More

    ಧಾರಾಕಾರ ಮಳೆ, ಸಂಚಾರ ಅಸ್ತವ್ಯಸ್ತ: ಕೊಚ್ಚಿಹೋದ ವಾಹನಗಳು

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಜನರು ಸಂಚಾರಕ್ಕೆ ಪರದಾಡುವಂತಾಯಿತು.ಜಿಲ್ಲಾ ಕೇಂದ್ರದಲ್ಲಿನ ಹೊಸ ಖಾಸಗಿ ಬಸ್​ ನಿಲ್ದಾಣ, ದರ್ಗಾ ಮೊಹಲ್ಲಾ ವೃತ್ತ ಸೇರಿ ಚರಂಡಿಗಳಲ್ಲಿನ ಕೊಳಚೆ ನೀರು ಮಳೆಯ ಹಿನ್ನೆಲೆಯಲ್ಲಿ ರಸ್ತೆಯ ಮಟ್ಟಕ್ಕೆ ಹರಿಯಿತು. ಗೌರಿ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಸೇರಿ ಬೀದಿಬದಿಯಲ್ಲಿ ಚಿಲ್ಲರೆ ಅಂಗಡಿಗಳು ತಲೆ ಎತ್ತಿದ್ದು ಜಲಾವೃತದಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು. ಇದೇ ಆಕ್ರೋಶದಲ್ಲಿ ಜನರು ವರುಣರಾಯನಿಗೆ, ಸರಾಗವಾಗಿ ಚರಂಡಿ ವ್ಯವಸ್ಥೆ ನಿರ್ವಹಣೆಯಲ್ಲಿ ವಿಫಲವಾಗಿರುವ ನಗರಸಭೆಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದರು.


    ರಾತ್ರಿ 8 ಗಂಟೆ ಸಮಯದಲ್ಲಿ ಆರ್ಭಟವನ್ನು ಪ್ರಾರಂಭಿಸಿದ ಮಳೆಯು ಒಂದೂವರೆ ಗಂಟೆ ಕಾಲ ನಿರಂತರವಾಗಿ ಬಿದ್ದಿತ್ತು. ಇದರಿಂದ ಉಂಟಾದ ಆವಾಂತರಗಳಿಗೆ ಜನರು ತೊಂದರೆ ಅನುಭವಿಸಬೇಕಾಯಿತು. ತಗ್ಗು ಪ್ರದೇಶಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿತು. ಇನ್ನು ಮಂಚನಬಲೆ, ಕಂದವಾರ, ದಿಬ್ಬೂರು, ಮಂಡಿಕಲ್​ ಸೇರಿದಂತೆ ವಿವಿಧೆಡೆ ತೋಟಗಳು ಜಲಾವೃತಗೊಂಡು ಬೆಳೆ ಹಾನಿಯ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದಾರೆ.

    ಕೊಚ್ಚಿ ಹೋದ ವಾಹನಗಳು: ಗೌರಿಬಿದನೂರು ತಾಲೂಕಿನ ಮೇಳ್ಯಾ ಕೆರೆ ಕೋಡಿ ಹರಿಯುತ್ತಿದ್ದು ಮೇಳ್ಯಾ ಹಾಗೂ ಜಗರೆಡ್ಡಿಹಳ್ಳಿ ಮಾರ್ಗದ ರಸ್ತೆಯ ಮೇಲೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಇದರ ನಡುವೆ ರಸ್ತೆ ದಾಟುವ ಸಾಹಸ ಮೆರೆಯಲು ಹೋದ ಟ್ರಾ$್ಯಕ್ಟರ್​ ಸಮೇತ ಚಾಲಕ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅದೃಷ್ಟವಶಾತ್​ ಟ್ರಾಕ್ಟರ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈಜಿ ದಡಕ್ಕೆ ಬಂದು ಜೀವ ಉಳಿಸಿಕೊಂಡಿದ್ದಾನೆ. ಇದರ ಜತೆಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ಕೊಚ್ಚಿಕೊಂಡು ಹೋಗಿದ್ದರು. ಸ್ಥಳಿಯ ಗ್ರಾಮಸ್ಥರ ಸಮಯಪ್ರೆಗೆ ನೀರಿನಿಂದ ಹೊರ ಬಂದು, ಬಚಾವ್​ ಆಗಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿ ಹೋಗಿದ್ದ ಟ್ರಾಕ್ಟರ್​ ಮತ್ತು ಬೈಕ್​ಗಳನ್ನು ನೀರಿನಿಂದ ಮೇಲಕ್ಕೆತ್ತಲು ದೊಡ್ಡ ಹರಸಾಹಸ ಮಾಡಬೇಕಾಯಿತು.

    ಎಚ್ಚರಿಕೆಯ ಕಡೆಗಣನೆ: ನೀರಿನಿಂದ ಸಂಪೂರ್ಣವಾಗಿ ಮುಳುಗಿರುವ ಮೇಳ್ಯಾ ಹಾಗೂ ಜಗರೆಡ್ಡಿಹಳ್ಳಿ ಮಾರ್ಗದ ರಸ್ತೆ, ಪೆರೇಸಂದ್ರ&ಗುಡಿಬಂಡೆ ರಸ್ತೆ, ಗುಂಗಿರ್ಲಹಳ್ಳಿ&ಜಕ್ಕಲಮಡಗು ಜಲಾಶಯ ರಸ್ತೆಯಲ್ಲಿ ಸಂಚರಿಸದಂತೆ ಎಚ್ಚರಿಕೆ ನಾಮಫಲಕಗಳನ್ನು ಹಾಕಿದ್ದರೂ ಹಲವರು ಪ್ರಾಣವನ್ನು ಲೆಕ್ಕಿಸದೇ ಅಪಾಯಕಾರಿ ಮಾರ್ಗದಲ್ಲಿ ಹೋಗುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್​ ಇಲಾಖೆಯ ಮತ್ತಷ್ಟು ನಿರ್ದಾಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮೇಳ್ಯಾ ಹಾಗೂ ಜಗರೆಡ್ಡಿಹಳ್ಳಿ ಮಾರ್ಗದ ರಸ್ತೆ, ಅಮಾನಿ ಭೈರಸಾಗರ ಕೆರೆಯ ನೀರು ರಭಸವಾಗಿ ಹರಿಯುತ್ತಿರುವ ಪೆರೇಸಂದ್ರ&ಗುಡಿಬಂಡೆ ರಸ್ತೆಯಲ್ಲಿ ಅಡ್ಡಲಾಗಿ ಬ್ಯಾರಿಕೇಟ್​ ಹಾಕಿ, ವಾಹನಗಳ ಸಂಚಾರ ಬಂದ್​ ಮಾಡಿಸಬೇಕು. ನೀರಿನ ಹರಿವಿನ ರಭಸ ತಿಳಿಯದೇ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಇನ್ನು ಕಳೆದ ಬಾರಿ ಮಳೆಗೆ ಮೇಳ್ಯಾ ಗ್ರಾಮದ ಕೆರೆಯ ಕಟ್ಟೆ ಒಡೆದು ಹೋಗಿತ್ತು. ಇದಕ್ಕೆ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗಿದೆ. ಇದೀಗ ಇಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆ ಆಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts