More

    ಇಂದಿನಿಂದ ತರಕಾರಿ ಮಾರುಕಟ್ಟೆ ಪಿ.ಬಿ. ರಸ್ತೆಯಲ್ಲಿ

    ರಾಣೆಬೆನ್ನೂರ: ನಗರದ ವಿವಿಧೆಡೆ ಇದ್ದ ತರಕಾರಿ ಮಾರುಕಟ್ಟೆಯನ್ನು ಕೆಇಬಿ ಗಣೇಶ ದೇವಸ್ಥಾನದ ಬಳಿಯ ಪಿ.ಬಿ. ರಸ್ತೆಗೆ ವರ್ಗಾವಣೆ ಮಾಡಲಾಗಿದ್ದು, ತರಕಾರಿ ವ್ಯಾಪಾರಸ್ಥರು ಮಂಗಳವಾರದಿಂದ ಇಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.

    ಸೋಮವಾರ ಪಿ.ಬಿ. ರಸ್ತೆಯುದ್ದಕ್ಕೂ ಅಳವಡಿಸಲಾದ ಬಾಕ್ಸ್​ಗಳನ್ನು ಪರಿಶೀಲಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ಕೊರನಾ ಸೋಂಕು ತಡೆಯುವ ಉದ್ದೇಶದಿಂದ ಲಾಕ್​ಡೌನ್ ಘೊಷಿಸಲಾಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದರು.

    ನಗರದ ಎಂ.ಜಿ. ರಸ್ತೆ ಸೇರಿ ವಿವಿಧೆಡೆಯಿದ್ದ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚುತ್ತಿದೆ. ಇದನ್ನು ಮನಗಂಡು ತರಕಾರಿ ಮಾರಾಟಕ್ಕೆ ಪಿ.ಬಿ. ರಸ್ತೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಸ್ತೆಯುದ್ದಕ್ಕೂ 5 ಮೀಟರ್​ಗೊಂದು ವೃತ್ತ ನಿರ್ವಿುಸಲಾಗಿದ್ದು, ಅದರಲ್ಲಿ ತಲಾ ಒಬ್ಬರು ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ತರಕಾರಿ ಮಾರಾಟ ಮಾಡಬಹುದು ಎಂದರು.

    ಪಿ.ಬಿ. ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಿರುವುದಿಲ್ಲ. ಎಡಬದಿಯ ಸಂಪೂರ್ಣ ರಸ್ತೆಯನ್ನು ತರಕಾರಿ ಮಾರಾಟಕ್ಕೆ ಮೀಸಲಿಡಲಾಗುವುದು. ಬಲಬದಿಯ ರಸ್ತೆಯನ್ನು ವಾಹನ ಓಡಾಟಕ್ಕೆ ಸೀಮಿತಗೊಳಿಸಲಾಗುವುದು. ಹಣ್ಣು ಮಾರಾಟಗಾರರಿಗೆ ಬಸ್ ನಿಲ್ದಾಣದಲ್ಲಿ ಜಾಗ ಮಾಡಿಕೊಡಲಾಗಿದ್ದು, ಚಿಕ್ಕಪುಟ್ಟ ಸ್ಥಳದಲ್ಲಿ ನಿಂತು ಮಾರಾಟ ಮಾಡುವವರು ಪಿ.ಬಿ. ರಸ್ತೆ ಹಾಗೂ ಬಸ್ ನಿಲ್ದಾಣದ ಆವರಣಕ್ಕೆ ಬರಬೇಕು. ಲಾಕ್​ಡೌನ್ ಮುಗಿಯುವವರೆಗೂ ಮಾರುಕಟ್ಟೆ ಇದೇ ಸ್ಥಳದಲ್ಲಿ ನಡೆಯಲಿದೆ. ಇಲ್ಲಿಯೂ ಜನಸಂದಣಿ ಹೆಚ್ಚಳವಾದರೆ ಮುಂದಿನ ದಿನದಲ್ಲಿ ಹಲಗೇರಿ ರಸ್ತೆ, ಮೇಡ್ಲೇರಿ ರಸ್ತೆಯಲ್ಲೂ ಇದೇ ರೀತಿ ವ್ಯವಸ್ಥೆ ಮಾಡಲಾಗುವುದು ಎಂದರು. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.

    ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಸುರೇಶ ಸಗರಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts