More

    ಅರ್ಹರಿಗೆ ಸೌಲಭ್ಯ ನೀಡುವಲ್ಲಿ ಶೇ.100 ರಷ್ಟು ಗುರಿ ಸಾಧನೆಗೆ ಶ್ರಮಿಸಿ: ಸಚಿವ ಎಚ್.ಕೆ.ಪಾಟೀಲ

    ಗದಗ: ಕಳೆದ ಸೆಪ್ಟೆಂಬರ 30 ರಂದು ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 921 ಅಹವಾಲುಗಳ ಸ್ವೀಕೃತವಾಗಿದ್ದವು. ಈ ಪೈಕಿ ಶೇ. 82.4 ರಷ್ಟು ಅಹವಾಲುಗಳನ್ನು ವಿಲೇ ಮಾಡುವ ಮೂಲಕ ಪ್ರಗತಿ ಸಾಧನೆಯಾಗಿದೆ. ಬಾಕಿ ಇರುವ 162 ಅಹವಾಲುಗಳಿಗೆ ಶೀಘ್ರವೇ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜನತಾ ದರ್ಶನ ಹಾಗೂ ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖಾವಾರು ಜನತಾ ದರ್ಶನದಲ್ಲಿ ಸ್ವೀಕೃತವಾದ ಅಹವಾಲುಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಸಾರ್ವಜನಿಕರಿಗೆ ಸರ್ಕಾರದಿಂದ ಸಹಾಯ ಧನ, ಸೌಲಭ್ಯಗಳು ಸರಿಯಾಗಿ ತಲುಪಬೇಕು. ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಸರಕಾರಿ ಸೇವೆಗಳು ಕಾಲಮಿತಿಯೊಳಗೆ ದೊರಕುವಂತಾಗಬೇಕು ಎಂದು ತಿಳಿಸಿದರು. ಬಾಕಿ ಇರುವ ಅಹವಾಲುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸಾಧ್ಯವಾಗದಿದ್ದಲ್ಲಿ ರಾಜ್ಯ ಮಟ್ಟದ ಇಲಾಖಾ ಮುಖ್ಯಸ್ಥರಿಗೆ ಅಗತ್ಯದ ಪ್ರಸ್ತಾವನೆಗಳನ್ನು ಸಲ್ಲಿಸಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದರು.

    ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಅದರೊಳಗಾಗಿಯೇ ಕಳೆದ ಬಾರಿಯ ಜನತಾದರ್ಶನದಲ್ಲಿ ಸ್ವೀಕೃತವಾದಂತಹ ಅಹವಾಲುಗಳ ಪೈಕಿ ಬಾಕಿ ಇರುವ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ತಿಳಿಸಿದರು.

    ಜನತಾ ದರ್ಶನ ಕಾರ್ಯಕ್ರಮವು ಕಾಟಾಚಾರದ ಕಾರ್ಯಕ್ರಮವಾಗದೇ ಜನರ ಸಮಸ್ಯೆಗೆ ಪರಿಹಾರ ನೀಡುವ ವೇದಿಕೆಯಾಗಬೇಕು. ಸರಕಾರಿ ಸೌಲಭ್ಯಗಳು ಸುಲಭವಾಗಿ ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿ,ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಈ ಕಾರ್ಯದಲ್ಲಿ ಯಾವುದೇ ರೀತಿಯ ಉದಾಸೀನ ಮನೋಭಾವ ಸಹಿಸಲಾಗದು ಎಂದು ಎಚ್ಚರಿಕೆ ನೀಡಿದರು.

    ಇದಕ್ಕೂ ಮುನ್ನ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಪ್ರತಿ ಅರ್ಹರಿಗೂ ತಲುಪಲೇ ಬೇಕು. ಶೇ. 100 ರಷ್ಟು ಗುರಿ ಸಾಧನೆಯನ್ನು ಅಧಿಕಾರಿ ವರ್ಗ ನಿರ್ವಹಿಸಲೇ ಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಪಂಚಗ್ಯಾರಂಟಿಗಳ ಸೌಲಭ್ಯ ಅರ್ಹ ಪ್ರತಿಯೊಬ್ಬರಿಗೂ ಸುಲಭವಾಗಿ ದೊರಕಬೇಕು ಎಂದರು.

    ಪಂಚಗ್ಯಾರಂಟಿಗಳ ಕುರಿತು ವರದಿ ನೀಡುವ ಅಧಿಕಾರಿಗಳು ತಾವು ನೀಡುವ ಅಂಕಿ ಅಂಶಗಳು ವಾಸ್ತವಕ್ಕೆ ಸರಿಯಾಗಿರಬೇಕು. ತಾಂತ್ರಿಕ ಸಮಸ್ಯಗಳಿರುವ ಅರ್ಜಿಗಳಿಗೆ ಪರಿಹಾರ ನೀಡಲು ಅಗತ್ಯದ ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದರು.

    ಗೃಹ ಲಕ್ಷ್ಮೀ ಯೋಜನೆಯಡಿ 475 ಫಲಾನುಭವಿಗಳಿಗೆ ಮಂಜೂರಾತಿ ನೀಡುವದು ಬಾಕಿ ಇದ್ದು ಈ ಪೈಕಿ 384 ಫಲಾನುಭವಿಗಳು ಆದಾಯ ತೆರಿಗೆ ಸಲ್ಲಿಸುವವರಾಗಿರುತ್ತಾರೆ ಹಾಗೂ 38 ಫಲಾನುಭವಿಗಳು ಮೃತರಾಗಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾಹಿತಿ ಒದಗಿಸಿದರು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ 1.41 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಯೋಜನೆ ಆರಂಭದಿಂದ ಜನೇವರಿ 17 ರ ವರೆಗೆ 100 ಕೋಟಿಗೂ ಅಧಿಕ ಪ್ರಯಾಣಿಕರು ಶಕ್ತಿ ಯೋಜನೆ ಪ್ರಯೋಜನೆ ಪಡೆದಿರುತ್ತಾರೆ. 43.30 ಲಕ್ಷ ಸರಾಸರಿ ಪ್ರತಿದಿನದ ಆದಾಯವಾಗಿದೆ ಎಂದು ಗದಗ ವಿಭಾಗೀಯ ಸಾರಿಗೆ ನಿಯಂತ್ರಕರು ಹೇಳಿದರು. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 97.36 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. 4689 ಫಲಾನುಭವಿಗಳ ನೋಂದಣಿ ಬಾಕಿ ಇರುತ್ತದೆ. ಯುವನಿಧಿಯಡಿ 6115 ಅರ್ಹರಿದ್ದು ನೋಂದಣಿ ಕಾರ್ಯ ಆರಂಭವಾಗಿದೆ ಎಂದರು.

    ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ ಅವರು ಗ್ಯಾರಂಟಿ ಯೋಜನೆಗಳು ಶೇ. 100 ರಷ್ಟು ಪ್ರಗತಿಯಾಗಬೇಕು. ಪ್ರಗತಿ ಯಾಗದೇ ಇರುವದಕ್ಕೆ ಕಾರಣವೇನು? ಹಾಗೂ ಶೇ. 100 ರಷ್ಟು ಪ್ರಗತಿ ಹೊಂದಲು ಏನು ಕ್ರಮ ವಹಿಸಿಬೇಕೆಂಬುದರ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳು ಗಮನ ಹರಿಸಬೇಕು ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿಮ್ಸ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts