More

    ಕುಡಿಯಾಕ ನೀರ ಕೊಡ್ರೋ ಮಾರಾಯ…  ದಾವಣಗೆರೆ ಜಿಲ್ಲೆಯಲ್ಲಿ ಬರಿದಾದ 191 ಕೆರೆಗಳು  ಬೋರ್‌ವೆಲ್ ಕೊರೆಸಲು ಪೈಪೋಟಿ

    ಡಿ.ಎಂ. ಮಹೇಶ್, ದಾವಣಗೆರೆ
     ನಮ್ಮೂರಾಗೆ ನೀರಿನ ಅಭಾವ ಭಾಳಾ ಆಗೈತಿ. ಬೆಳಗ್ಗೆ ಹೊತ್ನಾಗೆ ಜನ ಸಾಲುಗಟ್ತಾರೆ. ಒಂದ್ ಗಂಟಿ ನೀರು ಬಿಡ್ತಾರ. ಮುಂದಿದ್ದವ್ರಿಗೆ  ಸಿಕ್ಕರೆ ಹಿಂದಿದ್ದವರಿಗೆ ಇಲ್ಲ. ದನಕರುಗಳ್ಗೂ ನೀರಿನ ತ್ರಾಸು. ಒಬ್ಬೊಬ್ಬರಿಗೆ ಆರೆಂಟು ಕೊಡ ಸಿಕ್ಕರೆ ಏನು ಮಾಡ್ಬೇಕು?
     ಗುಡಾಳು ಗ್ರಾಪಂ ವ್ಯಾಪ್ತಿಯ ಕದಿರಪ್ಪನಹಟ್ಟಿ ನಿವಾಸಿ ವೃದ್ಧೆ ಲಕ್ಕಮ್ಮ ತೋಡಿಕೊಂಡ ಗೋಳಿದು.
     ದಾವಣಗೆರೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲೀಗ ದಿನಕ್ಕೆರಡು ಬೋರ್‌ವೆಲ್ ಲಾರಿಗಳ ಕರ್ಕಶ ಸದ್ದು. ರೀ ಡ್ರಿಲ್ಲಿಂಗ್ ಮಾಡಿದ್ದಕ್ಕೆ ಕೃಷಿ ಜಮೀನುಗಳಲ್ಲಿ ಮಣ್ಣಿನ ಗುಡ್ಡೆಗಳ ಅವಶೇಷ. ಬಾಡಿಗೆಯಾಧಾರಿತ ಖಾಸಗಿ ಕೊಳವೆಬಾವಿಗಳಿಂದ ಪೂರೈಸುವ ನೀರಿಗಾಗಿ ಕೈಗಾಡಿ-ಕೊಡಪಾನಗಳ ಸರಹದ್ದು. ಸರದಿ ಸಾಲಿನಲ್ಲಿ ನಿಂತ ಹೆಂಗಳೆಯರ ರಂಪಾಟದ ಸುಪ್ರಭಾತ!
     ಬರಗಾಲದ ಜತೆಯಲ್ಲೇ ಅಂತರ್ಜಲ ಮಟ್ಟ ಪಾತಾಳಕ್ಕಿಳಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೊಳವೆಬಾವಿ ಕೊರೆಸಲು ಸರ್ಕಾರದ ಆದೇಶವಿಲ್ಲವಾದರೂ ಕೆಲ ಗ್ರಾಮಸ್ಥರು, ದೇವಸ್ಥಾನ ಸಮಿತಿಗಳು, ರೈತರು ಬೋರ್‌ವೆಲ್ ಲಾರಿಗಳ ಹಿಂದೆ ಬಿದ್ದಿದ್ದಾರೆ.
     ಜಿಲ್ಲೆಯಲ್ಲಿ ಸದ್ಯಕ್ಕೆ ತೀವ್ರ ಸಮಸ್ಯೆ ಇರುವ ಕಡೆಗಳಲ್ಲಿ 19 ಖಾಸಗಿ ಕೊಳವೆಬಾವಿಗಳನ್ನು 10 ರಿಂದ 15 ಸಾವಿರ ರೂ. ಬಾಡಿಗೆಯಂತೆ ನಿರ್ವಹಣೆ ಮಾಡಲಾಗುತ್ತಿದೆ. ತಮ್ಮ ತೋಟ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆಲವರು ಜಿಪಂ ಜತೆಗೆ ಮಾಡಿಕೊಂಡಿದ್ದ ಖಾಸಗಿ ಬೋರ್‌ವೆಲ್‌ನ ಒಪ್ಪಿಗೆಯಿಂದ ಹಿಂದೆ ಸರಿಯುತ್ತಿದ್ದಾರೆ!
     ಜಿಲ್ಲೆಯಲ್ಲಿ 32 ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿದ್ದು, ಪ್ರತಿ 500 ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಇರಾದೆ ಇದೆ. ಆದರೆ, ದಾವಣಗೆರೆ ಮತ್ತು ಚನ್ನಗಿರಿ ತಾಲೂಕಿನ ತಲಾ 9 ಬಹುಗ್ರಾಮ ಯೋಜನೆಗಳಿಗೂ ಭದ್ರಾ ನೀರೇ ಮೂಲಾಧಾರ. ಸದ್ಯಕ್ಕೆ ಭದ್ರಾ ನೀರು ನಾಲೆಗಳಿಗೆ ನಿಲುಕಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬಹುಗ್ರಾಮ ಯೋಜನೆ ಮೇಲೂ ಪ್ರತಿಕೂಲ ಪರಿಣಾಮ ಬೀರದಿರುವ ಸಾಧ್ಯತೆ ಇಲ್ಲದಿಲ್ಲ.
     162 ಗ್ರಾಮಗಳಲ್ಲಿ ಸಮಸ್ಯೆ ಸಾಧ್ಯತೆ
     ಮಾರ್ಚ್ ಅಂತ್ಯಕ್ಕೆ 126 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಬಗ್ಗೆ ಜಿಪಂ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ ಅಂದಾಜಿಸಿತ್ತು. ಏರುತ್ತಿರುವ ಉಷ್ಣಾಂಶದ ಗತಿಯಿಂದಾಗಿ ಸಮಸ್ಯೆ ಪ್ರಮಾಣ ಹೆಚ್ಚಿದೆ. ಮಾರ್ಚ್-ಏಪ್ರಿಲ್ ವೇಳೆಗೆ 162 ಗ್ರಾಮಗಳಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಬಗ್ಗೆ ಹೊಸ ಪಟ್ಟಿ ತಯಾರಾಗಿದ್ದು, ಕ್ರಿಯಾಯೋಜನೆಗೆ ಜಿಪಂ ಸಜ್ಜಾಗುತ್ತಿದೆ.
     ದಾವಣಗೆರೆ ತಾಲೂಕಿನಲ್ಲಿ 56, ಚನ್ನಗಿರಿ- 40, ಜಗಳೂರು- 26, ಹರಿಹರ-21, ಹೊನ್ನಾಳಿ-19 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಅಂದಾಜಿದೆ. ನಿತ್ಯ ಒಂದರಿಂದ ಎರಡು ಹಳ್ಳಿ ಹೆಚ್ಚುವರಿಯಾಗಿ ಪಟ್ಟಿಗೆ ಸೇರುತ್ತಿವೆ ಎಂಬುದು ಅಧಿಕಾರಿಗಳ ಮಾತು.
     19 ಖಾಸಗಿ ಬೋರ್‌ವೆಲ್:
     ತೀವ್ರ ಸಮಸ್ಯೆಯುಳ್ಳ ಕಡೆಗಳಲ್ಲಿ 19 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ನೀಡಲಾಗುತ್ತಿದೆ.  ತಾಲೂಕುವಾರು ಅವುಗಳ ವಿವರ ಹೀಗಿದೆ.
     ಚನ್ನಗಿರಿ: ಕೆರೆಬಿಳಚಿ, ಹೊಸೂರು, ವಡ್ನಾಳ್, ದಾವಣಗೆರೆ: ಜಮ್ಮಾಪುರ, ಕದರಪ್ಪನಹಟ್ಟಿ, ವಿನಾಯಕನಗರ ಕ್ಯಾಂಪ್, ಮಲ್ಲಾಪುರ, ಹರಿಹರ: ದೇವರಬೆಳಕೆರೆ, ಹೊನ್ನಾಳಿ: ಹುಣಸೇಹಳ್ಳಿ, ಅರಕೆರೆ, ಕುಂಕೋವ, ಕತ್ತಿಗೆ, ಜಗಳೂರು: ತಿಮ್ಲಾಪುರ, ಯರ‌್ಲಕಟ್ಟೆ, ಪಲ್ಲಾಗಟ್ಟೆ ಗ್ರಾಮ. ಇತರೆ 16 ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಡಿ ಪಡೆಯುವ ಪ್ರಯತ್ನ ನಡೆಯುತ್ತಿದೆ.
     ಮಿತಿ ಮೀರಿದ ಅಂತರ್ಜಲ ಕನ್ನ!:
     ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 4225 ಕೊಳವೆಬಾವಿಗಳು ಸಕ್ರಿಯವಾಗಿವೆ. ಇತರೆ 345 ನಿಷ್ಕ್ರಿಯವಾಗಿವೆ. 2023-24ನೇ ಸಾಲಿನಲ್ಲಿ ಸರ್ಕಾರದ ಅನುಮೋದನೆ (ಜಲಜೀವನ್ ಮಿಷನ್ )ಪಡೆದದ್ದೂ ಒಳಗೊಂಡಂತೆ ಕೊರೆಸಲಾದ ಒಟ್ಟು 104 ಬೋರ್‌ವೆಲ್‌ಗಳು ಸಫಲವಾಗಿವೆ. ಒಂದು ವಿಫಲವಾಗಿದೆ. ಇತರೆ 27ರಲ್ಲಿ ನೀರಿನ ಇಳುವರಿ ಕ್ಷೀಣಿಸಿದೆ.
     ಅಗತ್ಯಕ್ಕಿಂತಲೂ ಹೆಚ್ಚಾಗಿ ಅಂತರ್ಜಲಕ್ಕೆ ಕನ್ನ ಹಾಕುವ ಪ್ರಮಾಣ ಮಿತಿ ಮೀರಿದೆ. ಒಂದೇ ಜಮೀನಿನಲ್ಲಿ 1ರಿಂದ 4 ಬೋರ್‌ವೆಲ್ ಕೊರೆಸಲಾಗುತ್ತಿದೆ. ಬೋರ್‌ವೆಲ್ ಲಾರಿ ಮಾಲೀಕರಿಗೆ ಕಡಿವಾಣ ಹಾಕಲು ಆಲೋಚಿಸಲಾಗುತ್ತಿದೆ ಎನ್ನುತ್ತವೆ ಜಿಪಂ ಮೂಲಗಳು.
     ಜಲಪಾತ್ರೆ ಖಾಲಿ!:
     ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 212 ಕೆರೆಗಳಿದ್ದು 191 ಜಲಪಾತ್ರೆ ಬರಿದಾಗಿವೆ. ಇದರಲ್ಲಿ ಚನ್ನಗಿರಿ ತಾಲೂಕಿನ 86, ನ್ಯಾಮತಿ-56, ಜಗಳೂರು-25, ದಾವಣಗೆರೆ- 14, ಹರಿಹರ-5 ಕೆರೆಗಳಿವೆ. ಶೇ. 30 ರಷ್ಟು ನೀರಿನ ಲಭ್ಯತೆ ಇರುವ 22 ಕೆರೆಗಳು ಉಸಿರಾಡುತ್ತಿವೆ.
     ಕೆರೆಗಳನ್ನೇ ನಂಬಿಕೊಂಡ ಮೀನುಗಾರರ ಬದುಕು ಕೂಡ ಬರುವ ದಿನಗಳಲ್ಲಿ ಸಂಕಷ್ಟಕ್ಕೀಡಾಗುವ ಲಕ್ಷಣಗಳಿವೆ. ವಿಲೇವಾರಿಯಾದ ಕೆರೆಗಳಲ್ಲಿ ಕಳೆದ ವರ್ಷ 42 ಸಾವಿರ ಮೀನು ಉತ್ಪಾದಿಸಲಾಗಿದ್ದರೆ ಈ ಬಾರಿ 22 ಸಾವಿರ ಟನ್‌ಗೆ ಇಳಿದಿದೆ ಎನ್ನುತ್ತಾರೆ ಅಧಿಕಾರಿಗಳು.
     ನಿಲ್ಲದ ಪಂಪ್‌ಸೆಟ್ ಹಾವಳಿ:
     ಜಿಲ್ಲಾಡಳಿತ ಅಕ್ರಮ ಪಂಪ್‌ಸೆಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ದಾವಣಗೆರೆ ನಾಲಾ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ನೀರ‌್ಗಳ್ಳತನ ನಿಂತಿಲ್ಲ. ಅಧಿಕಾರಿಗಳು ಕಾರ್ಯಾಚರಣೆ ಮಾಡುವ ವೇಳೆ ಕಾಣದ ಪಂಪ್‌ಸೆಟ್‌ಗಳು ರಾತ್ರಿ ವೇಳೆ ನಾಲೆಗಿಳಿಯಲಿವೆ. ಇದರಿಂದ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸಬಹುದು ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.  
     ವಿನಾಯಕನಗರ ಕ್ಯಾಂಪಿಗೆ ಕಾಲಿಟ್ಟ ಟ್ಯಾಂಕರ್:
     ಹಿರೇತೊಗಲೇರಿ ಸಮೀಪದ, ಕುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಸಮಸ್ಯೆಗೀಡಾಗಿದ್ದ ವಿನಾಯಕನಗರ ಕ್ಯಾಂಪ್‌ಗೆ ಶುಕ್ರವಾರ ಟ್ಯಾಂಕರ್ ನೀರಿನ ದರ್ಶನವಾಯಿತು. ಸ್ಥಳೀಯರು ಇದರಿಂದ ಖುಷಿಪಟ್ಟರು. ಗುಡ್ಡ ಪ್ರದೇಶದ ಈ ಭಾಗದಲ್ಲಿ 15 ಮನೆಗಳಿವೆ. ಬಾಡಿಗೆ ಆಧಾರದಡಿ ಪಡೆದಿದ್ದ ಬೋರ್‌ವೆಲ್‌ನವರು ನೀರು ಕೊಡಲು ನಿರಾಕರಿಸಿದ್ದರಿಂದ ಶುಕ್ರವಾರದಿಂದ ಟ್ಯಾಂಕರ್ ಪ್ರವೇಶ ಮಾಡಿದೆ.
     —
     
     ನಮ್ಮೂರಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ನೀರು ವಿತರಣೆ ಅವಧಿ ಇನ್ನೊಂದು ಗಂಟೆ ಹೆಚ್ಚಿಸಬೇಕು. ಸಮೀಪದ ಅರಣ್ಯ ಇಲಾಖೆ ಜಾಗದಲ್ಲಿ ಗೋಕಟ್ಟೆ ನಿರ್ಮಿಸಿದರೆ ಜಾನುವಾರುಗಳಿಗೆ ಅನುಕೂಲವಾಗಲಿದೆ.
     ಕೆ. ನಾಗರಾಜ್, ಕದಿರಪ್ಪನಹಟ್ಟಿ ನಿವಾಸಿ.


     
     ಊರಲ್ಲಿದ್ದ ಬೋರ್ ಕೆಟ್ಟು ಹೋಗಿ ಎರಡು ತಿಂಗಳಾತು. ರಾತ್ರೋರಾತ್ರಿ ಹಾವು-ಚೇಳು ಎನ್ನದಂಗೆ ಓಡಾಡಿ ನೀರು ತಗೋಬರಬೇಕಿತ್ತು. ಯಾರದೋ ಹೊಲದಲ್ಲಿ ಕಾಡಿ ಬೇಡಿ ಬರುತ್ತಿದ್ದೆವು. ಇವತ್ತು ಟ್ಯಾಂಕರ್ ಬಂದಿದ್ದು ಖುಷಿಯಾತು.
     ಕವಿತಾ, ವಿನಾಯಕನಗರ ಕ್ಯಾಂಪ್ ನಿವಾಸಿ.


     —
     
     ಕುಡಿವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ತೀವ್ರ ಸಮಸ್ಯಾತ್ಮಕ 19 ಕಡೆಗಳಲ್ಲಿ ಖಾಸಗಿ ಕೊಳವೆಬಾವಿ ನೆರವು ಪಡೆಯಲಾಗಿದೆ. ರೀ ಡ್ರಿಲ್ಲಿಂಗ್, ಹೈಡ್ರೋಫಾಕ್ಚರಿಂಗ್‌ಗೆ ಗಮನ ಹರಿಸಲಾಗುತ್ತಿದೆ. ಸಮಸ್ಯೆ ಉದ್ಭವಿಸಿದ ಕಡೆಗಳಲ್ಲಿ 24 ತಾಸಿನಲ್ಲಿ ಪರಿಹಾರ ಒದಗಿಸಲಾಗುತ್ತಿದೆ. ಸೂಳೆಕೆರೆಗೆ ನಿತ್ಯ 50 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು 1 ತಿಂಗಳವರೆಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ವ್ಯತ್ಯಯವಾಗದು. ನಾಲೆಗಳ ಮೇಲೆ ರಾತ್ರಿ ಗಸ್ತು ಮಾಡಲಾಗುತ್ತಿದ್ದು, ಜನರೇಟರ್, ಪಂಪ್‌ಗಳನ್ನು ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ.
     ಡಾ.ಎಂ.ವಿ.ವೆಂಕಟೇಶ್,  ಜಿಲ್ಲಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts