More

    ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸ

    #ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಪದೇಪದೆ ಟೆನ್ಷನ್ ಆಗುತ್ತದೆ. ಆರೋಗ್ಯಕ್ಕೆ ತೊಂದರೆಯಾಗಿದೆ. ಯೋಗ ಹಾಗೂ ಮುದ್ರೆಯ ಮೂಲಕ ಪರಿಹಾರ ತಿಳಿಸಿ.

    | ಅರುಣ್ 28 ವರ್ಷ, ಬೆಂಗಳೂರು

    ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸನಿಮ್ಮ ಕೆಲಸದ ಸ್ಥಳದಲ್ಲಿ ಉಂಟಾಗುವ ಉದ್ವೇಗದ ಕಾರಣವನ್ನು ತಿಳಿಯಲು ಪ್ರಯತ್ನಿಸಿ. ಟೆನ್ಷನ್​ನಿಂದ ಶಕ್ತಿ ಕ್ಷೀಣಿಸುತ್ತದೆ. ಅದು ಏಕಾಗ್ರತೆಯನ್ನು ತೆಗೆದುಹಾಕುತ್ತದೆ, ಆತ್ಮವಿಶ್ವಾಸವನ್ನು ಅಲುಗಾಡಿಸುತ್ತದೆ. ಕ್ರಮೇಣ ಒತ್ತಡದ ತಲೆನೋವು, ಹೊಟ್ಟೆ ಉಬ್ಬರ, ರಕ್ತದೊತ್ತಡ, ಎದೆನೋವು, ನಿದ್ರೆಯ ತೊಂದರೆ ಮುಂತಾದ ದೈಹಿಕ ಲಕ್ಷಣಗಳಿಗೆ ಕಾರಣವಾಗಬಹುದು. ಯೋಗದ ಮೂಲಕ ಆಂತರಿಕ ಶಾಂತಿ ಪಡೆಯಬಹುದು. ಆರಂಭದಲ್ಲಿ ದೇಹದಲ್ಲಿ ಒತ್ತಡ ಅಥವಾ ಭೀತಿ ಎಲ್ಲಿದೆ ಎಂಬುದನ್ನು ಗಮನಿಸಿ. ಕಚೇರಿಯ ಬಿಡುವಿನ ವೇಳೆಯಲ್ಲಿ ಬೆನ್ನು, ಕುತ್ತಿಗೆಯನ್ನು ನೇರ ಮಾಡಿ ಚಿನ್ಮುದ್ರೆಯ ಭಂಗಿಯಲ್ಲಿ ಸ್ವಲ್ಪ ಹೊತ್ತು ಉಸಿರನ್ನು ಗಮನಿಸಿ. ಆಮೇಲೆ ಕೈಗಳನ್ನು ಪರಸ್ಪರ ಹೆಣೆದು ಶಿರಸ್ಸಿನ ಮೇಲೆ ಹಾಗೂ ಕೆಳಕ್ಕೆ ಆರು ಬಾರಿ ಮಾಡಿ. ಕುತ್ತಿಗೆ, ಭುಜಗಳ ವ್ಯಾಯಾಮ ಮಾಡಿ. ಆಮೇಲೆ ಸ್ವಲ್ಪ ಹೊತ್ತು ಡೆಸ್ಕ್​ನ ಮೇಲೆ ತಲೆ ಇಟ್ಟು ಒರಗಿ. ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿಸಾಧ್ಯವಾಗುವ ಆಸನಗಳನ್ನು (ಮುಂದಕ್ಕೂ ಹಿಂದಕ್ಕೂ ಬಾಗುವ ಆಸನಗಳು) ಮಾಡಿ. ಕೊನೆಯಲ್ಲಿ ಶವಾಸನ, ಪ್ರಾಣಾಯಾಮ ಮಾಡಿ. ಬೆಳಗ್ಗೆ ಮತ್ತು ಸಂಜೆ ತಲಾ ಹತ್ತು ನಿಮಿಷದ ಧ್ಯಾನ ಮಾಡಿ. ಶರೀರಕ್ಕೆ ಒಳ್ಳೆಯ ಆಹಾರ ನೀಡಿದಂತೆಯೇ ಮನಸ್ಸಿಗೆ ಒಳ್ಳೆಯ ಆಹಾರ ನೀಡಿ. ಕಚೇರಿಯಲ್ಲಿ ಮಧ್ಯ ವಿರಾಮಗಳನ್ನು ತೆಗೆದುಕೊಳ್ಳಿ. ಮೂರು ತಿಂಗಳ ಕಾಲ ಹತ್ತು ನಿಮಿಷ ಪ್ರಾಣಮುದ್ರೆ, ನಲವತ್ತು ನಿಮಿಷ ಚಿನ್ಮುದ್ರೆ ಅಭ್ಯಾಸ ಮಾಡಿ.

    #ನನಗೆ ಒಂಟಿತನ ಕಾಡುತ್ತಿದೆ. ಯೋಗದ ಪರಿಹಾರ ತಿಳಿಸಿ.

    | ವಿಮಲೇಶ್ 42 ವರ್ಷ, ತೀರ್ಥಹಳ್ಳಿ

    ನಿಮ್ಮ ಒಂಟಿತನದ ಭಯದ ಮೂಲವನ್ನು ಗುರುತಿಸಿ. ನಿಮ್ಮ ಒಂಟಿತನವನ್ನು ಎದುರಿಸಲು ಸಿದ್ಧರಿಲ್ಲದಿದ್ದರೆ ಕೆಲವು ಪ್ರಯಾಣಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂಟಿತನವು ಏಕಾಂತತೆಯ ನೆರಳು, ಭಾಗವಾಗಿದೆ. ಕವಿಗಳು ಮತ್ತು ಯೋಗಿಗಳ ಸ್ವಯಂ ಅರಿವು ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಉತ್ತಮ ಪ್ರಯೋಗಾಲಯವಾಗಿದೆ. ನೀವು ಒಂಟಿತನವನ್ನು ಅನುಭವಿಸಲು ಕಲಿಯಿರಿ. ಮುಂಜಾನೆ ಸುಮಾರು 40 ನಿಮಿಷ ಯೋಗ, ಧ್ಯಾನ, ಪ್ರಾಣಾಯಾಮವನ್ನು ಮಾಡಿ. ಇದರಿಂದ ಒಂಟಿತನದ ಸಮಸ್ಯೆ ಸಾಕಷ್ಟು ಪರಿಹಾರವಾಗುತ್ತದೆ. ಆತ್ಮೀಯ ಸ್ನೇಹಿತರಲ್ಲಿ ಮಾತಾಡುತ್ತಿರಿ. ನಿತ್ಯದ ಯೋಗಾಭ್ಯಾಸವು ಅಂಗಾಂಗಗಳ ಸ್ನಾಯುಗಳ ಸಂಕೋಚನಗೊಳ್ಳುವುದು ಮತ್ತು ವಿಶ್ರಾಂತಿಯಲ್ಲಿ ನಿಯಂತ್ರಣದೊಂದಿಗೆ ಉತ್ತೇಜಿಸುತ್ತದೆ. ಫಲಿತವಾಗಿ ಅವುಗಳು ಪರಿಣಾಮಕಾರಿ ಹಾಗೂ ಕೆಲಸದಲ್ಲಿ ಸಮರ್ಥವಾಗುತ್ತವೆ. ತಲಾ ಹದಿನೈದು ನಿಮಿಷ ಚಿನ್ಮುದ್ರೆ, ಹಾಕಿನಿಮುದ್ರೆ ಮತ್ತು ಪ್ರಾಣಮುದ್ರೆ ಮಾಡಿ.

    ನೀವೂ ಪ್ರಶ್ನೆ ಕೇಳಿ

    ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

    ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

    ಇಮೇಲ್: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts