More

    ಜಗತ್ತಿನ ಶ್ರೇಷ್ಠ ವಾಸ್ತುಶಿಲ್ಪಿ ಜಕಣಾಚಾರಿ

    lವಿಜಯವಾಣಿ ಸುದ್ದಿಜಾಲ ದಾವಣಗೆರೆ
     ನಾಡಿನ ಶಿಲ್ಪಕಲೆಗೆ ಅಮೋಘ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಜಗತ್ತಿನ ಶ್ರೇಷ್ಠ ವಾಸ್ತುಶಿಲ್ಪಿ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ದೇವಾಲಯಗಳ ನಿರ್ಮಾಣ ಹಾಗೂ ವಾಸ್ತುಶಿಲ್ಪ ಕಲೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಕೈಗೊಂಡ ಅದ್ಭುತ ಕುಸುರಿ ಕೆಲಸ ಜಗತ್ತಿನಲ್ಲಿ ಎಲ್ಲೂ ಕೂಡ ಕಾಣುವುದಿಲ್ಲ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರಿದಿದ್ದರೂ ಅದನ್ನು ಪುನರ್ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
     ಇಂದು ಜಗತ್ತು ಬಹಳ ವೇಗವಾಗಿ ಚಲಿಸುತ್ತಿದ್ದು, ಹಳೆಯ ಸಾಧನೆ ಮೆಲುಕು ಹಾಕುತ್ತ ಹೊಸ ಬೆಳಕನ್ನು ಕಂಡುಕೊಳ್ಳಬೇಕು. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳ ಭವಿಷ್ಯ ರೂಪಿಸಬೇಕು ಹಾಗೂ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು. ಜಕಣಾಚಾರಿ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
     ಬಸಾಪುರ ಶಾಲೆಯ ಶಿಕ್ಷಕ ಎಂ.ನಾಗರಾಜ್ ಮಾತನಾಡಿ, ತುಮಕೂರು ಜಿಲ್ಲೆಯ ಕೈದಾಳೆಯಲ್ಲಿ ಜನಿಸಿದ ಅಮರಶಿಲ್ಪಿ ಜಕಣಾಚಾರಿ ಅವರು ಮೈಸೂರು ಸೋಮನಾಥ ದೇವಾಲಯದಿಂದ ತನ್ನ ಕಲೆಯನ್ನು ಆರಂಭಿಸಿ ಹಳೇಬೀಡು, ಬೇಲೂರು ಮೊದಲಾದೆಡೆ ಹಲವು ದೇಗುಲಗಳನ್ನು ನಿರ್ಮಿಸುವ ಮೂಲಕ ಕಲಾವೈಭವ ಮೆರೆದಿದ್ದಾರೆ ಎಂದು ಅವರ ಜೀವನ ಹಾಗೂ ಸಾಧನೆ ತಿಳಿಸಿದರು.
     ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಕುಶಲಕಲೆಗೆ ನೆರವಾಗುವ ಉದ್ದೇಶದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಮಾಡಿಸುವ ಮೂಲಕ ಯೋಜನೆ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
     ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ವಿ.ಶಿವಾನಂದ್ ಮಾತನಾಡಿ, ಜಕಣಾಚಾರಿಯವರು ಶಿಲ್ಪಕಲೆ ಮೂಲಕ ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿರುವುದು ಸಮಾಜದ ಹೆಗ್ಗಳಿಕೆ. ವಿಶ್ವಕರ್ಮ ಸಮಾಜದವರು ಯಾರ ಸಹಕಾರ ಪಡೆಯದೆ ಪಂಚವೃತ್ತಿ ನಡೆಸುತ್ತಿದ್ದು, ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
     ಮಹಾನಗರ ಪಾಲಿಕೆ ಉಪ ಮೇಯರ್ ಯಶೋದಾ ಹೆಗ್ಗಪ್ಪ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಜೇಂದ್ರ ಪ್ರಸಾದ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಬಸಾಪುರ ನಾಗೇಂದ್ರಾಚಾರ್, ಮೌನೇಶ್ವರಾಚಾರ್ ಇದ್ದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಕಲಾವಿದರನ್ನು ಸನ್ಮಾನಿಸಲಾಯಿತು.
     ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ರಂಗಕರ್ಮಿ ಎಸ್.ಎಸ್.ಸಿದ್ದರಾಜು ನಿರೂಪಿಸಿದರು.
     —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts