More

    ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಮಕ್ಮಲ್ ಟೋಪಿ

    ಮೈಸೂರು: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಕಿಡಿಕಾರಿದರು.


    ನಗರದ ಅಗ್ರಹಾರ ವೃತ್ತದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಮತಪ್ರಚಾರ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಜನರಿಗೆ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಜತೆಗೆ, ಒಂದು ಲಕ್ಷ ಕೋಟಿ ರೂ. ಸಾಲದ ಹೊರೆಯನ್ನೂ ಹೊರಿಸಿದೆ ಎಂದು ಆರೋಪಿಸಿದರು.


    ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ತಿರುಗಾಡುತ್ತಿದ್ದರೆ, ಅವರ ಗಂಡಂದಿರು ಶೇ.30ರಷ್ಟು ಹೆಚ್ಚಿನ ದರ ಕೊಟ್ಟು ಓಡುವಂತಾಗಿದೆ. ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಿ, ಇತರ ವಿದ್ಯುತ್ ಬಿಲ್‌ಗಳನ್ನು ದುಪ್ಪಟ್ಟು ಮಾಡಿ ಬರೆ ಹಾಕಲಾಗಿದೆ. ವರ್ತಕರ, ವ್ಯಾಪಾರಸ್ಥರ ಅಂಗಡಿಗಳ ಮಾಸಿಕ ವಿದ್ಯುತ್ ಬಿಲ್ 3,000 ರೂ.ದಿಂದ 10 ಸಾವಿರ ರೂ. ಏರಿಕೆಯಾಗಿದೆ. ಎಲ್ಲ ರೀತಿ ವಿದ್ಯಾರ್ಥಿ ವೇತನವೂ ಸ್ಥಗಿತವಾಗಿದೆ ಎಂದು ದೂರಿದರು.


    ರೈತರಿಗೆ ನೀಡಬೇಕಿರುವ ಹೈನುಗಾರಿಕೆಯ ಪೋತ್ಸಾಹಧನ 680 ಕೋಟಿ ರೂ.ಬಾಕಿ ಉಳಿಸಿಕೊಳ್ಳಲಾಗಿದೆ. ಉಪ ನೋಂದಣಿ ಕಚೇರಿಯ ಎಲ್ಲ ಶುಲ್ಕವೂ ಶೇ.80ರಷ್ಟು ಹೆಚ್ಚಾಗಿದೆ. ಹಾಲಿನ ದರ ಸಹ ಏರಿಕೆಯಾಗಿದೆ. ಹೀಗೆ ವಿವಿಧ ವಸ್ತುಗಳ ದರವನ್ನು ಹೆಚ್ಚಿಸುವ ಮೂಲಕ ಜನರಿಗೆ ಆರ್ಥಿಕ ಬರೆ ಹಾಕಿದೆ ಎಂದು ಆರೋಪಿಸಿದರು.


    ನರೇಂದ್ರ ಮೋದಿ ಅವರ 10 ವರ್ಷದ ಅಧಿಕಾರಾವಧಿಯಲ್ಲಿ ರಾಹುಲ್ ಗಾಂಧಿ ಅವರು ಷೇರು, ಮ್ಯೂಚುಯಲ್ ಫಂಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿ ಸದ್ದಿಲ್ಲದೆ ಲಾಭ ಮಾಡಿಕೊಂಡಿದ್ದಾರೆ. ಆದಾಗ್ಯೂ ದೇಶ ಆರ್ಥಿಕ ದಿವಾಳಿಯಾಗಿದೆ. ಆರ್ಥಿಕ ನಷ್ಟವಾಗಿದೆ ಎಂದು ಮೋದಿ ವಿರುದ್ಧವೇ ಆರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹರಿಹಾಯ್ದರು.


    ಮನಮೋಹನ್ ಸಿಂಗ್ ಸರ್ಕಾರ ಅವಧಿಯಲ್ಲಿ ಈ ರೀತಿ ಹೂಡಿಕೆ ಮಾಡಲು ಅವರಿಗೆ ನಷ್ಟದ ಭಯವಿತ್ತು. ಆದರೆ, ಮೋದಿ ಅವಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಧೈರ್ಯ ಬಂದಿದೆ. ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ನಾಮಪತ್ರದೊಂದಿಗೆ ಅಫಿಡವಿಟ್‌ನಲ್ಲೇ ಇರುವ ಹೂಡಿಕೆಯ ಮಾಹಿತಿಯೇ ಇದಕ್ಕೆ ಸಾಕ್ಷಿ ಎಂದರು.


    ರಾಜ್ಯದಲ್ಲಿ ಬಿಜೆಪಿಯ ಉತ್ಸಾಹ ಕಂಡು ಕಾಂಗ್ರೆಸ್‌ಗೆ ದಿಗಿಲು ಉಂಟಾಗಿದೆ. ಬಿಜೆಪಿ-ಜೆಡಿಎಸ್ ಒಂದಾಗುವ ಮೂಲಕ ರಾಜ್ಯದಲ್ಲಿರುವ 28 ಲೋಕಸಭಾ ಸ್ಥಾನಕ್ಕೆ 28 ಗೆದ್ದು ಹೊಸ ದಾಖಲೆ ನಿರ್ಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ಮಾಜಿ ಮೇಯರ್ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್ ಇನ್ನಿತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts