More

    ಶೈಕ್ಷಣಿಕ ಸಾಧನೆಯಿಂದ ಭವಿಷ್ಯ ಉಜ್ವಲ

    ಬ್ಯಾಡಗಿ: ಶಿಕ್ಷಣ ವಿಶ್ವವ್ಯಾಪಿ ವಿಸ್ತಾರ ಪಡೆದಿದ್ದು, ಹೊರದೇಶಗಳಲ್ಲಿಯೂ ವಿದ್ಯಾರ್ಥಿಗಳು ತಾಂತ್ರಿಕ, ವೈದ್ಯಕೀಯ ಸೇರಿದಂತೆ ಹತ್ತಾರು ಕೋರ್ಸ್ ಕಲಿಯಲು ಅವಕಾಶ ನೀಡಲಾಗಿದ್ದು, ಶಿಕ್ಷಣದ ಹರಿವಿನ ಜತೆ ಪಾಲಕರು, ಶಿಕ್ಷಣ ಪಡೆಯುವರು ಮುಖ ಮಾಡಬೇಕಿದೆ ಎಂದು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

    ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕವಿವಿ ಪ್ರಸಾರಾಂಗ ಧಾರವಾಡ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ 526ನೇ ವ್ಯಾಸಂಗ ವಿಸ್ತರಣಾ ಉಪನ್ಯಾಸ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಕಳೆದ ಎರಡು ದಶಕಗಳ ಹಿಂದೆ ಪಟ್ಟಣದಲ್ಲಿ ಶಾಲಾ-ಕಾಲೇಜ್ ತೆರೆದ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು, ಉನ್ನತ ಸ್ಥಾನದಲ್ಲಿದ್ದಾರೆ. ಬಡವರು, ಹಿಂದುಳಿದವರು ಹೆಚ್ಚಿನ ಶಿಕ್ಷಣ ಪಡೆದಲ್ಲಿ ನಿರೀಕ್ಷಿತ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸುತ್ತಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಲುವಾಗಿ ನರ್ಸರಿಯಿಂದ ಹಿಡಿದು ಪದವಿ ಹಂತದವರೆಗೂ ಕಾಲೇಜ್ ಆರಂಭಿಸಿದ್ದೇವೆ ಎಂದರು.

    ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮೂಲಕ ತಮ್ಮ ಭವಿಷ್ಯ ಉಜ್ವಲವಾಗಿಸಿಕೊಳ್ಳಬೇಕಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ತಾಂತ್ರಿಕತೆ ಹಾಗೂ ಹೊಸ ಶಿಕ್ಷಣ ನೀತಿ-ನಿಯಮ ಅರಿತು ವಿದ್ಯಾರ್ಥಿಗಳು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು.ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಸಮಯ ವ್ಯರ್ಥಮಾಡದೆ, ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು.

    ಕವಿವಿ ಪ್ರಸಾರಾಂಗ ವಿಭಾಗದ ನಿರ್ದೇಶಕ ಸಿದ್ದಪ್ಪ ಎನ್. ಮಾತನಾಡಿ, ಕವಿವಿ ಕಾಲೇಜ್ ಶಿಕ್ಷಣ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳು ಪರಿವರ್ತನೆಯಾಗಬೇಕು. ಪೈಪೋಟಿ ಜಗತ್ತಿನ ಓಟದಲ್ಲಿ ನಾವಿದ್ದು, ನಿತ್ಯದ ಕಲಿಕೆ ವೇಗ ಪಡೆಯಬೇಕಿದೆ. ಕವಿವಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ತರಬೇತಿ ಕೋರ್ಸ್‌ಗಳನ್ನು ಆರಂಭಿಸಿದೆ. ಯಾವುದೇ ವಿಷಯ ಕಲಿಯಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳು ನೂತನ ಮಾಹಿತಿ ಪಡೆಯುವುದು ಮುಖ್ಯವಾಗಿದೆ. ಇದಕ್ಕಾಗಿ ಕಾಲೇಜುಗಳಲ್ಲಿ ಆಗಾಗ ಇಂತಹ ಶಿಬಿರ ಹಾಗೂ ವಿಶೇಷ ತಿಳಿವಳಿಕೆ, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

    ಡಾ.ಚಂದ್ರಶೇಖರ ರೊಟ್ಟಿಗವಾಡ, ಬಿಇಎಸ್ ಸಂಸ್ಥೆಯ ಉಪಾಧ್ಯಕ್ಷ ಶೇಖರಗೌಡ್ರ ಪಾಟೀಲ, ಎಂ.ಸಿ. ಜೋಷಿ, ಡಾ.ಎಸ್.ಎನ್.ನಿಡಗುಂದಿ, ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ, ಜಗದೀಶ ಹೊಸಮನಿ, ಅಜಯಕುಮಾರ ಯಾದವ, ಡಾ.ಎಸ್.ಪಿ. ಪಾಂಗಿ ಡಾ.ಎ.ಎಸ್. ರಶ್ಮಿ, ಪ್ರೇಮಾನಂದ ಲಕ್ಕಣ್ಣನವರ, ಉಪನ್ಯಾಸಕ ನಿಂಗರಾಜ ಕುಡುಪಲಿ, ಪ್ರಶಾಂತ್ ಜಂಗಳೇರ, ಎನ್.ಎಸ್. ಪ್ರಶಾಂತ, ಐಶ್ವರ್ಯ ಮುಚ್ಚಟ್ಟಿ, ನಿವೇದಿತ ವಾಲಿಶೆಟ್ಟರ ಕವಿತಾ ಮಾಸಣಗಿ, ಡಾ. ಪ್ರಭುಲಿಂಗ ದೊಡ್ಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts