More

    ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ

    ಟಿ.ರಾಮಚಂದ್ರ ಕೊಂಡ್ಲಹಳ್ಳಿ: ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರು ತತ್ತರಿಸಿದ್ದು ಕಟಾವು ಮಾಡಿದ ಮಾಲನ್ನು ಕಳೆದೊಂದು ತಿಂಗಳಿಂದ ಮಾರಾಟ ಮಾಡಲಾಗದೆ ಪರದಾಡುತ್ತಿದ್ದಾರೆ. ಕ್ವಿಂಟಾಲ್‌ಗೆ 1300 ರೂ. ಇದ್ದ ದರ ಇದೀಗ 200-300 ರೂ. ಗೆ ಇಳಿದಿದೆ. ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲ ಬೆಂಗಳೂರು ಎಪಿಎಂಸಿಯಲ್ಲೂ ಧಾರಣೆ ಕುಸಿತ ದಾಖಲಿಸಿದೆ.

    ಕರ್ನಾಟಕದ ಈರುಳ್ಳಿ ಜತೆಗೆ ನೆರೆಯ ಮಹಾರಾಷ್ಟ್ರ, ಪೂನಾ, ನಾಸಿಕ್ ಭಾಗದಿಂದ ಹೆಚ್ಚುವರಿ ಮಾಲು ಮಾರುಕಟ್ಟೆ ಪ್ರವೇಶಿಸುತ್ತಿರುವುದು ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ 15,000 ಕ್ವಿಂಟಾಲ್ ಈರುಳ್ಳಿ ಆವಕವಾಗುತ್ತ ದೆ. ಈ ಬಾರಿ ಅದು 60,000 ಕ್ವಿಂಟಾಲ್‌ಗೆ ಏರಿದೆ. ಬೆಂಗಳೂರಿಗೆ ಮಾಲು ಒಯ್ದಿದ್ದ ರೈತರು ಊಟಕ್ಕೆ ,ಬಸ್ ಪ್ರಯಾಣಕ್ಕೆ ದುಡ್ಡಿಲ್ಲದೆ ಖರೀದಿದಾರರಿಂದ 500 ರೂ. ಕೈಗಡ ಪಡೆದು ಊರಿಗೆ ವಾಪಸಾದ ಉದಾಹರಣೆಗಳಿವೆ.

    ಸ್ಥಳೀಯ ವ್ಯಾಪಾರಸ್ಥರು 200- 300 ರೂ. ಗೆ ಕ್ವಿಂಟಾಲ್ ಖರೀದಿಸಿ ಕೆಜಿಗೆ 20-30 ರೂ.ಗೆ ಮಾರುತ್ತಾರೆ. ಧಾರಣೆ ಇಲ್ಲದ್ದರಿಂದ ಸ್ಥಳೀಯವಾಗಿಯೂ ಖರೀದಿಗೆ ಹಿನ್ನಡೆ ಆಗಿದೆ.

    ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ 50 ಸಾವಿರ ರೂ.ಬೇಕು. ಒಂದು ಚೀಲ ಕಟಾವಿಗೆ 100 ರೂ.,ಖಾಲಿ ಚೀಲಕ್ಕೆ 40 ರೂ., ಬೆಂಗಳೂರಿಗೆ ಒಂದು ಚೀಲ ಸಾಗಿಸಲು 100 ರೂ., ಹಮಾಲಿಗೆ 25 ರೂ., ಬೀಜ, ಕಳೆ, ಗೊಬ್ಬರದ ದರ ಲೆಕ್ಕ ಹಾಕಿದರೆ ರೈತ ಮಾಡಿದ ಖರ್ಚಿಗೂ ಮಾರುಕಟ್ಟೆ ದರಕ್ಕೂ ಹೋಲಿಕೆ ಆಗುವುದಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

    ಪ್ರತಿ ದಿನ ಈರುಳ್ಳಿಯನ್ನು ನೆರಳಿನಲ್ಲಿ ಹಾಕಿ ಸ್ವಚ್ಚ ಮಾಡಿ ಚೀಲಕ್ಕೆ ತುಂಬಿಡುವುದೇ ತಲೆನೋವಾಗಿದೆ. ಒಂದು ದಿನ ಸ್ವಚ್ಛತೆ ಮರೆತರೆ ಡ್ಯಾಮೇಜ್, ಮೂರು ದಿನ ಮರೆತರೆ ಹಸನು ಮಾಡಿಸಲು 10 ಕೂಲಿಯವರು ಬೇಕು ಎಂದುಗೋಳಾಡುತ್ತಿದ್ದಾರೆ.

    ರೈತರಿಗೆ ಕಿಸಾನ್ ಸಮ್ಮಾನ್ ಬೇಡ, ಸಬ್ಸಿಡಿ ಬೇಡ, ಬೆಳೆಗೆ ವೈಜ್ಞಾನಿಕ ಬೆಲೆ ಕೊಟ್ಟರೆ ಸಾಕು. ಇದರೊಂದಿಗೆ ರಾಜ್ಯದಲ್ಲಿ ಬೆಳೆದ ಈರುಳ್ಳಿಯನ್ನು ಬೇರೆ ಕಡೆಗೆ ರಫ್ತು ಮಾಡಿದರೆ ಬೆಲೆ ಸಿಗುವಂತೆ ಮಾಡಬೇಕಿದೆ ಎನ್ನುತ್ತಾರೆ ರೈತ ನಾಯಕರು.

    ನಿರಂತರ ನಷ್ಟ: ಕಳೆದ ವರ್ಷ 800-1500 ದರ ಸಿಕ್ಕಿತ್ತು. ಈ ಬಾರಿ ಮಳೆಗಾಲದಲ್ಲಿ ಪೂರ್ತಿ ಬೆಳೆ ಕೊಳೆತು ಹೋಯಿತು. ಬೇಸಿಗೆ ಆದ ಕಾರಣ ಬೆಳೆ ಉಳಿದಿದೆ. ಆದರೆ ಬೆಲೆ ಇಲ್ಲ. ಈರುಳ್ಳಿ ಬೆಳೆಯುತ್ತಿರುವ ನಮಗೆ ನಿರಂತರ ನಷ್ಟ ಆಗುತ್ತಲೇ ಇದೆ ಎನ್ನುತ್ತಾರೆ ಕೃಷಿಕರಾದ ಅಶೋಕ, ಗುರುಸ್ವಾಮಿ ದುಪ್ಪಿ, ಕಪ್ಲೆ ಪಾಲಯ್ಯ, ಗೊಡ್ಲಯ್ಯ ಇತರರು.

    ಎರಡೂವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ಅಂದಾಜು 1.50 ಲಕ್ಷ ರೂ. ಖರ್ಚಾಗಿದೆ. 450 ಪಾಕೆಟ್ ಆಗಿವೆ. ಕ್ವಿಂಟಾಲ್‌ಗೆ 1000-1500 ರೂ.ಬೆಲೆ ಸಿಕ್ಕರೆ ಮಾತ್ರ ರೈತ ಬದುಕುತ್ತಾನೆ.
    ಚಿತ್ತಯ್ಯ ಮಾರಮ್ಮನಹಳ್ಳಿ

    ಮೊಳಕಾಲ್ಮೂರು ತಾಲೂಕಿನಲ್ಲಿ 160 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಬೆಳೆ ಒಣಗಿಸಿ ಸಂಗ್ರಹಿಸಲು ಗಮನ ನೀಡಬೇಕು.ಕಟಾವು ಬಳಿಕ 2-3 ದಿನ ಹೊಲದಲ್ಲಿ ಒಣಗಿಸಿ ನಂತರ ಬಿಸಿಲಲ್ಲಿ ಒಣಗಿಸಿದರೆ 12 ತಿಂಗಳು ಸಂಗ್ರಹಿಸಬಹುದು. ಈರುಳ್ಳಿ ಶೇಖರಣೆ ಘಟಕ ನಿರ್ಮಾಣಕ್ಕೆ ಶೆ.50 ರ ಸಬ್ಸಿಡಿಯಲ್ಲಿ 87,500 ರೂ.ನೆರವು ನೀಡಲಾಗುತ್ತದೆ.
    ಡಾ.ಆರ್.ವಿರೂಪಾಕ್ಷಪ್ಪ ನಿರ್ದೇಶಕ, ಮೊಳಕಾಲ್ಮೂರು ಹಿರಿಯ ತೋಟಗಾರಿಕಾ ಇಲಾಖೆ

    ಬೆಂಗಳೂರಿಗೆ 1 ಕ್ವಿಂಟಾಲ್ ಸಾಗಿಸಲು ವಾಹನ ಬಾಡಿಗೆ , ಲೋಡಿಂಗ್,ಅನ್ ಲೋಡಿಂಗ್, ಪ್ಯಾಕೆಟ್ ಸೇರಿ 300 ರೂ.ಖರ್ಚಾಗುತ್ತವೆ. ಹೊರ ರಾಜ್ಯದಿಂದ ಹೆಚ್ಚಿನ ಮಾಲು ಬರುತ್ತಿದೆ. ಸಾಮಾನ್ಯವಾಗಿ ಬೇಸಿಗೆ ಸೀಸನ್ ನಲ್ಲಿ 15,000 ಕ್ವಿಂಟಾಲ್ ಆವಕವಾಗುತ್ತಿತ್ತು. ಈ ಬಾರಿ ಅದು 60 ಸಾವಿರ ಕ್ವಿಂಟಾಲ್‌ಗೆ ಏರಿದೆ. ರೈತರಿಂದ ನಾವು 250 ರೂ.ಗೆ ಖರೀದಿಸಲು ಬೇಸರ ಆಗುತ್ತಿದೆ.
    ಟಿ.ಇ.ಶಿವಪ್ರಕಾಶ್ ಈರುಳ್ಳಿ ವ್ಯಾಪಾರಿ, ಕೋನಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts