More

    ಬದಲಾಗುತ್ತಾ ಸಕ್ಕರೆನಾಡಿನ ಹಣೆಬರಹ: ಇನ್ನಾದರೂ ಗಮನಿಸ್ತಾರಾ ನೂತನ ಜನಪ್ರತಿನಿಧಿಗಳು

    ಮಂಡ್ಯ: ಅಗತ್ಯಕ್ಕಿಂತಲೂ ಹೆಚ್ಚಿನ ಸ್ವಾರ್ಥ ರಾಜಕೀಯದಿಂದ ತತ್ತರಿಸಿರುವ ಸಕ್ಕರೆನಾಡು ಮಂಡ್ಯ ಜಿಲ್ಲೆ ದೊಡ್ಡಹಳ್ಳಿ ಎನ್ನುವ ಅನಾವಶ್ಯಕ ಹಣೆಪಟ್ಟೆ ಹೊಂದಿದೆ. ಅಮೃತ ಮಹೋತ್ಸವ ಆಚರಿಸಿಕೊಂಡು ಮುನ್ನಡೆಯುತ್ತಿರುವ ಜಿಲ್ಲೆಯಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಯಾರೇ ಬಂದರೂ ಅಭಿವೃದ್ಧಿ ಅಸಾಧ್ಯ ಎನ್ನುವ ಮಾತು ಜನರೊಳಗೆ ಬೆರೆತು ಹೋಗಿದೆ. ಈ ನಡುವೆಯೂ ಆರಕ್ಕೇರದ ಮೂರಕ್ಕಿಳಿದ ಸಕ್ಕರೆನಾಡಿಗೆ ನೂತನ ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅವರಿಂದ ಭಾರೀ ನಿರೀಕ್ಷೆಯನ್ನಿಡಲಾಗಿದೆ.
    ಜಿಲ್ಲೆಯ ಜನರು ಪ್ರತಿ ಚುನಾವಣೆ ಮುಗಿದ ನಂತರದಂತೆ ಈ ಸಲವೂ ಹಲವು ನಿರೀಕ್ಷೆಗಳನ್ನು ಹೊತ್ತಿದ್ದಾರೆ. ಹೊಸ ಜನಪ್ರತಿನಿಧಿಗಳೊಂದಿಗೆ ಅಭಿವೃದ್ಧಿಗೂ ಮುನ್ನುಡಿಯಾಗಬಹುದೆಂಬ ಭರವಸೆ ಹೊಂದಿದ್ದಾರೆ. ಹೊರಗಿನಿಂದ ಕಾಣುವಂತೆ ಮಂಡ್ಯ ಜಿಲ್ಲೆ ಸಮೃದ್ಧವಾಗಿಲ್ಲ. ಇಲ್ಲಿನ ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ನೀರಾವರಿ ಯೋಜನೆ, ಕೃಷಿ ಕ್ಷೇತ್ರದ ಅಭಿವೃದ್ಧಿ, ಕೈಗಾರಿಕೆ, ರಸ್ತೆ, ಪ್ರವಾಸೋದ್ಯಮ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಆಗಬೇಕಿದೆ. ಆದ್ದರಿಂದ ಬಾರಿಯಾದರೂ ಜನರ ಭರವಸೆ ಈಡೇರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

    ಮೈಷುಗರ್‌ಗೆ ರಾಜಕೀಯ ದಾಳವಾಗದಿರಲಿ
    ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಶಾಶ್ವತ ಕಾಯಕಲ್ಪ ಸಿಗಬೇಕಿದೆ. ಹಲವು ವರ್ಷದಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಕಳೆದ ವರ್ಷ ಮರುಜೀವ ನೀಡಲಾಗಿತ್ತು. ಖಾಸಗಿಯವರಿಗೆ ವಹಿಸಲು ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ ಸರ್ಕಾರ, ಯಥಾಸ್ಥಿತಿಯಂತೆ ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾರಂಭ ಮಾಡಿತ್ತು. ಆದರೆ ಸಮಸ್ಯೆಗಳ ಸುಳಿಯ ನಡುವೆ ಕಾರ್ಖಾನೆ ಒದ್ದಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಶಾಶ್ವತ ಕಾಯಕಲ್ಪ ನೀಡಿದರೆ ಲಕ್ಷಾಂತರ ಜನರ ಬದುಕಿಗೆ ದಾರಿಯಾಗಲಿದೆ. ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರಲಿದೆ. ಇನ್ನಾದರೂ ರಾಜಕೀಯ ನಾಯಕರು ಕಾರ್ಖಾನೆಯನ್ನು ರಾಜಕೀಯಕ್ಕೆ ದಾಳ ಮಾಡಿಕೊಳ್ಳುವುದನ್ನು ಬಿಡಬೇಕಿದೆ.
    ಇನ್ನು ಗಮನಾರ್ಹ ಅಂಶವೆಂದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮೈಷುಗರ್ ಕಾರ್ಖಾನೆ ಪುನಶ್ವೇತನಕ್ಕೆ ಆದ್ಯತೆ ನೀಡಿದೆ. ಅದರಂತೆ ಸರ್ಕಾರ ರಚನೆಯಾಗಲಿದೆ. ಕೊಟ್ಟ ಮಾತಿನಂತೆ ಕಾರ್ಖಾನೆಗೆ ಹೊಸ ರೂಪ ಕೊಡಬೇಕಿದೆ. ಇಲ್ಲದಿದ್ದರೆ ಜನಾಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಮಾತ್ರವಲ್ಲದೆ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರದಲ್ಲಿ ಕೈಗಾರಿಕೆಗಳೇ ಇಲ್ಲ. ಒಂದೆಡೆರೆಡು ಕಡೆ ಗಾಮೆಂಟ್ಸ್ ಬಿಟ್ಟರೆ ಕಾರ್ಖಾನೆಗಳ ಸಂಖ್ಯೆ ತೀರಾ ಕಡಿಮೆ. ಪರಿಣಾಮ ಜನರು ಉದ್ಯೋಗ ಹರಿಸಿ ಮೈಸೂರು, ಬೆಂಗಳೂರಿನ ಕಡೆಗೆ ವಲಸೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಜಿಲ್ಲೆಗೆ ತರಲು ಜನಪ್ರತಿನಿಧಿಗಳು ಇಚ್ಚಾಸಕ್ತಿ ಪ್ರದರ್ಶಿಸಬೇಕಿದೆ. ಅದರಲ್ಲಿಯೂ ನಾಗಮಂಗಲ, ಕೆ.ಆರ್.ಪೇಟೆ ಭಾಗದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕೈಗಾರಿಕೆಗಳ ಪ್ರಾರಂಭಕ್ಕೆ ಅಗತ್ಯವಾಗಿ ಹೆಚ್ಚಿನ ಒತ್ತು ನೀಡಬೇಕಿದೆ.

    ಅನ್ನದಾತರ ಬದುಕು ಬದಲಾಗಲಿ
    ರೈತರು ದೇಶದ ಬೆನ್ನೆಲುಬು ಎನ್ನುವುದು ರಾಜಕೀಯ ಪಕ್ಷಗಳಿಗೆ ಭಾಷಣದ ಸರಕು ಅಷ್ಟೇ. ಯಾರೂ ಬಂದರೂ ರೈತರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡಲ್ಲ. ಪರಿಣಾಮ ಇಂದಿಗೂ ಬೆಳೆಗಳಿಗೆ ಸರಿಯಾದ ಬೆಲೆ ಕೊಡಿ ಎಂದು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ದುರಂತವಲ್ಲದೆ ಮತ್ತೇನು ಎನ್ನುವ ಆಕ್ರೋಶವಿದೆ. ತಾನು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಿಕೊಳ್ಳುವಷ್ಟು ರೈತರಿಗೆ ಸ್ವಾತಂತ್ರೃ ಸಿಕ್ಕಿಲ್ಲದಿರುವುದು ವಿಪರ್ಯಾಸ.
    ಇನ್ನು ರೈತರ ಸಮಸ್ಯೆಗಳು ರಾಜಕಾರಣಿಗಳಿಗೆ ರಾಜಕೀಯ ಮಾಡಲು ಅವಶ್ಯಕವಿರುವ ವಸ್ತುವಾಗಿ ಬದಲಾಗಿದೆ. ಅಧಿಕಾರಕ್ಕೆ ಬಂದಾಗ ಏನೂ ಮಾಡಲಾಗದೇ ಆಡಳಿತವಿಲ್ಲದಿದ್ದಾಗ ಅಬ್ಬರಿಸುವುದರಿಂದ ಏನು ಪ್ರಯೋಜನ?. ಅದರಲ್ಲಿಯೂ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಕಬ್ಬು, ಭತ್ತ ಬೆಳೆದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಕೊನೆಗೆ ನಷ್ಟ ಅನುಭವಿಸಿ ಕೃಷಿಯಿಂದ ವಿಮುಖಗೊಂಡು ಉದ್ಯೋಗ ಹರಸಿ ನಗರದತ್ತ ವಲಸೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕಿದೆ. ಬರೀ ಮಾತಿನಲ್ಲಿಯೇ ಕೃಷಿಯನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ ರೂಪಿಸಬೇಕಿದೆ. ಪ್ರಮುಖವಾಗಿ ಸಾಂಪ್ರದಾಯಿಕ ಕೃಷಿ ಜತೆಗೆ ಮಿಶ್ರ ಬೇಸಾಯ ಮತ್ತು ಸಾವಯವ ಕೃಷಿಯತ್ತ ರೈತರನ್ನು ಆಕರ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದಂತೆ ಇಲಾಖೆ ವಿಶೇಷ ಗಮನಹರಿಸಿ ಸೌಲಭ್ಯಗಳನ್ನು ನೀಡಬೇಕಿದೆ. ರೈತರ ಪ್ರತಿನಿಧಿ ಎನ್ನುವಂತೆ ಮೇಲುಕೋಟೆ ಕ್ಷೇತ್ರದಿಂದ ದರ್ಶನ್ ಪುಟ್ಟಣ್ಣಯ್ಯ ಆಯ್ಕೆಯಾಗಿದ್ದಾರೆ. ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಪ್ರತಿ ಟನ್ ಕಬ್ಬಿಗೆ 4,500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿ ಮಾಡಬೇಕೆಂದು ರೈತ ಸಂಘದ ನೇತೃತ್ವದಲ್ಲಿ ನೂರು ದಿನ ಹೋರಾಟ ನಡೆದಿತ್ತು. ಇದಕ್ಕೆ ಕಾಂಗ್ರೆಸ್ ಕೂಡ ಸಾಥ್ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರವೇ ರಚನೆಯಾಗುತ್ತಿರುವುದರಿಂದ ಬೇಡಿಕೆ ಈಡೇರಿಸಬಹುದೆನ್ನುವ ನಿರೀಕ್ಷೆ ಅನ್ನದಾತರಿಗಿದೆ.

    ನೀರಾವರಿ ಯೋಜನೆಗೆ ಆದ್ಯತೆ ಸಿಗಲಿ
    ರೈತರ ಪಾಲಿಗೆ ಜೀವದಂತಿರುವ ನಾಲೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಗಡಿಭಾಗದ ಗ್ರಾಮಗಳ ರೈತರು ಬದುಕುವುದೇ ಕಷ್ಟವಾಗಲಿದೆ. ಇಂದಿಗೂ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಟ್ಟರೆ ಗಡಿಗ್ರಾಮ ತಲುಪಲು ಐದಾರೂ ದಿನ ಬೇಕಾಗುತ್ತದೆ. ಅದು ಕೂಡ ಸಮರ್ಪಕವಾಗಿರುವುದಿಲ್ಲ. ಕಾರಣ ನಾಲೆಯ ಅಧ್ವಾನದ ಸ್ಥಿತಿ. ಈ ಬಗ್ಗೆ ಹಿಂದಿನ ಸರ್ಕಾರಗಳು ಕಿಂಚಿತ್ತೂ ಕಾಳಜಿ ತೋರಿಸಲಿಲ್ಲ. ಅತ್ತ ಅಧಿಕಾರಿಗಳಿಗೂ ನಾಲೆಯ ಆಧುನೀಕರಣ ಬೇಕಿಲ್ಲ. ರೈತರು ಕೇಳಿ ಕೇಳಿ ವಿಧಿಯಿಲ್ಲದೆ ಸುಮ್ಮನಾಗುತ್ತಿದ್ದಾರೆ. ರೈತರು ಹಾಗೂ ಕೃಷಿ ಎನ್ನುವುದು ವರ್ಷಕ್ಕೊಮ್ಮೆ ದಿನಾಚರಣೆ ಮಾಡುವುದಕ್ಕಷ್ಟೇ ಸೀಮಿತವಾಗಿದೆ.
    ಜಿಲ್ಲೆಯಲ್ಲಿ ಸಮರ್ಪಕವಾದ ನೀರಾವರಿ ಯೋಜನೆ ಅನುಷ್ಠಾನಗೊಂಡಿಲ್ಲ. ಕೆಲ ಯೋಜನೆಯಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ ಎಂದು ದಾಖಲೆ ಕೊಟ್ಟರೂ ತನಿಖೆ ನಡೆಯುತ್ತಿಲ್ಲ. ಹಲವು ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ಹೋಗಿವೆ. ಆದ್ದರಿಂದ ಕೃಷಿಯನ್ನು ಅವಲಂಬಿಸಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅನುಕೂಲವಾಗುವಂತಹ ಯೋಜನೆಗಳಿಲ್ಲ. ಇನ್ನಾದರೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ಸಿಗುವಂತಾಗಲಿ.

    ಕ್ರೀಡಾ ಪ್ರತಿಭೆಗಳಿಗೆ ಬೇಕಿದೆ ಪ್ರೋತ್ಸಾಹ
    ಕಲೆ, ಸಾಂಸ್ಕೃತಿಕ, ರಾಜಕೀಯ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ಮಂಡ್ಯ ಜಿಲ್ಲೆ ಅಪಾರ ಪ್ರತಿಭೆಗಳನ್ನು ಹೊಂದಿದೆ. ಆದರೆ ಅವರಿಗೆಲ್ಲ ಪ್ರೋತ್ಸಾಹ ನೀಡುವಂತಹ ಕೆಲಸಗಳು ಮಾತ್ರ ನಡೆಯುತ್ತಿಲ್ಲ. ಕಳೆದ ಸರ್ಕಾರದಲ್ಲಿ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಜಿಲ್ಲೆಯವರೇ ಆಗಿದ್ದರೂ ಕ್ರೀಡಾ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಲಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅವರು ಕೆ.ಆರ್.ಪೇಟೆ ಕಡೆಗೆ ಗಮನಕೊಟ್ಟಷ್ಟು ಉಳಿದ ಕಡೆ ತಿರುಗಿ ನೋಡಲಿಲ್ಲ. ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇಂದಿಗೂ ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್, ಫುಟ್ಬಾಲ್ ಆಡಲು ಉತ್ತಮವಾದ ಹಾಗೂ ವಿಶಾಲವಾದ ಜಾಗವೇ ಇಲ್ಲ ಎನ್ನುವುದು ಬೇಸರದ ವಿಷಯ. ಕ್ರೀಡಾ ಚಟುವಟಿಕೆಯಲ್ಲಿಯೂ ಜಿಲ್ಲೆಯ ಯುವಕ, ಯುವತಿಯರು ಸಾಧನೆ ಮಾಡುತ್ತಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿರುತ್ತವೆ. ಆದ್ದರಿಂದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕ್ರೀಡಾಂಗಣದ ಅಭಿವೃದ್ಧಿಗೂ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಷ್ಟೇ ಆಟೋಟವೂ ಮುಖ್ಯ ಎನ್ನುವುದನ್ನು ಹೇಳಬೇಕಿಲ್ಲ.

    ಆರೋಗ್ಯ ಕ್ಷೇತ್ರವೂ ಪ್ರಾಮುಖ್ಯವಾಗಲಿ
    ಮೂಲ ಸೌಕರ್ಯಗಳಲ್ಲೊಂದಾದ ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ ಸಿಗಬೇಕಿದೆ. ಪ್ರಮುಖವಾಗಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಪ್ರಾರಂಭವಾಗಿ ಹಲವು ವರ್ಷ ಕಳೆದಿದೆ. ಆದರೆ ಸೌಲಭ್ಯ ಮಾತ್ರ ಹೆಚ್ಚಿಸಿಲ್ಲ. ಪರಿಣಾಮ ಪ್ರತಿನಿತ್ಯ ಬರುವ ಸಾವಿರಾರೂ ರೋಗಿಗಳ ಪಾಡು ಹೇಳತೀರದು. ಇನ್ನು ಕಳೆದ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಉಳಿಸುವ ಬದ್ಧತೆಯನ್ನು ನೂತನ ಜನಪ್ರತಿನಿಧಿಗಳು ತೋರಬೇಕಿದೆ. ಯಾರೋ ಮಾಡಿದ ತಪ್ಪಿಗೆ ಕ್ಯಾನ್ಸರ್ ರೋಗಿಗಳು ಬೆಂಗಳೂರು, ಮೈಸೂರಿಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಸಮಯದ ಜತೆಗೆ ಆರ್ಥಿಕವಾಗಿಯೂ ನಷ್ಟವಾಗಿದ್ದು, ರೋಗಿಗಳ ಪಾಡು ಹೇಳ ತೀರದಂತಾಗಿದೆ. ಇದಲ್ಲದೆ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೇರಬೇಕಿದೆ. ತಾಲೂಕು ಆಸ್ಪತ್ರೆಯಲ್ಲಿಯೂ ಮೂಲ ಸೌಕರ್ಯ ಒದಗಿಸಬೇಕಿದೆ.

    ಪ್ರವಾಸೋದ್ಯಮ ಆದಾಯ ತರುವಂತಾಗಲಿ
    ಮಂಡ್ಯ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯದ ಗಮನಸೆಳೆದಿದೆ. ಅಂತೆಯೇ, ಹಲವು ಪ್ರವಾಸಿ ಮತ್ತು ಐತಿಹಾಸಿಕ ಕ್ಷೇತ್ರಗಳನ್ನು ಕಾಣಬಹುದು. ಇಂದಿಗೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದೆ. ಆದರೆ, ಪ್ರವಾಸಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎನ್ನುವುದು ಕಣ್ಣಿಗೆ ಕಾಣುವ ಸತ್ಯ. ಪರಿಣಾಮ ಪ್ರವಾಸಿಗರನ್ನು ಸೆಳೆಯುವ ವಿಷಯದಲ್ಲಿ ತೀರಾ ಹಿಂದೆ ಬೀಳುತ್ತಿದೆ. ಆದ್ದರಿಂದ ಹೊಸ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಸಿ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ. ಅದರಲ್ಲಿಯೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿಕ ಮದ್ದೂರು, ಶ್ರೀರಂಗಪಟ್ಟಣದ ಪ್ರವಾಸಿ ತಾಣಕ್ಕೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಇಲ್ಲದಿದ್ದರೆ ಪ್ರವಾಸಿಗರು ಮಂಡ್ಯದಿಂದ ದೂರಾಗುತ್ತಾರೆ.

    ರಸ್ತೆಗಳಿಗೆ ಬೇಕಿದೆ ಕಾಯಕಲ್ಪ
    ರಸ್ತೆಗಳ ವಿಚಾರದಲ್ಲಿ ಜಿಲ್ಲೆಯ ಜನರು ದುರಾದೃಷ್ಟವಂತರು ಎಂದರೂ ತಪ್ಪಾಗಲಾರದು. ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ರಸ್ತೆ ಸಮಸ್ಯೆ ತಾಂಡವವಾಡುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೇ ರಸ್ತೆ ಗುಂಡಿಯಿಂದ ಮಾಜಿ ಸೈನಿಕರೊಬ್ಬರು ಪ್ರಾಣ ಬಿಟ್ಟ ಪ್ರಕರಣ ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು. ಸಾರ್ವಜನಿಕರಿಂದ ಕೋಟ್ಯಂತರ ರೂ ತೆರಿಗೆ ಸಂಗ್ರಹಿಸುವ ಸರ್ಕಾರ, ಸ್ಥಳೀಯ ಸಂಸ್ಥೆಗಳು ಕನಿಷ್ಟ ರಸ್ತೆಯನ್ನು ಮಾಡಿಕೊಳ್ಳದಷ್ಟು ಹೀನಾಯ ಪರಿಸ್ಥಿತಿ ತಲುಪಿದೆಯೇ ಎನ್ನುವ ಬೇಸರ ಜನರನ್ನು ಕಾಡುತ್ತಿದೆ. ಇನ್ನಾದರೂ ಗುಣಮಟ್ಟದ ರಸ್ತೆ ಮಾಡಲು ಸಂಬಂಧಪಟ್ಟವರು ಗಮನಹರಿಸಬೇಕಿದೆ. ಇದರೊಟ್ಟಿಗೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಸಭಾಂಗಣಗಳ ಅಭಿವೃದ್ಧಿಯಾಗಬೇಕಿದೆ.

    ಮಳೆ ಸಮಸ್ಯೆಯಿಂದ ಮುಕ್ತಿ ಕೊಡಿಸಿ
    ಇತ್ತೀಚಿನ ವರ್ಷಗಳಲ್ಲಿ ಜನರನ್ನು ಅದರಲ್ಲಿಯೂ ವರುಣನ ಅಬ್ಬರ ರೈತರು ಹಾಗೂ ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರ ನೆಮ್ಮದಿ ಹಾಳು ಮಾಡಿದೆ. ಇದು ಗ್ರಾಮೀಣದಲ್ಲಿ ಒಂದು ರೀತಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದರೆ, ನಗರದಲ್ಲಿಯೂ ಜನರನ್ನು ಆತಂಕಕ್ಕೆ ದೂಡುತ್ತಿದೆ. ಅದರಲ್ಲಿಯೂ ಜಿಲ್ಲಾ ಕೇಂದ್ರದ ಸ್ಥಿತಿ ದೇವರಿಗೆ ಪ್ರೀತಿ. ಮಳೆ ಎಂದರೆ ಸ್ಲಂ ನಿವಾಸಿಗಳು ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವವರು ಹೆದರುವಂತಾಗುತ್ತದೆ. ಇದಕ್ಕೆಲ್ಲ ಶಾಶ್ವತ ಪರಿಹಾರದ ಅವಶ್ಯಕತೆ ಇದೆ.
    ಕೆರೆಗಳ ಒತ್ತುವರಿ, ನೀರಿನ ಮೂಲಗಳ ಸಂರಕ್ಷಣೆ ಮಾಡದ ಪರಿಣಾಮ ಮಳೆ ಬಂದಾಗ ನೀರು ಸಂಗ್ರಹವಾಗುತ್ತಿಲ್ಲ. ಪರಿಣಾಮ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿದೆ. ಇತ್ತ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸದಿರುವುದು, ತಗ್ಗು ಪ್ರದೇಶಕ್ಕೆ ನೀರು ಹೋಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದರಿಂದ ಸಾರ್ವಜನಿಕರ ಪಾಡು ಹೇಳತೀರದು. ಕೃತಕವಾಗಿ ಸೃಷ್ಟಿಸಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts