More

    ವೀರ ಕೆಂಚಪ್ಪ ನಾಯಕ ನಿರ್ಮಿಸಿದ ದ್ರಾವಿಡ ಶೈಲಿ ದೇಗುಲ

    ಹಿರಿಯೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇಗುಲ ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕ್ಷೇತ್ರ.

    ಕ್ರಿ.ಶ.1446ರಲ್ಲಿ ವೀರ ಕೆಂಚಪ್ಪ ನಾಯಕ ದ್ರಾವಿಡ ಶೈಲಿಯಲ್ಲಿ ದೇಗುಲ ನಿರ್ಮಿಸಿದ್ದು, ಗರ್ಭಗುಡಿ ದಕ್ಷಿಣ ಮುಖವಾಗಿದ್ದರಿಂದ ಇದನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಪೂರ್ವಾಭಿಮುಖವಾಗಿರುವ 60 ಅಡಿ ಎತ್ತರದ ರಾಜಗೋಪುರ, ಗರ್ಭಗುಡಿ ಮುಂಭಾಗದಲ್ಲಿರುವ 30 ಅಡಿ ಎತ್ತರದ ಕಲ್ಲಿನ ದೀಪಸ್ತಂಭ ಚಿತ್ತಾಕರ್ಷಕವಾಗಿದೆ. ದೇಗುಲ ಆವರಣದಲ್ಲಿ ಕಾಳಿಕಾಂಬಾ, ಚಂದ್ರಮೌಳೇಶ್ವರ, ಉಮಾಮಹೇಶ್ವರ ದೇವಸ್ಥಾನ, ಗರ್ಭಗುಡಿ ಬದಿಯಲ್ಲಿ ಪಾರ್ವತಿ ಅಮ್ಮನವರ ದೇಗುಲ ಇರುವುದು ಇಲ್ಲಿನ ವಿಶೇಷ.

    ಜಾತ್ರೆ ವಿಶೇಷತೆ: ಪ್ರತಿ ವರ್ಷ ಮಾಘ ಮಾಸದಲ್ಲಿ ನಡೆವ ಜಾತ್ರೋತ್ಸವಕ್ಕೆ 350 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಸ್ಥಳೀಯರು. ಬ್ರಹ್ಮೋತ್ಸವದ ದಿನ ಪ್ರಾತಃ ಕಾಲದಲ್ಲಿ ಮಹಾಭಿಷೇಕದ ತರುವಾಯ ಶಿವಧನಸ್ಸಿಗೆ ಗಂಗಾಸ್ನಾನ ಮಾಡಲಾಗುತ್ತದೆ.

    ಆಕರ್ಷಕ ತೇರು: ಒಂದೇ ದಿನದಲ್ಲಿ ಒಂದೇ ಕಡೆ ಮೂರು ರಥೋತ್ಸವ ಜರುಗುವುದು ಇಲ್ಲಿನ ವಿಶೇಷ. ಮಧ್ಯಾಹ್ನ ತೇರುಮಲ್ಲೇಶ್ವರ ರಥೋತ್ಸವ, ಸಂಜೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವಗಳು ನೆರವೇರುತ್ತವೆ.

    ದೇಗುಲದಲ್ಲಿ ನಿತ್ಯ ಪೂಜೆ: ಅರ್ಚನೆ, ಅಭಿಷೇಕ, ಎಲೆ ಪೂಜೆ, ಎಳನೀರು ಅಭಿಷೇಕ, ಅಷ್ಟೋತ್ತರ, ನಿತ್ಯ ಅಲಂಕಾರ, ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಅಲ್ಲದೆ ಪ್ರತಿ ನಿತ್ಯವೂ ಧಾರ್ಮಿಕ ಕಾರ್ಯಗಳು ಜರುಗುತ್ತವೆ. ಇದು ಬಯಲು ಸೀಮೆ ಜನರ ಆರಾಧ್ಯ ದೈವವಾದ್ದರಿಂದ ನಿತ್ಯ ರಾಜ್ಯದ ವಿವಿಧೆಡೆಯಿಂದ ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

    ಕರ್ಪೂರದಾರತಿ: ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ಧಾರ್ಮಿಕ ಕಾರ್ಯವನ್ನು 600 ವರ್ಷಗಳ ಹಿಂದೆ ಹಿರಿಯೂರು ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರರು ತಮ್ಮ ಭಕ್ತಿ ಮತ್ತು ಶೌರ್ಯದ ಪ್ರತೀಕವಾಗಿ ಕರ್ಪೂರದಾರತಿ ಆಚರಣೆಗೆ ತಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಉತ್ತಮ ಮಳೆ ಬೆಳೆಗಾಗಿ ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಶ್ರೀಸ್ವಾಮಿಗೆ ಕರ್ಪೂರದ ದೀಪ ಹಚ್ಚಿ ಭಕ್ತಿ ಸಮರ್ಪಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಆಚರಣೆಯಲ್ಲಿದೆ. ದೀಪದ ಬೆಳಕು ನಾಲ್ಕೈದು ಕಿ.ಮೀ. ದೂರದವರೆಗೆ ಕಾಣುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts