More

    ರಸ್ತೆಯಲ್ಲಿಯೇ ಹರಿಯುತ್ತಿದೆ ನೀರು, ಚರಂಡಿ ದುರಸ್ತಿಗಿಲ್ಲ ಆದ್ಯತೆ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಕಾರ್ಕಳ ತಾಲೂಕಿನಾದ್ಯಂತ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಹರಿಯಲು ರಸ್ತೆ ಪಕ್ಕ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೆಸರು ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಜನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲ ಆರಂಭಗೊಂಡು ತಿಂಗಳು ಕಳೆದರೂ ಚರಂಡಿ ನಿರ್ವಹಣೆಯತ್ತ ಸ್ಥಳಿಯಾಡಳಿತ ಹಾಗೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಬಹುತೇಕ ಗ್ರಾಮಸ್ಥರ ಆರೋಪ.

    ಬೆಳ್ಮಣ್, ಬೋಳ, ನಂದಳಿಕೆ ಹಾಗೂ ಮುಂಡ್ಕೂರು ಸೇರಿದಂತೆ ಬಹುತೇಕ ಗ್ರಾಪಂ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ಚರಂಡಿ ಇದ್ದರೂ ನಿರ್ವಹಣೆಯಿಲ್ಲದೆ ಹೂಳು ತುಂಬಿ ರಸ್ತೆಯಲ್ಲೇ ಕೆಸರು ನೀರು ಹರಿಯುತ್ತದೆ. ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಇಂದಾರು ತಿರುವು ಬಳಿ ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಹರಿಯಲು ಸರಿಯಾದ ಚರಂಡಿಯಿಲ್ಲದೆ ರಸ್ತೆಯಲ್ಲೆ ನೀರಿನೊಂದಿಗೆ ಕಲ್ಲು, ಮಣ್ಣು ಎಲ್ಲವೂ ಶೇಖರಣೆಯಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಶಿರ್ವ ರಸ್ತೆಯ ಪಕ್ಕದಲ್ಲಿರುವ ಚರಂಡಿ ಸರಿಯಾಗಿಲ್ಲದೆ ಕೆಸರು ನೀರು ನೇರವಾಗಿ ಕೃಷಿಭೂಮಿ ಸೇರುತ್ತಿದೆ. ಬೆಳ್ಮಣ್ ಚರ್ಚ್ ಬಳಿ ಚರಂಡಿ ಇಲ್ಲದೆ ಸಮೀಪದಲ್ಲಿರುವ ಖಾಸಗಿ ಕಟ್ಟಡದ ಮುಂದೆ ನೀರು ಶೇಖರಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮುಂಡ್ಕೂರಿನ ಗ್ರಾಮದಲ್ಲಿ ಇಡೀ ಪೇಟೆ ಪರಿಸರದಲ್ಲಿ ಸರಿಯಾದ ಚರಂಡಿ ಇಲ್ಲ. ಇಲ್ಲಿನ ಜೈನ್ ಪೇಟೆ ತಿರುವಿನಲ್ಲಿ ರಸ್ತೆಯಲ್ಲೇ ನೀರು ಶೇಖರಣೆಗೊಂಡು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಗರಡಿ ಬಳಿ ರಸ್ತೆಯಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ.

    ಹೂಳೆತ್ತುವ ಕಾಮಗಾರಿ ನಡೆದಿಲ್ಲ
    ಕರೊನಾ ಲಾಕ್‌ಡೌನ್‌ನಿಂದಾಗಿ ಈ ಬಾರಿ ಹಲವಾರು ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿ ಇನ್ನೂ ನಡೆದಿಲ್ಲ. ಸ್ಥಳೀಯಾಡಳಿತ ಹಾಗೂ ಇಲಾಖೆ ಈ ಬಗ್ಗೆ ಗಮನ ಹರಿಸದೆ ವಾಹನ ಸವಾರರಿಗೆ ತೊಂದರೆಯಾಗಿದೆ. ಶೀಘ್ರ ಚರಂಡಿ ಸಮಸ್ಯೆಗೆ ಮುಕ್ತಿ ದೊರಕಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ರಾಜ್ಯ ಹೆದ್ದಾರಿ ನಿರ್ಮಾಣ ಸಂದರ್ಭವೂ ಈ ಭಾಗದಲ್ಲಿ ಚರಂಡಿಯ ಅಗತ್ಯವಿದೆ ಎಂದು ಹೇಳಿದರೂ ಇಲ್ಲಿವರೆಗೂ ನಿರ್ಮಾಣವಾಗಿಲ್ಲ. ಈಗ ಒಂದು ಮಳೆ ಬಂದರೆ ಸಾಕು ನಮ್ಮ ಅಂಗಡಿ ಮುಂದೆ ನೀರು ಶೇಖರಣೆಯಾಗುತ್ತದೆ. ಈ ಬಗ್ಗೆ ಸ್ಥಳೀಯಾಡಳಿತ, ಇಲಾಖೆ ಗಮನ ಹರಿಸುತ್ತಿಲ್ಲ.
    ಅನಿತಾ ಡಿಸೋಜ, ಬೆಳ್ಮಣ್ ಗ್ರಾಮಸ್ಥೆ

    ಮಳೆಗಾಲಕ್ಕೂ ಮುನ್ನ ಪಂಚಾಯಿತಿ ವ್ಯಾಪ್ತಿಯ ಎಲ್ಲ ಚರಂಡಿಗಳನ್ನು ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕರೊನಾದಿಂದ ಸ್ವಲ್ಪ ತಡವಾಗಿದೆ. ಅಲ್ಲದೆ ಚರಂಡಿ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
    ನಿತ್ಯಾನಂದ ಅಮೀನ್
    ಅಧ್ಯಕ್ಷರು ನಂದಳಿಕೆ ಗ್ರಾಪಂ

    ಮುಂಡ್ಕೂರಿನ ಚರಂಡಿ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತೀ ಮಳೆಗಾಲದ ಸಂದರ್ಭವೂ ಇದೇ ಪರಿಸ್ಥಿತಿ. ಚರಂಡಿಯಿಲ್ಲದೆ ಇಲ್ಲಿನ ರಸ್ತೆ ವಾಹನ ಸಂಚಾರಕ್ಕಿಂತ ಮಳೆ ನೀರು ಹರಿಯಲು ನಿರ್ಮಿಸದಂತಾಗಿದೆ.
    ಸತೀಶ್, ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts