More

    ಸವಲತ್ತು ಪಡೆದು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಿ

    ಹನೂರು: ರೈತರು ಕೃಷಿ ಹಾಗೂ ಇತರ ಇಲಾಖೆಗಳಿಂದ ದೊರಕುವ ಸವಲತ್ತುಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.

    ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನಕ್ಕೆ ರಾಗಿ ರಾಶಿಗೆ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಹಲವು ಯೋಜನೆಗಳ ಮೂಲಕ ಸವಲತ್ತುಗಳನ್ನು ಒದಗಿಸುತ್ತಿದೆ. ಅಲ್ಲದೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆಯನ್ನು ಹೆಚ್ಚಿಸುವ ತಾಂತ್ರಿಕತೆಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ನೇರವಾಗಿ ರೈತರು ಸಂವಾದ ನಡೆಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ಸಮಗ್ರ ಕೃಷಿ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದರು.

    ಈ ಅಭಿಯಾನದಲ್ಲಿ ಬಿತ್ತನೆ ಬೀಜಗಳ ಹೊಸ ತಳಿಗಳು ಹಾಗೂ ಆಧುನಿಕ ಯಂತ್ರಗಳ ಬಗ್ಗೆಯೂ ರೈತರಿಗೆ ಮಾಹಿತಿ ಒದಗಿಸಲಾಗುತ್ತದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಬೆಳೆಯ ಇಳುವರಿಯಲ್ಲಿ ಮಣ್ಣಿನ ಫಲವತ್ತತೆ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ರೈತರು ಕಾಲಕಾಲಕ್ಕೆ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಪೋಷಕಾಂಶ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಅರಿತು ಬೆಳೆಗಳನ್ನು ಬೆಳೆಯಬೇಕು ಎಂದರು.

    ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ: ರೈತರ ಬೆಳೆಗೆ ನಿಗದಿತ ಬೆಲೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸರ್ಕಾರದಿಂದ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯನ್ನು ಸೂಕ್ತ ಸಂದರ್ಭಗಳಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹಲವಾರು ಬಾರಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು, ಮುಂದಿನ ವಿಧಾನಸಭೆಯಲ್ಲಿಯೂ ಈ ಬಗ್ಗೆ ಧ್ವನಿಯೆತ್ತಿ ಗರಿಷ್ಠ ಬೆಂಬಲ ಬೆಲೆ, ಖರೀದಿ ಕೇಂದ್ರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

    ಕೃಷಿ ಇಲಾಖೆಯ ಉಪ ನಿರ್ದೇಶಕ ಮುತ್ತುರಾಜು ಮಾತನಾಡಿ, ಮನುಷ್ಯನ ಆರೋಗ್ಯವನ್ನು ವೃದ್ಧಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಈ ಬೆಳಗೆ ಪ್ರತಿ ಎಕರೆಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

    ವಸ್ತುಪ್ರದರ್ಶನ: ಕೃಷಿ ಉಪಕರಣಗಳು, ಬಿತ್ತನೆ ಬೀಜದ ತಳಿಗಳ ಮಳಿಗೆಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ. ರೈತರಿಗೆ ಅಗತ್ಯ ಮಾಹಿತಿ ನೀಡಲಾಯಿತು. ತಾಪಂ ಸದಸ್ಯ ಜವಾದ್ ಅಹಮ್ಮದ್, ಪಪಂ ಸದಸ್ಯರಾದ ಮುಮ್ತಾಜ್ ಬೇಗಂ, ಗಿರೀಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ಕೃಷಿ ಅಧಿಕಾರಿಗಳಾದ ರಘುವೀರ್, ಧರ್ಮೇಂದ್ರ, ಕೃಷಿ ವಿಜ್ಞಾನಿ ಹಂಪಣ್ಣಗೌಂಡರ್, ಪ್ರಗತಿಪರ ರೈತರಾದ ಮುರುಡೇಶ್ವರಸ್ವಾಮಿ, ಜಯಸುಂದರ್‌ನಾಯ್ಡು, ರಾಜಶೇಖರ್ ಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts