More

    ರಾಜಕೀಯ ಕ್ಷೇತ್ರಕ್ಕೆ ಬೇಕು ಸಾತ್ವಿಕರ ಪ್ರವೇಶ

    ದಾವಣಗೆರೆ : ಸಾಮಾಜಿಕ ಕಳಕಳಿ ಇರುವ ಸಾತ್ವಿಕರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
     ಜಿ.ಬಿ. ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಅಂಗವಿಕಲರಿಗೆ ಗಾಲಿ ಕುರ್ಚಿ, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
     ಹಣವಂತರು ಮಾತ್ರ ಈ ಕ್ಷೇತ್ರಕ್ಕೆ ಬರಲು ಸಾಧ್ಯ ಎನ್ನುವ ಭಾವನೆಯಿದೆ. ಚುನಾವಣೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಗೆದ್ದ ನಂತರ ಅದರ ಎರಡರಷ್ಟು ಹಣ ಗಳಿಸುವುದನ್ನು ನೋಡಿದ್ದೇವೆ. ಆದರೆ ಆದರ್ಶ ವ್ಯಕ್ತಿಗಳೂ ಇದ್ದಾರೆ. ಮತದಾರರು ಬದಲಾದರೆ ವ್ಯವಸ್ಥೆ ಸರಿ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
     ರಾಜಕೀಯ ಕ್ಷೇತ್ರ ಅಷ್ಟು ಸುಲಭವಲ್ಲ. ಯಾವಾಗ ಯಾರನ್ನು ಮೇಲೆತ್ತುವುದೋ, ಯಾರನ್ನು ಕೆಳಗಿಳಿಸುವುದೋ ಹೇಳಲಾಗದು. ಹಾಗಂತ ನಿರಾಶರಾಗಬಾರದು, ದೂರ ಸರಿಯಬಾರದು ಎಂದು ಕಿವಿಮಾತು ಹೇಳಿದರು.
     ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ತಮ್ಮ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರು. ಇತ್ತೀಚೆಗೆ ನಾಡಿನಲ್ಲಿ ಸರಳತೆ ಕಡಿಮೆಯಾಗಿ ವೈಭವಕ್ಕೆ ಮಾನ್ಯತೆ ಬರುತ್ತಿದೆ ಎಂದರು.
     ಹೊಸದುರ್ಗ ಕನಕ ಗುರುಪೀಠದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದವರು, ದಲಿತರು ಸೇರಿ ಎಲ್ಲ ವರ್ಗದವರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಯುವಕರು ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.
     ಇನ್ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ 2.4 ಕೋಟಿ ಅಂಗವಿಕಲರಿದ್ದಾರೆ, ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ರೈತರು, ದಲಿತರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
     ಇದೇ ವೇಳೆ ಅಂಗವಿಕಲರಿಗೆ ಗಾಲಿ ಕುರ್ಚಿ, ವಾಕರ್ ಮತ್ತು ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಫಾದರ್ ರಾಜಶೇಖರ್, ಪತ್ರಕರ್ತ ಮಧುಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts