚ್ಛಗೊಳಿಸಲಾಗಿತ್ತು. ಆದರೆ ಈಗ ಸಾರ್ವಜನಿಕರು ಕಸ ಕಡ್ಡಿ ಮತ್ತು ತ್ಯಾಜ್ಯ ತಂದು ಹಾಕುತ್ತಿರುವುದರಿಂದ ಅಶುಚಿತ್ವ ಹೆಚ್ಚುತ್ತಿದೆ. ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು. ಸಾರ್ವಜನಿಕರು ದೇಗುಲದ ಅಕ್ಕಪಕ್ಕದಲ್ಲಿ ಕಸ ಹಾಕಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪದೇ ಪದೆ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    ಡಾ.ನಾರಾಯಣಸ್ವಾಮಿ ಅಧ್ಯಕ್ಷ, ಶ್ರೀ ಚನ್ನಕೆಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ, ಬೇಲೂರು

    ದೇಗುಲದ ಹಿಂಭಾಗದಲ್ಲಿ ಕಸ ಹಾಕುತ್ತಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು. ಈ ಸಂಬಂಧ ಆಡಳಿತ ಮಂಡಳಿ, ಪುರಸಭೆ ಅಧ್ಯಕ್ಷ, ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಇಲ್ಲಿ ಕಸ ಹಾಕದಂತೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುವುದು.
    ಕೆ.ಎನ್.ಯೋಗೇಶ್, ಇಒ ಶ್ರೀ ಚನ್ನಕೇಶವಸ್ವಾಮಿ ದೇಗುಲ ಬೇಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts