More

    ಮಹಿಳಾ ನಿಲಯದಲ್ಲಿ ಮಂತ್ರ ಮಾಂಗಲ್ಯ ವಿವಾಹ

    ದಾವಣಗೆರೆ: ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ… ಎಲ್ಲಿಯದೋ ಈ ಅನುಬಂಧ…ಎನ್ನುವಂತೆ ಅಲ್ಲಿ ಶುಭಲಗ್ನದ ಸಂಭ್ರಮ ಮನೆಮಾಡಿತ್ತು. ಮುಂಬಾಗಿಲಲ್ಲಿ ಹಾಕಿದ ಹಂದರ ಹಾಗೂ ತಳಿರು ತೋರಣ ಎಲ್ಲರನ್ನೂ ಸ್ವಾಗತಿಸುತ್ತಿದ್ದವು.
     ನಗರದ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ನಿಲಯದ ಇಬ್ಬರು ಯುವತಿಯರ ವಿವಾಹ ಮಹೋತ್ಸವದ ಸಂಭ್ರಮದ ಕ್ಷಣವಿದು.
     ನಿಲಯದ ರಮ್ಯಾ ಜತೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಉಂಬಳಮನೆ ಸರಕುಳಿಯ ನಾಗರಾಜ ಪರಮೇಶ್ವರ ಹೆಗಡೆ ಹಾಗೂ ವಿನೋದ ಜತೆ ಹರಿಹರ ತಾಲೂಕು ದೇವರಬೆಳಕೆರೆಯ ಯು.ಎಂ. ಮಲ್ಲಿಕಾರ್ಜುನ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
     ಮಂಗಳವಾದ್ಯ ಹಾಗೂ ಮಂತ್ರಘೋಷಗಳ ಆಡಂಬರವಿಲ್ಲದೆ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ವಿಧಾನದ ಮೂಲಕ ಮಾಂಗಲ್ಯ ಧಾರಣೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀಕ್ಷಕ ಮಲ್ಲಿಕಾರ್ಜುನಯ್ಯ ಅವರು ಸರಳ ಜೀವನದ ಪ್ರತಿಜ್ಞಾವಿಧಿ ಬೋಧಿಸಿದರು.
     ತಂದೆ-ತಾಯಿ ಇಲ್ಲದೆ ಹಲವು ವರ್ಷಗಳಿಂದ ನಿಲಯದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಯುವತಿಯರ ಮದುವೆಯನ್ನು ಬಂಧು ಬಳಗದವರ ನಡುವೆ ಅಧಿಕಾರಿಗಳೇ ಮುಂದೆ ನಿಂತು ನೆರವೇರಿಸಿದರು. ನವ ವಧು-ವರರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.
     ಕೊಡಗು ಮೂಲದ ರಮ್ಯಾ ಅವರನ್ನು ವಿವಾಹವಾದ ನಾಗರಾಜ ಪರಮೇಶ್ವರ ಹೆಗಡೆ ಅವರು ಕೃಷಿ ಚಟುವಟಿಕೆ ನಿರ್ವಹಣೆಯ ಜತೆಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಾರೆ. ಇನ್ನು ಕೊಟ್ಟೂರಿನ ವಿನೋದ ಅವರನ್ನು ಮದುವೆಯಾದ ಯು.ಎಂ. ಮಲ್ಲಿಕಾರ್ಜುನ ಅವರು ವ್ಯವಸಾಯ ವೃತ್ತಿ ನಿರ್ವಹಿಸುತ್ತಿದ್ದಾರೆ. ವಿನೋದ ಅಂಗವಿಕಲೆ. ಪತಿ ಮಲ್ಲಿಕಾರ್ಜುನ್‌ಗೆ ಒಂದು ಕಣ್ಣು ಕಾಣಿಸುವುದಿಲ್ಲ. ಪರಸ್ಪರ ಒಪ್ಪಿಗೆ ಮೇರೆಗೆ ಮತ್ತು ಇಬ್ಬರ ಆರ್ಥಿಕ ಸದೃಢತೆ ಪರಿಗಣಿಸಿ ನಿವಾಸಿಗಳ ಪುನರ್ವಸತಿ ದೃಷ್ಟಿಯಿಂದ ವಿವಾಹ ಕಾರ್ಯ ನಡೆಸಲಾಯಿತು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಗರದ ಮಹಿಳಾ ನಿಲಯದಲ್ಲಿ ಪ್ರಸ್ತುತ 56 ನಿವಾಸಿಗಳು ಹಾಗೂ ಒಬ್ಬ ಮಕ್ಕಳಿದ್ದಾರೆ. ನಿಲಯದಲ್ಲಿ ಈವರೆಗೆ 40 ವಿವಾಹ ಹಾಗೂ 6 ನಾಮಕರಣ ಕಾರ್ಯಕ್ರಮ ನಡೆದಿವೆ. ನಿವಾಸಿಗಳ ಮದುವೆಯಾದ ನಂತರ ಮೂರು ತಿಂಗಳಿನಿಂದ ಹಿಡಿದು ಐದು ವರ್ಷಗಳವರೆಗೆ ಯೋಗಕ್ಷೇಮ ಕುರಿತು ವಿಚಾರಣೆ ನಡೆಸಲಾಗುತ್ತದೆ. ಇಲ್ಲಿ ವಿವಾಹ ಮಾಡಿಕೊಂಡು ಹೋದವರೆಲ್ಲ ಸುಖಜೀವನ ನಡೆಸುತ್ತಿದ್ದಾರೆ ಎಂದು ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದರು.
     ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ.ಕೆ.ಅರುಣ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ರಾಜ್ಯ ಮಹಿಳಾ ನಿಲಯ ಅಧೀಕ್ಷಕಿ ಶಕುಂತಲ ಬಿ. ಕೋಳೂರು ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಕೋರಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts