More

    ಮೂರನೇ ದಿನದಾಟಕ್ಕೂ ಮುನ್ನ ಶ್ರೀಕರ್ ಭರತ್​ಗೂ ಕಾದಿತ್ತು ಅಚ್ಚರಿ, ಮೈದಾನಕ್ಕಿಳಿಯಲು ಸಿಕ್ಕ ಸಮಯವೆಷ್ಟು ಗೊತ್ತೇ?

    ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ಮೂರನೇ ದಿನದಾಟದಲ್ಲಿ ಭಾರತ ತಂಡದ ಬದಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದ ಕೆಎಸ್ ಭರತ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, ಕುತ್ತಿಗೆ ನೋವಿನಿಂದಾಗಿ ಮೂರನೇ ದಿನದಾಟಕ್ಕೆ ಮೈದಾನಕ್ಕಿಳಿಯಲಿಲ್ಲ. ಸಾಹ ಬದಲಿಗೆ ಅವಕಾಶ ಪಡೆದ ಶ್ರೀಕರ್ ಭರತ್ 2 ಕ್ಯಾಚ್ ಮತ್ತು 1 ಸ್ಟಂಪಿಂಗ್ ಮೂಲಕ ಗಮನಸೆಳೆದರು. ಅದರಲ್ಲೂ ಭರತ್ ಕಿವೀಸ್ ಆರಂಭಿಕರಾದ ಟಾಮ್ ಲಾಥಮ್ ಸ್ಟಂಪಿಂಗ್ ಮತ್ತು ವಿಲ್ ಯಂಗ್ ಅವರ ಕ್ಯಾಚ್ ಹಿಡಿದಿದ್ದು ಅದ್ಭುತವಾಗಿತ್ತು. ಪ್ರವಾಸಿ ತಂಡದ ಆರಂಭಿಕರಿಬ್ಬರೂ ಶತಕವಂಚಿತರಾಗಲು ಕೆಎಸ್ ಭರತ್ ಕಾರಣರಾದರು. ಇದರ ನಡುವೆ ಕೆಎಸ್ ಭರತ್ ಸ್ವಾರಸ್ಯಕರ ಘಟನೆಯೊಂದನ್ನು ಬಹಿರಂಗ ಪಡಿಸಿದ್ದಾರೆ. ತಂಡ ಮೂರನೇ ದಿನದಾಟಕ್ಕಾಗಿ ಮೈದಾನಕ್ಕಿಳಿಯಲು ಕೇವಲ 12 ನಿಮಿಷ ಬಾಕಿ ಇರುವಾಗ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸುವಂತೆ ಶ್ರೀಕರ್ ಭರತ್‌ಗೆ ಸೂಚಿಸಲಾಯಿತಂತೆ.

    ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಹೆಸರು ಮಾಡಿರುವ ಆಂಧ್ರದ ಶ್ರೀಕರ್ ಭರತ್ ರಾಷ್ಟ್ರೀಯ ತಂಡಕ್ಕೆ ಇನ್ನು ಪದಾರ್ಪಣೆ ಮಾಡಿಲ್ಲ. 37 ವರ್ಷದ ವೃದ್ಧಿಮಾನ್ ಸಾಹ ಕುತ್ತಿಗೆ ನೋವಿನಿಂದ ಬಳಲಿದ ಹಿನ್ನೆಲೆಯಲ್ಲಿ ಕೆಎಸ್ ಭರತ್‌ಗೆ ಗ್ಲೌಸ್ ತೊಟ್ಟು ಮೈದಾನಕ್ಕಿಳಿಯುವ ಅವಕಾಶ ಒದಗಿ ಬಂದಿತು. ‘ಎಂದಿನಂತೆ ಬೆಳಗಿನ ಅವಧಿಯ ತಲೀನನಾಗಿದ್ದೆ, ಬಳಿಕ ಸಹಾಯಕ ಸಿಬ್ಬಂದಿ ನನ್ನ ಬಳಿ ಬಂದು ಪಂದ್ಯಕ್ಕೆ ಅಣಿಯಾಗುವಂತೆ ಸೂಚಿಸಿದರು. ನನಗೆ ಆವಾಗ ಕೇವಲ 12 ನಿಮಿಷವಷ್ಟೇ ಉಳಿದಿದ್ದು, ತಕ್ಷಣವೇ ಮೈದಾನಕ್ಕಿಳಿಯಲು ರೆಡಿಯಾದೆ’ ಎಂದು ಕೆಎಸ್ ಭರತ್ ತಿಳಿಸಿದ್ದಾರೆ. ಸ್ಪಿನ್ ಜೋಡಿ ಅಕ್ಷರ್ ಪಟೇಲ್, ಆರ್.ಅಶ್ವಿನ್ ಅವರ ಸ್ಪಿನ್ ದಾಳಿಯನ್ನು ವಿಕೆಟ್ ಹಿಂದೆ ನಿಂತು ಸಮರ್ಥವಾಗಿ ನಿಭಾಯಿಸಿದರು.

    ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (62ಕ್ಕೆ5) ಹಾಗೂ ಆರ್.ಅಶ್ವಿನ್ (82ಕ್ಕೆ 3) ಮಾರಕ ದಾಳಿ ನೆರವಿನಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 49 ರನ್ ಮುನ್ನಡೆ ಸಾಧಿಸಿದೆ. ಶನಿವಾರ ಬೆಳಗ್ಗೆ ವಿಕೆಟ್ ನಷ್ಟವಿಲ್ಲದೆ 129 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ, ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 142.3 ಓವರ್‌ಗಳಲ್ಲಿ 296 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಅಲ್ಪಮೊತ್ತ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 14 ರನ್ ಪೇರಿಸಿದ್ದು, ಒಟ್ಟಾರೆ 63 ರನ್ ಮುನ್ನಡೆ ಸಾಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts