More

    ಗ್ರಾ.ಪಂ. ನೌಕರರಿಗೆ ವೇತನ ವಿಳಂಬ

    ಮಡಿಕೇರಿ:

    ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಕೆಳ ಹಂತದ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಮೊದಲೇ ಸಂಬಳ ಕಡಿಮೆ ಅಂಥದರಲ್ಲಿ ತಡವಾಗಿ ಕೊಡುವುದರಿಂದ ತಿಂಗಳ ಖರ್ಚು ಸರಿದೂಗಿಸಲು ಕಷ್ಟ ಆಗುತ್ತಿದೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅನುಮೋದಿತ ನೌಕರರಿಗೆ ನೇರವಾಗಿ ಸರ್ಕಾರದಿಂದ ವೇತನ ಬರುವುದರಿಂದ ಸಮಸ್ಯೆ ಇಲ್ಲ. ಆದರೆ ಪಂಚಾಯಿತಿಗಳಲ್ಲಿ ನೇಮಕವಾಗಿರುವ ಹೆಚ್ಚುವರಿ ನೌಕರರಿಗೆ ಈ ತೊಂದರೆ ಆಗುತ್ತಿದೆ

    ಸ್ಥಳೀಯ ಪ್ರಾಧಿಕಾರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಂಜೂರಾದ ಹುದ್ದೆಗಳಿಗೆ ನಿಯಮದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇವರಿಗೆಲ್ಲಾ ಸರ್ಕಾರದಿಂದಲೇ ನೇರವಾಗಿ ವೇತನ ಪಾವತಿಯಾಗುವುದರಿಂದ ಪ್ರತಿ ತಿಂಗಳೂ ೫ನೇ ತಾರೀಕಿನ ಒಳಗೆ ಖಾತೆಗೆ ಹಣ ಸೇರುತ್ತದೆ. ಆದರೆ ಹೆಚ್ಚುವರಿಯಾಗಿ ನೇಮಕವಾಗಿರುವ ಕೆಳ ಹಂತದ ನೌಕರರಿಗೆ ಪಂಚಾಯಿತಿಗಳು ಸ್ಥಳೀಯ ಸಂಪನ್ಮೂಲದಿಂದಲೇ ವೇತನ ಕೊಡುವ ಅನಿವಾರ್ಯತೆ ಇದೆ. ಚಿಕ್ಕ ಪಂಚಾಯಿತಿಗಳಲ್ಲಿ ಸಂಪನ್ಮೂಲ ಕ್ರೋಢೀಕರ ಕಷ್ಟವಾಗಿರುವುದರಿಂದ ವೇತನ ತಡವಾದರೆ ದೊಡ್ಡ ಪಂಚಾಯಿತಿಗಳಲ್ಲಿ ಪಿಡಿಒ, ಅಧ್ಯಕ್ಷರ ಮರ್ಜಿ ಅವಲಂಬಿಸಿರುತ್ತದೆ.

    ಬಹುತೇಕ ಪಂಚಾಯಿತಿಗಳಲ್ಲಿ ವಾಟರ್‌ಮೆನ್ ಮತ್ತು ಸ್ವಚ್ಛತಾ ಕೆಲಸಗಾರರು ಪ್ರತಿ ತಿಂಗಳು ಕೂಡ ನಿಗದಿತ ದಿನಾಂಕದಂದು ವೇತನ ಸಿಗದೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಇವರಿಗೆ ಕೊಡದೆ ವಂಚಿಸುವುದು ಒಂದೆಡೆಯಾದರೆ ಅರ್ಧ ತಿಂಗಳು ಕಳೆದ ಮೇಲೆ ಸಂಬಳ ನೀಡುವುದು ಸಾಮಾನ್ಯ ಎಂಬಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ದೈನಂದಿನ ಖರ್ಚು, ಆಸ್ಪತ್ರೆ ವೆಚ್ಚ ಸೇರಿದಂತೆ ವಿವಿಧ ಬಗೆಯ ಖರ್ಚುಗಳಿಗಾಗಿ ಸ್ವಸಹಾಯ ಸಂಘಗಳು, ಚಿಕ್ಕಪುಟ್ಟ ಲೇವಾದೇವಿಗಾರರು ಮತ್ತಿತರ ಕಡೆಗಳಲ್ಲಿ ಸಾಲ ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ವಾರದಲ್ಲಿ ಸಾಲದ ಕಂತು ಪಾವತಿಸದಿದ್ದರೆ ಬೇರೆ ಬೇರೆ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

    ಸರ್ಕಾರದಿಂದ ನೇರವಾಗಿ ವೇತನ ಪಡೆಯುವ ಅನುಮೋದಿತ ನೌಕರರಿಗೆ ಸಿಗುವಂತೆ ಪ್ರತಿ ತಿಂಗಳ ೫ನೇ ತಾರೀಕಿನ ಒಳಗೆ ತಮಗೂ ವೇತನ ಕೊಡಿ ಎಂದು ವಾಟರ್‌ಮೆನ್ ಮತ್ತು ಸ್ವಚ್ಛತಾ ಕೆಲಸಗಾರರು ಸಾಕಷ್ಟು ಬಾರಿ ಸಂಬಂಧಿಸಿದವರ ಗಮನ ಸೆಳೆದಿದ್ದಾರೆ. ತಮ್ಮ ಸಂಘಟನೆಗಳ ಮೂಲಕ ಹೋರಾಟವನ್ನೂ ಮಾಡಿದ್ದಾರೆ. ಬೆಂಗಳೂರಿಗೆ ತೆರಳಿ ಪ್ರತಿಭಟನೆಯನ್ನೂ ಮಾಡಿದ್ದಾರೆ. ಆಗ ಸಿಕ್ಕಿದ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿದೆ. ಈಗಲೂ ಕೂಡ ಪ್ರತಿ ತಿಂಗಳು ೧೫ನೇ ತಾರೀಕಿನ ನಂತರವಷ್ಟೇ ವೇತನ ಗ್ರಾಮ ಪಂಚಾಯಿತಿ ಕೆಳಹಂತದ ನೌಕರರ ಕೈ ಸೇರುತ್ತಿದೆ. ಆದರೆ ಇಂತಹದ್ದೇ ನಿಗದಿತ ದಿನದಂದು ವೇತನ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

    ಉತ್ತಮ ಆದಾಯ ಇರುವ ಕೆಲವು ದೊಡ್ಡ ಪಂಚಾಯಿತಿಗಳಲ್ಲಿ ನೌಕರರಿಗೆ ವೇತನ ಕೊಡಲು ಖಾತೆಯಲ್ಲಿ ಹಣವಿದ್ದರೂ ವೇತನ ನೀಡದೆ ವಿನಾ ಕಾರಣ ಕಾಯಿಸಲಾಗುತ್ತದೆ ಎನ್ನುವ ಆರೋಪವೂ ಇದೆ. ಪಿಡಿಒ ಅಥವಾ ಅಧ್ಯಕ್ಷರಿಗೆ ಹತ್ತಿರವಾಗಿ ಇರುವವರಿಗೆ ಬೇಗ ವೇತನ ಕೊಡುವುದು, ಯಾವುದಾದರು ಕಾರಣಕ್ಕೆ ಸ್ವಲ್ಪ ಎದುರು ಹಾಕಿಕೊಂಡರೂ ಸಕಾಲದಲ್ಲಿ ವೇತನ ಕೊಡದೆ ಸತಾಯಿಸುವುದು, ಕೆಲಸದಲ್ಲಿ ಲೋಪ ಹುಡುಕು ಸಂಬಳಕ್ಕೆ ಕತ್ತರಿ ಹಾಕುವುದು ಕೂಡ ನಡೆಯುತ್ತದೆ ಎಂದು ಕೆಲವು ಕೆಳಹಂತದ ನೌಕರರು ಆರೋಪಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts