More

    ವಿಧಾನ ಸಭೆ ಚುನಾವಣೆಗೆ ಖಾಸಗಿ ವೈದ್ಯರ ಎಂಟ್ರಿ, ಟಿಕೆಟ್‌ಗಾಗಿ ವೈದ್ಯಕೀಯ ಸಂಘ ಹಕ್ಕೊತ್ತಾಯ !

    ವಿಜಯಪುರ: ಪ್ರಸಕ್ತ ವಿಧಾನ ಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಖಾಸಗಿ ವೈದ್ಯರಿಗೂ ಆದ್ಯತೆ ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಘ ಹಕ್ಕೊತ್ತಾಯ ಮಂಡಿಸಿದೆ.
    ಸಂಘದ ಯಾವುದೇ ಸದಸ್ಯ, ಯಾವುದೇ ಪಕ್ಷದಿಂದ ಟಿಕೆಟ್ ಬಯಸಿ ಅಥವಾ ಟಿಕೆಟ್ ತಂದು ಸ್ಪರ್ಧಿಸಿದರೆ ಭಾರತೀಯ ವೈದ್ಯಕೀಯ ಸಂಘ ಬೆಂಬಲ ಸೂಚಿಸಲಿದೆ. ಅವರ ಪರವಾಗಿ ಪ್ರಚಾರ ನಡೆಸಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರವಿ ಬಿರಾದಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಈಗಾಗಲೇ ದೇವರ ಹಿಪ್ಪರಗಿ ಕ್ಷೇತ್ರದಿಂದ ಡಾ.ಪ್ರಭುಗೌಡ ಪಾಟೀಲ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹೈಕಮಾಂಡ್ ಖಾಸಗಿ ವೈದ್ಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
    ಅದೇ ರೀತಿ ನಗರ ಕ್ಷೇತ್ರದಿಂದ ಡಾ.ಮಕ್ಬುಲ್ ಬಾಗವಾನ ಸಹ ಟಿಕೆಟ್ ಬಯಸಿದ್ದು ಅವರಿಗೂ ಟಿಕೆಟ್ ನೀಡಲು ಸಂಘ ಒತ್ತಾಯಿಸುತ್ತದೆ. ಇಂಡಿ ಕ್ಷೇತ್ರದಿಂದ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಸಹ ಟಿಕೆಟ್ ಬಯಸಿ ಸಂಘದ ನೆರವು ಕೇಳಿದರೆ ಅವರ ಪರ ಹಕ್ಕೊತ್ತಾಯ ಮಂಡಿಸಲಾಗುವುದು. ಭಾರತೀಯ ವೈದ್ಯಕೀಯ ಸಂಘ ಯಾವುದೇ ಪಕ್ಷದ ಪರ ಅಲ್ಲ. ಸಂಘದ ಸದಸ್ಯರ ಯಾರೇ ಆಗಲಿ, ಯಾವುದೇ ಪಕ್ಷದಿಂದ ಸ್ಪರ್ಧಿಸಲು ಸಜ್ಜಾದರೂ ಅವರ ಪರವಾಗಿ ಟಿಕೆಟ್‌ಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
    ಜಿಲ್ಲೆಯಲ್ಲಿ ಸುಮಾರು 600 ವೈದ್ಯರಿದ್ದೇವೆ. ಸಂಘದ ನೆರವು ಕೇಳಿ ಬಂದರೆ ಅವರಿಗೆ ರಾಜಕೀಯವಾಗಿ ಬೆಂಬಲ ಸೂಚಿಸಲು ಸದಾ ಸಿದ್ದರಿದ್ದೇವೆ. ಈ ಹಿಂದೆಯೂ ಸಂಘ ಬೆಂಬಲ ನೀಡುತ್ತಾ ಬಂದಿದೆ. ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳ ಸಮಸ್ಯೆಗಳು ಸಾಕಷ್ಟಿವೆ. ಹೀಗಾಗಿ ವೈದ್ಯರ ಪ್ರತಿನಿಧಿಯಾಗಿ ಸ್ಪರ್ಧಿಸುವವರಿಗೆ ಪಕ್ಷಗಳು ಅವಕಾಶ ಕಲ್ಪಿಸಬೇಕು. ಎಲ್ಲ ಪಕ್ಷಗಳಿಗೂ ಈ ಮನವಿ ಸಲ್ಲಿಸಲಾಗುವುದು ಎಂದರು.
    ಡಾ.ಎಲ್.ಎಚ್. ಬಿದರಿ ಮಾತನಾಡಿ, ವೈದ್ಯರ ಸಮಸ್ಯೆಗಳು ಸಾಕಷ್ಟು ಇವೆ. ಸಮಸ್ಯೆ ಬಗೆ ಹರಿಯಬೇಕಾದರೆ ವೈದ್ಯರುಗಳಿಗೂ ರಾಜಕೀಯವಾಗಿ ಅವಕಾಶ ನೀಡಬೇಕು. ರಾಜ್ಯದ ಯಾವುದೇ ಕ್ಷೇತ್ರ, ಯಾವುದೇ ಪಕ್ಷದಿಂದ ಸಂಘದ ಸದಸ್ಯರು ಸ್ಪರ್ಧಿಸಿದರೂ ಅವರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು.
    ಸಂಘದ ಸದಸ್ಯರಾದ ಡಾ.ರವಿಕುಮಾರ ಚೌಧರಿ, ಡಾ.ದಯಾನಂದ ಬಿರಾದಾರ, ಡಾ.ಸುರೇಶ ಕಾಗಲಕರ, ಡಾ.ಕಿರಣ ಓಶ್ವಾಲ, ಡಾ.ಗಿರೀಶ ಪಾಟೀಲ, ಡಾ. ಎಂ.ಎಂ. ಪಾಟೀಲ, ಡಾ. ವಿಲಾಸ ಕುಲಕರ್ಣಿ, ಡಾ.ಶಿರಗುಪ್ಪಿ, ಡಾ.ದಯಾನಂದ ಬನಪಟ್ಟಿ, ಡಾ. ಜಮೀರ ಗೋಲೆವಾಲೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts