More

    ಕರೊನಾ ಭೀತಿ ನಡುವೆಯೂ ವರದಕ್ಷಿಣೆ ಕಿರುಕುಳ ದುಪ್ಪಟ್ಟು: 5 ತಿಂಗಳಲ್ಲಿ ದಾಖಲಾದ ಕೇಸ್​, ಬಲಿಯಾದ ಮಹಿಳೆಯರೆಷ್ಟು?

    | ಅವಿನಾಶ ಮೂಡಂಬಿಕಾನ

    ಬೆಂಗಳೂರು: ಕರೊನಾ ಮಹಾಮಾರಿ ಹೊಡೆತಕ್ಕೆ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿರುವ ಇಂತಹ ಸಂದರ್ಭದಲ್ಲೂ ರಾಜ್ಯದಲ್ಲಿ ವರದಕ್ಷಿಣೆ ಪಿಡುಗು ಮಾತ್ರ ಹೆಚ್ಚಾಗುತ್ತಿದೆ.

    ರಾಜ್ಯದಲ್ಲಿ ಲಾಕ್​ಡೌನ್ ವ್ಯವಸ್ಥೆ ಜಾರಿಗೆ ತಂದ ಸಮಯದಿಂದ ಇದುವರೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ನೊಂದ ನೂರಾರು ಮಹಿಳೆಯರು ಪ್ರತಿ ದಿನ ಠಾಣೆಯ ಮೆಟ್ಟಿಲೇರುತ್ತಿದ್ದರೂ, ಕರೊನಾ ಭೀತಿಯಿಂದ ಪತಿಯನ್ನು ಠಾಣೆಗೆ ಕರೆಸಿ ಪ್ರಕರಣ ಇತ್ಯರ್ಥಪಡಿಸುವುದು ಪೊಲೀಸರಿಗೆ ಸವಾಲಾಗಿದೆ.

    ಕಳೆದ ಐದೇ ತಿಂಗಳಿನಲ್ಲಿ ರಾಜ್ಯದಲ್ಲಿ 524 ವರದಕ್ಷಿಣೆ ಕಿರುಕುಳ ದಾಖಲಾಗಿದ್ದು, ಪತಿಯ ಹಿಂಸೆ ತಾಳಲಾರದೇ 79 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ನಾಲ್ವರು ಬೆಂಕಿ ಹಚ್ಚಿ ಮೃತಪಟ್ಟರೆ, 27 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2017ರಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 1,531 ವರದಕ್ಷಿಣೆ ಪ್ರಕರಣ ದಾಖಲಾಗಿದ್ದು, 206 ಮಹಿಳೆಯರು ಪತಿ ಹಾಗೂ ಆತನ ಸಂಬಂಧಿಗಳ ಕಿರುಕುಳಕ್ಕೆ ಬಲಿಯಾಗಿದ್ದರು. 2019ರಲ್ಲಿ ಇದರ ಪ್ರಮಾಣ 1,716ಕ್ಕೆ ಏರಿಕೆಯಾಗಿದ್ದು, ಈ ಸಾಲಿನಲ್ಲಿ 189 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು.

    ಹಣ, ಚಿನ್ನ, ಆಸ್ತಿಗಾಗಿ ಪತ್ನಿ ಮೇಲೆ ಹಲ್ಲೆ, ಬೆದರಿಕೆ, ಮೈಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ , ಬ್ಲಾ್ಯಕ್ ಮೇಲ್ ಸೇರಿ ಇನ್ನೀತರ ರೀತಿಯಲ್ಲಿ ಕಿರುಕುಳ ನೀಡುವ ಸಾವಿರಾರು ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕವಾಗಿ ಹಿಂಸೆ ನೀಡಿ, ಮನೆಯಿಂದ ಹೊರ ಹಾಕಿದ ಪ್ರಕರಣಗಳೂ ಸಾಕಷ್ಟಿವೆ.

    ವಿಚ್ಛೇದನ ನೀಡುವುದಾಗಿ ಬೆದರಿಕೆ:
    ಕರೊನಾ ಹಿನ್ನೆಲೆಯಲ್ಲಿ ಅಧಿಕ ಜನ ಮನೆಯಲ್ಲೇಯಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೊಳಗಾಗಿಯೂ ಪತ್ನಿಯರಿಗೆ ಹಿಂಸೆ ಕೊಡುವ ಸಾಧ್ಯತೆಯಿದೆ ಎಂದು ಮನೋರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುವ ಪತಿರಾಯರನ್ನು ಪ್ರಶ್ನಿಸಲು ಹೋದರೆ, ವಿಚ್ಛೇದನ ನೀಡುವುದಾಗಿ ಬೆದರಿಸುತ್ತಿದ್ದಾರೆ. ವರದಕ್ಷಿಣೆ ಸಲುವಾಗಿ ಕೌಟುಂಬಿಕ ಕಲಹ ಪ್ರಕರಣಗಳೂ ಏರಿಕೆಯಾಗಿವೆ. ಇದರಲ್ಲಿ ಶೇ.15ರಷ್ಟು ಪ್ರಕಣಗಳು ಮಾತ್ರ ಬೆಳಕಿಗೆ ಬರುತ್ತಿವೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕರೊನಾ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರುವ ಪತ್ನಿಯರಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ. ಇದರಿಂದ ನೊಂದು ಪತಿಯ ಹಿಂಸೆ ಸಹಿಸಿಕೊಂಡು ಸಂಸಾರ ಸಾಗಿಸುವುದು ಅನಿವಾರ್ಯವಾಗಿದೆ.

    ಅಂದವಿಲ್ಲವೆಂದು ವರದಕ್ಷಿಣೆ ಕಿರುಕುಳ:
    ಕಳೆದ 10 ತಿಂಗಳ ಹಿಂದೆ ವಿವಾಹವಾಗಿದ್ದು, ನೋಡಲು ಅಂದವಿಲ್ಲ ಎಂಬ ಕಾರಣಕ್ಕೆ ವರದಕ್ಷಿಣೆ ನೀಡುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ನೀಲಸಂದ್ರದ ನಿವಾಸಿ 23 ವರ್ಷದ ಮಹಿಳೆ ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಈ ಆಧಾರದ ಮೇಲೆ ಪೊಲೀಸರು ಜೆ.ಪಿ.ನಗರದ ನಿವಾಸಿ ಸಾಜದ್ ಅಹಮದ್(28) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಾಜದ್ ಉದ್ಯಮಿಯಾಗಿದ್ದು, 2019ರಲ್ಲಿ 1.50 ಲಕ್ಷ ರೂ. ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ವಿವಾಹ ಮಾಡಿ ಕೊಡಲಾಗಿತ್ತು. ವಿವಾಹವಾದ ಬಳಿಕ ನೀನು ನೀಡಲು ಅಂದವಾಗಿಲ್ಲ. ಈ ಹಿನ್ನೆಲೆಯಲ್ಲಿ ತವರು ಮನೆಯಿಂದ ಚಿನ್ನದ ಒಡವೆ, ಗೃಹೋಪಯೋಗಿ ವಸ್ತು ತರುವಂತೆ ಹಿಂಸೆ ಕೊಟ್ಟಿದ್ದ. ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಕೊಲೆ ಮಾಡುವುದಾಗಿ ಪತಿ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ರಕ್ತ ಬರುವಂತೆ ಹಲ್ಲೆ:
    ವರದಕ್ಷಿಣೆ ತರುವಂತೆ ಪತಿ ಕಿವಿ ಮತ್ತು ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಅಶೋಕ್ ನಗರದ 23 ವರ್ಷದ ನಿವಾಸಿ ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಮಹಿಳಾ ಠಾಣೆ ಪೊಲೀಸರು ಚಿನ್ನಪ್ಪನ ಹಳ್ಳಿ ನಿವಾಸಿ ಸತೀಶ್ ನಾಯ್ಡು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2019 ಏಪ್ರಿಲ್​ನಲ್ಲಿ ಸತೀಶ್ ತನ್ನನ್ನು ವಿವಾಹವಾಗಿದ್ದರು. ಇತ್ತೀಚೆಗೆ ವರದಕ್ಷಿಣೆ ತರುವಂತೆ ಪತಿ ಬೆದರಿಸಿದ್ದ. ವರದಕ್ಷಿಣೆ ತಾರದೇ ಇದ್ದುದಕ್ಕೆ ಪತಿ ನನ್ನ ಕಿವಿ ಹಾಗೂ ಮೂಗಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವುದನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

    ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿರುವ ಪತಿ ತನ್ನ ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುವ ಪ್ರಕರಣ ಹೆಚ್ಚುತ್ತಿದೆ. ಸಂತ್ರಸ್ತೆಯರು ಈ ವಿಚಾರವನ್ನು ಬೆಳಕಿಗೆ ತಂದರೆ ಇತ್ಯರ್ಥಪಡಿಸಬಹುದು.

    | ಪ್ರಮೀಳಾ ನಾಯ್ಡು, ಅಧ್ಯೆಕ್ಷೆ. ರಾಜ್ಯ ಮಹಿಳಾ ಆಯೋಗ

    ವರ್ಷ   – ಪ್ರಕರಣ – ಸಾವು

    2017 – 1,531  – 206

    2018 – 1,524 – 198

    2019 – 1,716 – 189

    2020 (ಮೇ)- 524- 79

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts