More

    ಅಂಚೆ ಕಚೇರಿಯಲ್ಲಿ ದಂಡ ಶುಲ್ಕ ಪಾವತಿಗೆ ವ್ಯವಸ್ಥೆ

    ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಜಿಲ್ಲೆಯ ಜನರು ಇನ್ನು ಮುಂದೆ ಹತ್ತಿರದ ಕಂಪ್ಯೂಟರೀಕೃತ ಅಂಚೆ ಕಚೇರಿಯಲ್ಲಿ ಪಾವತಿಸಬಹುದು. ಭಾರತೀಯ ಅಂಚೆ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
     ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳೂರು ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಈಗ ಎರಡನೇ ಜಿಲ್ಲೆಯಾಗಿ ದಾವಣಗೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
     ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ಈ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕ ಟಿ.ಎಸ್. ಅಶ್ವಥ್‌ನಾರಾಯಣ ಮಾತನಾಡಿ, ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ ಎಂದು ಹೇಳಿದರು.
     ಅಂಚೆ ಇಲಾಖೆಯಲ್ಲಿ ಕೋರ್ ಬ್ಯಾಂಕಿಂಗ್, ಜೀವವಿಮಾ ಸೌಲಭ್ಯ, ಡಿಜಿಟಲ್ ಪಾವತಿ ವ್ಯವಸ್ಥೆಯಿದೆ. ಬೆಂಗಳೂರಿನಲ್ಲಿ ಮಾವಿನ ಹಣ್ಣುಗಳನ್ನು ಸರಬರಾಜು ಮಾಡುವ ಸೌಲಭ್ಯವಿದೆ. ಅಲ್ಲಿನ ಆರ್‌ಟಿಒ ಇಲಾಖೆ ಜತೆಗೆ ಸಹಯೋಗವಿದ್ದು ಆರ್‌ಸಿ ಪುಸ್ತಕ, ಡಿಎಲ್ ಮುಂತಾದ ದಾಖಲೆಗಳನ್ನು ಸಾರ್ವಜನಿಕರ ಮನೆಗೆ ನೇರವಾಗಿ ತಲುಪಿಸಲಾಗುತ್ತಿದೆ. ಈ ರೀತಿ ಅಂಚೆ ಇಲಾಖೆಯಲ್ಲಿ ಬದಲಾವಣೆಗಳಾಗಿವೆ ಎಂದು ತಿಳಿಸಿದರು.
     ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿ, ಈ ಮೊದಲು ಥಿಮ್ಯಾಟಿಕ್ಸ್ ಆ್ಯಪ್ ಇತ್ತು. ಈಗ ಎನ್‌ಐಸಿ ಅಡಿಯಲ್ಲಿ ಇ-ಚಾನೆಲ್ ಆ್ಯಪ್ ಬಂದಿದೆ. ನೂತನ ತಂತ್ರಜ್ಞಾನದಿಂದ ಅನುಕೂಲವಾಗಿದೆ ಎಂದರು.
     ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ ಮಾತನಾಡಿ, ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರವೊಂದನ್ನು ಮಾಡುವ ಉದ್ದೇಶವಿದೆ ಎಂದು ಹೇಳಿದರು.
     ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಶೇ. 90ಕ್ಕೂ ಹೆಚ್ಚು ಅಪಘಾತಗಳು ಮನುಷ್ಯನ ತಪ್ಪುಗಳಿಂದಲೇ ಆಗುತ್ತವೆ. ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ 305 ಮಂದಿ ಮೃತಪಟ್ಟಿದ್ದರು. ಈ ವರ್ಷ ಆ ಸಂಖ್ಯೆ 216 ಆಗಿದೆ. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಇದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
     ಜಿಲ್ಲಾ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಸ್ಮಾರ್ಟ್‌ಸಿಟಿಯ ಐಟಿ ವಿಭಾಗದ ಮುಖ್ಯಸ್ಥ ವಿಶ್ವನಾಥ ಮಾತನಾಡಿದರು. ಅಂಚೆ ಇಲಾಖೆ ಸಹಾಯಕ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್ ಪ್ರಾರ್ಥಿಸಿದರು. ಸಂಚಾರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನಲವಾಗಲು ಮಂಜುನಾಥ್ ಸ್ವಾಗತಿಸಿದರು. ಮಾರುತಿ ನಿರೂಪಿಸಿದರು.
     …
     
     (ಬಾಕ್ಸ್)
     ದಂಡದ ಬಾಕಿ ಮೊತ್ತ 5.69 ಕೋಟಿ ರೂ
     ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ಪೊಲೀಸ್ ಇಲಾಖೆಯಿಂದ ವಿಧಿಸಿರುವ ದಂಡದ ಬಾಕಿ ಮೊತ್ತ 5.69 ಕೋಟಿ ರೂ. ತಲುಪಿದೆ.
     ಕಳೆದ 4 ವರ್ಷಗಳಲ್ಲಿ ಒಟ್ಟು 1.62 ಲಕ್ಷ ಇ-ಚಲನ್‌ಗಳನ್ನು ಹೊರಡಿಸಲಾಗಿದೆ. ಅದರಲ್ಲಿ ಇದುವರೆಗೆ 1.11 ಲಕ್ಷ ಚಲನ್‌ಗಳಿಗೆ ದಂಡ ಪಾವತಿಸಿಲ್ಲ. 2022ರಲ್ಲಿ ಅತಿ ಹೆಚ್ಚಿನ 45,913 ಚಲನ್‌ಗಳು ಬಾಕಿ ಉಳಿದಿವೆ. ಇದರ ದಂಡ ಮೊತ್ತ 2.38 ಕೋಟಿ ರೂ. ಆಗಿದೆ. 2023ರಲ್ಲಿ 18,871 ಇ-ಚಲನ್‌ಗಳನ್ನು ಹೊರಡಿಸಲಾಗಿದೆ. ಈ ಪೈಕಿ 16,164 ಇ-ಚಲನ್‌ಗಳಿಂದ 83.74 ಲಕ್ಷ ರೂ. ಬಾಕಿ ಇವೆ.
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts