More

    ಪದವಿಗೆ ಹೆಚ್ಚುವರಿ ಸೀಟ್: ಬಿ.ಸಿ.ಎ, ಬಿ.ಕಾಂಗೆ ಡಿಮಾಂಡ್ 

    ಮಂಗಳೂರು/ಉಡುಪಿ: ಪಿಯುಸಿ ಉತ್ತಮ ಫಲಿತಾಂಶ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಪದವಿಗೆ ಡಿಮಾಂಡ್ ಹೆಚ್ಚಿದ್ದು, ಮಂಗಳೂರು ವಿವಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೀಟ್ ಒದಗಿಸಲು ಸಿದ್ಧವಾಗಿದೆ. ಈ ಬಾರಿ ಹೆಚ್ಚು ಮಂದಿಗೆ ಪಿಯುಸಿಯಲ್ಲಿ ಪ್ರಥಮ ದರ್ಜೆ ಅಂಕ ಪಡೆದಿದ್ದಾರೆ. ಸಹಜವಾಗಿಯೇ, ಪದವಿ ಪ್ರವೇಶಕ್ಕೆ ಹೆಚ್ಚು ಮಂದಿ ಅರ್ಜಿ ಪಡೆದುಕೊಳ್ಳುತ್ತಿದ್ದಾರೆ.
    ಹೆಚ್ಚು ಮಂದಿ ಪದವಿ ಕೋರ್ಸ್‌ಗೆ ಬರಲು ಸಿದ್ಧರಾದರೆ ಅವರೆಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ಆದೇಶವೂ ಇದೆ. ಹಾಗಾಗಿ ಎಲ್ಲರಿಗೂ ಈ ಬಾರಿ ಪ್ರವೇಶ ಸಿಗಲಿದೆ ಎಂದು ಜಿಲ್ಲೆಯ ಪದವಿ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ.ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.

    ಬಿಸಿಎ, ಬಿಕಾಂಗೆ ಅಧಿಕ ಬೇಡಿಕೆ: ಮಂಗಳೂರು ನಗರದ ಅನೇಕ ಕಾಲೇಜುಗಳಲ್ಲಿ ಬಿಸಿಎ(ಕಂಪ್ಯೂಟರ್ ಅಪ್ಲಿಕೇಶನ್ಸ್) ಹಾಗೂ ಬಿಕಾಂಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕೆನರಾ ಕಾಲೇಜಿನಲ್ಲಿ ಬಿಸಿಎ ಎರಡು ಬ್ಯಾಚ್‌ಗಳಲ್ಲಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನೇಕ ಪ್ರಮುಖ ಖಾಸಗಿ ಕಾಲೇಜುಗಳಲ್ಲಿ ಸೀಟ್ ಭರ್ತಿಯಾಗಿದೆ. ಬೇಕಾದ ಕಾಂಬಿನೇಶನ್ ಸಿಗುತ್ತಿಲ್ಲ ಎಂಬ ದೂರುಗಳೂ ವಿದ್ಯಾರ್ಥಿಗಳಿಂದ ಕೇಳಿಬರತೊಡಗಿದೆ. ಮಂಗಳೂರು ಕಾರ್‌ಸ್ಟ್ರೀಟ್‌ನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿಯೂ ಬಿಸಿಎಗೆ ಡಿಮಾಂಡ್ ಬಂದಿದ್ದು, ಈ ಬಾರಿ 120ರವರೆಗೂ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಸಾಧ್ಯತೆ ಇದೆ. ಬಿಕಾಂ ಹಾಗೂ ಬಿಎಸ್ಸಿಗೂ ಬೇಡಿಕೆ ಇದೆ. ಆದರೆ ಪಿಯುಸಿಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಬಿಎಗೆ ಅಷ್ಟಾಗಿ ಬೇಡಿಕೆ ಇಲ್ಲ.

    ಆರಂಭಗೊಂಡವು ಪದವಿ ಕಾಲೇಜುಗಳು: ಮಂಗಳೂರು ವಿವಿ ಹಾಗೂ ದ.ಕ., ಉಡುಪಿ, ಕೊಡಗು ವ್ಯಾಪ್ತಿಯ ಸಂಯೋಜಿತ ಒಟ್ಟು 207 ಪದವಿ ಕಾಲೇಜುಗಳು ಸೋಮವಾರದಿಂದ ಪುನರಾರಂಭಗೊಂಡಿವೆ. ಪದವಿ ಪರೀಕ್ಷೆ ಬಾಕಿ ಇರುವ ಕಾರಣ ಭೌತಿಕ ತರಗತಿಗಳು ಆ.16ರಿಂದ ಶುರುವಾಗಲಿವೆ. ಸೋಮವಾರ ಬಹುತೇಕ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಕೆಲ ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾದರು. ಆದರೆ ಭೌತಿಕ ತರಗತಿಗಳು ನಡೆಯಲಿಲ್ಲ. ಈ ಮಧ್ಯೆ ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳ ಪದವಿ ದಾಖಲಾತಿಗಾಗಿ ವಿದ್ಯಾರ್ಥಿಗಳು, ಪಾಲಕರು ಕಾಲೇಜಿಗೆ ಆಗಮಿಸಿದರು.

    1, 3, 5 ಹಾಗೂ 7ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ಆ.2ರಿಂದ ಹಾಗೂ 1 ಹಾಗೂ 3ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆ.5ರಿಂದ ನಡೆಯಲಿದೆ. ಹೀಗಾಗಿ ಸದ್ಯ ಕಾಲೇಜು ಅಧಿಕೃತವಾಗಿ ಆರಂಭವಾದರೂ, ಮುಂದಿನ ಪರೀಕ್ಷೆಗೆ ಓದಲು ವಿದ್ಯಾರ್ಥಿಗಳಿಗೆ ಈಗ ಅವಕಾಶ ನೀಡಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.

    ಸಂದೇಶ ನಿವಾರಣೆಗಷ್ಟೇ ಅವಕಾಶ: ಪರೀಕ್ಷೆ ಸಂಬಂಧಿಸಿ ಯಾವುದಾದರೂ ಪ್ರಶ್ನೆ, ಸಂಶಯಗಳಿದ್ದರೆ ನಿವಾರಿಸಲು ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸಿ ಸಂಬಂಧಿಸಿದ ಅಧ್ಯಾಪಕರಿಂದ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2020 ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿಯೂ ಸೋಮವಾರದಿಂದ ಪ್ರಾಧ್ಯಾಪಕರಲ್ಲಿ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ತರಗತಿಗಳು ಪ್ರಾರಂಭವಾಗಿಲ್ಲ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಾಕಿ ಇರುವ ಸೆಮಿಸ್ಟರ್ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಯುತ್ತಿದೆ.

    ಹೆಚ್ಚು ವಿದ್ಯಾರ್ಥಿಗಳು ಬಂದರೆ ಘಟಕ ಕಾಲೇಜುಗಳಲ್ಲಿ ಎರಡು ಪಾಳಿಗಳಲ್ಲಿ ಪದವಿ ತರಗತಿ ಪ್ರಾರಂಭಿಸಬಹುದು. ನಮ್ಮ ಘಟಕ ಕಾಲೇಜಿನ ಸಂಧ್ಯಾ ಕಾಲೇಜಿನಲ್ಲೂ ಹೆಚ್ಚುವರಿ ಪಾಳಿಗಳೊಂದಿಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು. ಉಳಿದ ಖಾಸಗಿ, ಅನುದಾನಿತ ಪದವಿ ಕಾಲೇಜುಗಳಲ್ಲೂ ಸೌಲಭ್ಯ ಇದ್ದರೆ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಮತಿ ನೀಡಲಾಗುವುದು.
    ಪ್ರೊ.ಪಿ.ಎಸ್.ಯಡಪಡಿತ್ತಾಯ ಕುಲಪತಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts