More

    3 ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಸಹಾಯಧನ ಹಸ್ತಾಂತರ

    ಉಡುಪಿ: ಮುಚ್ಚಿಲಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಮ್ಮ 60ನೇ ವರ್ಷದ ಜನ್ಮನಕ್ಷತ್ರ ಅಂಗವಾಗಿ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನದಡಿ ಉಡುಪಿಯಲ್ಲಿ 3 ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ. ಮೊತ್ತದ ಸಹಾಯಧನದ ಚೆಕ್ ಅನ್ನು ಶಾಸಕ ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದರು.

    ಕಲ್ಯಾಣಪುರ ಗಿರಿಜಾ ಪೂಜಾರಿ, ಹೆರೂರು ಜಲಜ ಶೆಟ್ಟಿ, ಕುಂಜಿಬೆಟ್ಟು ಪ್ರತಿಮಾ ಸಾಲ್ಯಾನ್ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದ್ದು, ಪ್ರತಿ ಮನೆಗೆ ರೂ. 2.5 ಲಕ್ಷದಂತೆ 3 ಮನೆ ನಿರ್ಮಾಣಕ್ಕೆ ಒಟ್ಟು ರೂ. 7.5 ಲಕ್ಷ ಮೌಲ್ಯದ ಚೆಕ್‌ ಹಸ್ತಾಂತರಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ರಾಮ ಮಂದಿರ 2024ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದ್ದು, ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ. ರಾಮಮಂದಿರದ ಜೊತೆಗೆ ರಾಮರಾಜ್ಯ ನಿರ್ಮಾಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ನಾವು ಬದುಕುವ ಜೊತೆಗೆ ಇತರರೂ ಚೆನ್ನಾಗಿ ಬದುಕಬೇಕು ಎಂಬ ಧ್ಯೇಯ ಹೊಂದಿರಬೇಕು. ಇದರಿಂದ ದೇವರು ನೀಡಿದ ಮಾನವ ಜನ್ಮ ಸಾರ್ಥಕವಾಗುತ್ತದೆ. ಸಾರ್ವಜನಿಕರು ತಮ್ಮ ವೃತ್ತಿಯಲ್ಲಿ ಸೇವಾಭಾವವನ್ನು ಬೆಳೆಸಿಕೊಂಡು ಬಡವರಿಗೆ ಸಹಾಯ ಮಾಡಬೇಕು. ಒಳ್ಳೆಯ ಸತ್ಕರ್ಮವನ್ನೇ ದೇವರಿಗೆ ಸಮರ್ಪಣೆ ಮಾಡುವುದು ದೇವರು ಮೆಚ್ಚುವ ಕೆಲಸ ಎಂದು ಶ್ರೀಗಳು ಹೇಳಿದರು.

    ವಿದ್ವಾಂಸ ನಾಗಸಂಪಿಗೆ ರಘೂತ್ತಮ ಆಚಾರ‌್ಯ ಹಾಗೂ ವಿದ್ವಾಂಸ ವೆಂಕಟೇಶ ಆಚಾರ್ಯ ಕುಲಕರ್ಣಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ 60 ಸುವರ್ಣ ಪುಷ್ಪಗಳಿಂದ ಅಭಿಷೇಕ ನೆರವೇರಿಸಿ, ಒಂದು ಲಕ್ಷ ರೂ. ನಿಧಿ ಸಮರ್ಪಿಸಲಾಯಿತು.

    ದ.ಕ. ಮತ್ತು ಉಡುಪಿ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಪ್ರದೀಪಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ, ಪ್ರೊ. ಎಂ. ಬಿ. ಪುರಾಣಿಕ್, ಯಕ್ಷಗಾನ ಅಧ್ಯಕ್ಷ ಗಂಗಾಧರ ರಾವ್, ಕಾರ‌್ಯದರ್ಶಿ ಮುರಳಿ ಕಡೆಕಾರ್ ಮತ್ತು ಉಪಾಧ್ಯಕ್ಷ ಎಸ್. ವಿ. ಭಟ್, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ಉದ್ಯಮಿ ಭುವನೇಂದ್ರ ಕಿದಿಯೂರು, ಹೇಮಂತ ಶೆಟ್ಟಿ, ಹ್ಯಾಂಗ್ಯೋ ಸಂಸ್ಥೆ ನಿರ್ದೇಶಕ ಜಗದೀಶ ಪೈ, ಕೃಷ್ಣ ಮೂರ್ತಿ ಭಟ್, ವಿಷ್ಣು ಆಚಾರ್ಯ ಮೊದಲಾದವರಿದ್ದರು. ಷಣ್ಮುಖ ಹೆಬ್ಬಾರ್ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts