More

    ಮನೆ ಗಣತಿ ಜತೆಗೆ ಎನ್​ಪಿಆರ್

    ವಿಜಯವಾಣಿ ವಿಶೇಷ ಕಾರವಾರ

    2021ರ ಜನಗಣತಿಗೆ ಈಗಲೇ ತಯಾರಿ ನಡೆದಿದೆ. ವಿಸõತ ಗಣತಿಗೂ ಪೂರ್ವಭಾವಿಯಾಗಿ ಇದೇ ಏಪ್ರಿಲ್ 15ರಿಂದ ಮೇ 29 ರವರೆಗೆ ಮನೆಗಳ ಗಣತಿ ನಡೆಯಲಿದೆ. ಜತೆಗೇ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್​ಪಿಆರ್) ಪರಿಷ್ಕರಣೆಯೂ ಪ್ರಾರಂಭವಾಗಲಿರುವುದು ವಿಶೇಷ.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ 12 ತಹಸೀಲ್ದಾರರಿಗೆ ಗ್ರಾಮೀಣ ಭಾಗದ ಜವಾಬ್ದಾರಿ ಹಾಗೂ ಎಲ್ಲ 12 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ನಗರ ಭಾಗದ ಗಣತಿ ಮೇಲುಸ್ತುವಾರಿ ವಹಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣತಿ ಶಾಖೆ ತೆರೆಯಲಾಗಿದ್ದು, ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ.

    ಈಗಾಗಲೇ ತಾಲೂಕು ಹಂತದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇಬ್ಬರನ್ನು ಮಾಸ್ಟರ್ ಟ್ರೇನರ್ ಎಂದು ನಿಯೋಜಿಸಲಾಗಿದೆ. ಮಾ.7ರಂದು ಜಿಲ್ಲಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನಡೆಯಲಿದೆ. ಜಿಲ್ಲೆಯಲ್ಲಿ ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಒಟ್ಟು 3,351 ಗಣತಿದಾರರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಪ್ರತಿ 6 ಜನರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುತ್ತಿದೆ. ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೀಘ್ರದಲ್ಲಿ ತರಬೇತಿ ನಡೆಯಲಿದೆ.

    ಜನಸಂಖ್ಯಾ ನೋಂದಣಿ ಸವಾಲು: ಏಪ್ರಿಲ್ 29ರಿಂದ ಮನೆಗಳ ಗಣತಿಯ ಜತೆಗೆ ಜನಸಂಖ್ಯಾ ನೋಂದಣಿಯನ್ನೂ ಮಾಡಬೇಕಿದೆ. 2010ರಲ್ಲಿ ಜಿಲ್ಲೆಯಲ್ಲಿ ಎನ್​ಪಿಆರ್ ಸಿದ್ಧಪಡಿಸಲಾಗಿದೆ. 2015ರಲ್ಲಿ ಅದಕ್ಕೆ ಆಧಾರ್ ಸಂಖ್ಯೆ ಜೋಡಿಸಲಾಗಿದೆ. ಎನ್​ಪಿಆರ್ ಸಿದ್ಧ ಪುಸ್ತಕವನ್ನಿಟ್ಟುಕೊಂಡು ಅದನ್ನು ಪರಿಷ್ಕರಿಸುವ ಕಾರ್ಯ ಈಗ ನಡೆಯಲಿದೆ. ಆದರೆ, ಎನ್​ಪಿಆರ್ ಕುರಿತು ದೇಶದ ಕೆಲವರಲ್ಲಿ ಆಕ್ಷೇಪ ಎದ್ದಿರುವುದರಿಂದ ಭಟ್ಕಳ ಸೇರಿ ಇತರ ಕೆಲವೆಡೆ ಇದಕ್ಕೆ ವಿರೋಧ ವ್ಯಕ್ತವಾಗುವ ಆತಂಕ ಅಧಿಕಾರಿ ವಲಯದಲ್ಲಿದೆ.

    ಆಪ್ ಮೂಲಕ ಗಣತಿ: ಇದೇ ಮೊದಲ ಬಾರಿಗೆ ಜನಗಣತಿಯ ಕಾರ್ಯ ಸಂಪೂರ್ಣವಾಗಿ ಆಪ್ ಮೂಲಕ ನಡೆಯಲಿದೆ. ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶದ ಮನೆಗಳಿಗೆ ತೆರಳಿದಾಗ ಆಫ್​ಲೈನ್​ನಲ್ಲಿ ದಾಖಲೆಗಳನ್ನು ಭರ್ತಿ ಮಾಡಿ ಕೊಂಡು, ಆನ್​ಲೈನ್​ಗೆ ಬಂದ ನಂತರ ಅದನ್ನು ಅಪ್​ಲೋಡ್ ಮಾಡಬಹುದು. ಇನ್ನು ಗಣತಿದಾರರ ವೇತನ ಪಾವತಿಯನ್ನೂ ಆನ್​ಲೈನ್ ಮೂಲಕವೇ ನೇರವಾಗಿ ಗಣತಿದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ.

    ಜನಗಣತಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಮನೆಗಳನ್ನು ಗುರುತಿಸಿ, ನಕ್ಷೆ ಸಿದ್ಧಪಡಿವ ಕಾರ್ಯ ಈಗ ನಡೆಯಲಿದೆ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲ ತಯಾರಿ ನಡೆಸಿದೆ.

    | ಡಾ. ಹರೀಶ ಕುಮಾರ್, ಜಿಲ್ಲಾಧಿಕಾರಿ, ಉತ್ತರ ಕನ್ನಡ

    2011ರ ಜನಗಣತಿಯ ಹಿನ್ನೋಟ

    • ಜಿಲ್ಲೆಯಲ್ಲಿ 14,37,169 ಜನಸಂಖ್ಯೆ ಗುರುತಿಸಲಾಗಿತ್ತು.
    • ಗ್ರಾಮೀಣ ಭಾಗದಲ್ಲಿ 10,18,188, ಪಟ್ಟಣದಲ್ಲಿ 4,18,981 ಜನಸಂಖ್ಯೆ ಇತ್ತು.
    • ಲಿಂಗಾನುಪಾತ 1 ಸಾವಿರ ಪುರುಷರಿಗೆ 979 ಮಹಿಳೆಯರಿದ್ದರು.
    • ಗ್ರಾಮೀಣ ಭಾಗದಲ್ಲಿ 2,28,887, ನಗರದಲ್ಲಿ 95,643 ಮನೆಗಳಿದ್ದವು.
    • 2011ರಲ್ಲಿ ಜಿಲ್ಲೆಯಲ್ಲಿ 11 ತಾಲೂಕು 11 ನಗರ ಸ್ಥಳೀಯ ಸಂಸ್ಥೆಗಳಿದ್ದವು. ಈಗ 12 ತಾಲೂಕು 12 ನಗರ ಸ್ಥಳೀಯ ಸಂಸ್ಥೆಗಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts