More

    ಓದಲು ಬೋರು ಎನ್ನುವ ಮಕ್ಕಳಿಗೆ ಇಲ್ಲಿದೆ ಪರಿಹಾರ…

    ಓದಲು ಬೋರು ಎನ್ನುವ ಮಕ್ಕಳಿಗೆ ಇಲ್ಲಿದೆ ಪರಿಹಾರ...‘ಏನ್ ಮಾಡೋದು ಡಾಕ್ಟ್ರೇ. ನನ್ನ ಮಗಳು ಓದಲು ಹೇಳಿದ್ರೆ ಬರೀ ಬೋರ್ ಬರ್ತದೆ ಅಂತಾಳೆ. ಹೀಗಾಗಿ ಅಭ್ಯಾಸ ಮಾಡಿಸೋದೇ ಕಷ್ಟವಾಗಿದೆ. ಮುಂದೆ ಭವಿಷ್ಯ ಹೇಗೆ ಎಂಬ ಚಿಂತೆ ಶುರುವಾಗಿದೆ’ ಎಂದು ಮೊನ್ನೆ ಬಂದ ಮಹಿಳೆಯೊಬ್ಬರು ಆತಂಕ ತೋಡಿಕೊಂಡರು. ಇದು ಒಬ್ಬ ಮಹಿಳೆಯ ಆತಂಕವಲ್ಲ. ಇತ್ತೀಚೆಗೆ ಇದು ಸಾಮಾನ್ಯವಾಗಿದೆ. ಇಂದಿನ ಪೀಳಿಗೆಯ ಬಹುತೇಕ ಮಕ್ಕಳ ಬಾಯಲ್ಲಿ ಬೋರ್ ಎನ್ನುವ ಪದ ಆಗಾಗ ಕೇಳಿ ಬರುತ್ತಿದೆ.

    ನನ್ನ ಬಳಿ ಬಂದ ಮಹಿಳೆ ಹೇಳುವಂತೆ ಅವರ ಮಗಳು ತುಂಬಾನೇ ಚುರುಕು. ಗ್ರಹಿಕೆ ಮತ್ತು ನೆನಪಿನ ಶಕ್ತಿಯೂ ಚೆನ್ನಾಗಿದೆ. ಸಾಮಾನ್ಯ ಜ್ಞಾನವೂ ಉತ್ತಮವಾಗಿದೆ. ಆದರೆ ಶಾಲೆಯ ಪಠ್ಯಪುಸ್ತಕ ಹಿಡಿದಳೆಂದರೆ ಸಾಕು ‘ಅಮ್ಮಾ ಬೋರ್ ಆಗ್ತದೆ. ನಾನು ಓದಲ್ಲ’ ಅಂತಾಳೆ. ಬೈದರೆ ಇಲ್ಲವೇ ಒತ್ತಾಯ ಮಾಡಿದರಷ್ಟೇ ಪುಸ್ತಕ ಕೈಗೆತ್ತಿಕೊಳ್ಳುತ್ತಾಳೆ. ಯಾಂತ್ರಿಕವಾಗಿ ಪುಸ್ತಕ ಹಿಡಿಯುತ್ತಾಳೆ ಹೊರತು ಲಕ್ಷ್ಯಕೊಟ್ಟು ಓದುವುದಿಲ್ಲ. ಪಾಲಕರ ಬೆದರಿಕೆಗೆ ಓದುವ ಜಾಯಮಾನ ರೂಢಿಸಿಕೊಂಡಿದ್ದಾಳೆ. ಹೀಗೆ ಎಷ್ಟು ಅಂತ ಒತ್ತಾಯಪೂರ್ವಕವಾಗಿ ಅಭ್ಯಾಸ ಮಾಡಿಸಲು ಸಾಧ್ಯ? ಮೇಲಾಗಿ ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಪಾಲಕರಿಬ್ಬರೂ ಉದ್ಯೋಗಕ್ಕೆ ಹೋಗುವುದೇ ಜಾಸ್ತಿ. ಬಂದ ಮೇಲೆ ಎಲ್ಲ ಕೆಲಸ ಬಿಟ್ಟು ಇವರನ್ನೇ ಗುರಿಯಾಗಿಸಿ ಓದಿಸುವುದು ಬಹುತೇಕರಿಗೆ ಆಗದ ಮಾತು. ಈ ಸಂದರ್ಭದಲ್ಲಿ ಮಕ್ಕಳು ಓದಿನಿಂದ ವಿಮುಖರಾಗುತ್ತಿದ್ದಾರೆ. ಅವರ ಆಸಕ್ತಿ ಮತ್ತು ಅಭಿರುಚಿ ಬದಲಾಗುತ್ತಿವೆ. ಪರಿಣಾಮ ಶಾಲೆ ಪಠ್ಯ ಪುಸ್ತಕಗಳ ಓದುವಿಕೆ ಕುಂಠಿವಾಗುತ್ತಿದೆ.

    ಇದು ಘರ್ ಘರ್ ಕಿ ಕಹಾನಿಯಾಗಿದೆ. ಅದರಲ್ಲೂ ಚಿಕ್ಕ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪ್ರಾಥಮಿಕ ಶಾಲೆಯ ಹಂತದಲ್ಲಿ ಹುಡುಗು ಬುದ್ಧಿ ಎಂದುಕೊಂಡರೂ ಈ ಬೆಳವಣಿಗೆ ಅವರ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆರೋಗ್ಯದಾಯಕವಲ್ಲ. ಪಠ್ಯೇತರ ಚಟುವಟಿಕೆಗಳೂ ಬೇಕು. ಆದರೆ ಅವುಗಳೇ ಪ್ರಧಾನವಾಗಬಾರದು. ಪಠ್ಯ ಹಾಗೂ ಪಠ್ಯೇತರ ಸಮಪ್ರಮಾಣದಲ್ಲಿದ್ದಾಗ ಸಮತೋಲಿತ ವಿದ್ಯಾಭ್ಯಾಸ ಸುಗಮವಾಗಿ ಸಾಗುತ್ತದೆ. ಆದರೆ ಇಂದು ಇದು ಸಾಧ್ಯವಾಗುತ್ತಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಮನೋವೈದ್ಯರ ಬಳಿ ಬರುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಸಣ್ಣ ವಿಷಯ ಎಂದೆನಿಸಿದರೂ ಮುಂದೆ ಈ ಧೋರಣೆ ಅಥವಾ ಅಭ್ಯಾಸ ಆ ಮಕ್ಕಳ ವ್ಯಕ್ತಿತ್ವಕ್ಕೆ ಪೂರಕವಲ್ಲ್ಲ

    ಹೀಗೆ ಮಕ್ಕಳು ಬೋರ್ ಅಂತ ಹೇಳುತ್ತಿರುವುದು ಬೇಕು ಅಂತಲೇ ಅಲ್ಲ. ಅವರಿಗೂ ದೊಡ್ಡ ದೊಡ್ಡ ಕನಸುಗಳಿರುತ್ತವೆ. ಮಾಧ್ಯಮಗಳಲ್ಲಿ ಸಾಧಕರನ್ನು ನೋಡಿರುತ್ತಾರೆ. ಅವರಂತೆ ತಾನೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಮಹದಾಸೆ ಹೊಂದಿರುತ್ತಾರೆ. ಆದರೆ ಏಕಾಗ್ರತೆಯ ಕೊರತೆಯಿಂದ ಅಥವಾ ಚಂಚಲ ಮನಸ್ಸಿನಿಂದಾಗಿ ಓದಿನಿಂದ ವಿಮುಖರಾಗುತ್ತಿದ್ದಾರೆ. ಟೀವಿಯಲ್ಲೋ ಅಥವಾ ಇನ್ನೆಲ್ಲೋ ಸಾಧಕರ ಯಶೋಗಾಥೆ ನೋಡಿ ಕಷ್ಟ ಪಟ್ಟು ಓದಿದರೆ ತಾನೂ ಅವರಂತೆ ಆಗಬಹುದು ಎನ್ನುವ ಭಾವನೆಯೂ ಅವರಲ್ಲಿ ಬಂದಿರುತ್ತದೆ. ಅದನ್ನು ಸಾಕಾರಗೊಳಿಸುವ ಉತ್ಸಾಹ ಮತ್ತು ತುಡಿತವೂ ಇರುತ್ತದೆ. ಆದರೆ ಅದೇಕೋ ಮತ್ತೆ ಪುಸ್ತಕ ಹಿಡಿದೊಡನೆ ಬೋರ್!. ಹಾಗಂತ ಇದು ತುಂಬಾ ಆತಂಕಕ್ಕೆ ಒಳಗಾಗುವ ವಿಚಾರವಲ್ಲ. ಹಾಗಂತ ಉದಾಸೀನತೆಯೂ ಸಲ್ಲ.

    ಏನು ಮಾಡಬೇಕು?:
    ಮಕ್ಕಳಿಗೆ ಸಮಾಧಾನವಾಗಿ ತಿಳಿಸಿ ಕೊಡಿ. ಶೈಕ್ಷಣಿಕ ಪ್ರಗತಿಯ ಮಹತ್ವದ ಅರಿವು ಮೂಡಿಸಿ. ಉತ್ತಮ ಸಾಧನೆಯ ಫಲಿತಾಂಶ ಎಷ್ಟು ಅವಶ್ಯ ಎಂಬುದನ್ನು ವಿವರಿಸಿ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಒಂದು ಓದಿನ ವೇಳಾಪಟ್ಟಿ ಸಿದ್ಧಗೊಳಿಸಿ. ಅದು ಹೇಗಿರಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಒಂದು ಐದು ನಿಮಿಷ ಧ್ಯಾನ, ಚಿಕ್ಕ ವ್ಯಾಯಾಮ, ನಂತರ ಒಂದು ಅರ್ಧ ಗಂಟೆ ಓದು. ನಂತರ ಸ್ನಾನ , ಉಪಾಹಾರ ಮುಗಿಸಿ ಶಾಲೆಗೆ ಹೋಗುವುದು.

    ಸಂಜೆ ಶಾಲೆಯಿಂದ ಬಂದ ನಂತರ ಒಂದಿಷ್ಟು ತಿಂಡಿ ತಿಂದು ನಂತರ ಆಟ. ಅದಾದ ಮೇಲೆ ಹೋಂ ವರ್ಕ್ ಮಾಡುವುದು. ಸ್ವಲ್ಪ ಹೊತ್ತು ಮನರಂಜನೆಗಾಗಿ ಟಿವಿ ನೋಡುವುದು. ಮತ್ತೆ ಊಟ. ಸಾಧ್ಯವಾದರೆ ನಿದ್ದೆ ಬರುವವರೆಗೆ ಓದುವುದು. ಹೀಗೆ ನಿಯಮಿತವಾದ ವೇಳಾಪಟ್ಟಿ ರೂಢಿ ಮಾಡಿದರೆ ಯಾವುದೂ ಬೋರ್ ಎನಿಸುವುದಿಲ್ಲ. ರಜೆ ಅಥವಾ ವಾರಾಂತ್ಯಕ್ಕೆ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ. ಪ್ರಕೃತಿ ವಿಸ್ಮಯಗಳನ್ನು ಪರಿಚಯಿಸಿಕೊಡಿ. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಓದಲು ಹುರುಪು ಬರುತ್ತದೆ. ಹೀಗೆ ಹೇಳಿದ ಎಲ್ಲ ಕ್ರಮ ಅನುಸರಿಸಿದರೆ ಬೋರ್ ನಿಂದ ಹೊರ ಬರಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts