More

    ಕರೊನಾ ಭಯ ಬೇಡ, ಆದರೆ ಎಚ್ಚರವಿರಲಿ

    ದಾವಣಗೆರೆ: ಕರೊನಾ ವೈರಸ್ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲೆಯ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ ರೂಪಿಸಿದೆ.

    ಜನಸಂದಣಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಅಂಥ ಕಡೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸುವ ಕಾರ್ಯ ಮಂಗಳವಾರದಿಂದ ಆರಂಭವಾಗಿದೆ.

    ರೈಲು, ಬಸ್ ನಿಲ್ದಾಣಗಳಲ್ಲಿ, ಅದರಲ್ಲೂ ಟಿಕೆಟ್ ಕೌಂಟರ್‌ಗಳ ಬಳಿ, ಮಹಾನಗರ ಪಾಲಿಕೆ, ತಾಲೂಕು ಕಚೇರಿ, ಜಿಲ್ಲಾಡಳಿತ ಭವನ, ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ ಮತ್ತಿತರ ಕಡೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಭಿತ್ತಿಪತ್ರಗಳನ್ನು ಅಂಟಿಸಲಾಗುತ್ತಿದೆ.

    ‘ಭಯ ಬೇಡ, ಎಚ್ಚರವಿರಲಿ…’ ಎಂಬ ಸಂದೇಶ ಪೋಸ್ಟರ್‌ಗಳಲ್ಲಿದೆ. ಜಿಲ್ಲೆಯ ತಾಲೂಕುಗಳಿಗೂ ಪೋಸ್ಟರ್‌ಗಳನ್ನು ಕಳಿಸಲಾಗುತ್ತಿದೆ.

    ಭಿತ್ತಿಪತ್ರಗಳ ಜತೆಗೆ ಜನರಿಗೆ ಕರಪತ್ರಗಳನ್ನು ಹಂಚುವ ಮೂಲಕವೂ ಅರಿವು ಮೂಡಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಅವುಗಳನ್ನು ವಿತರಿಸಲಾಗುತ್ತಿದೆ. ಜಾತ್ರೆ, ಉತ್ಸವಗಳಂಥ ಹೆಚ್ಚು ಜನರು ಸೇರುವ ಕಡೆಗಳಲ್ಲೂ ಕರಪತ್ರಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗುತ್ತಿದೆ.

    ವೈದ್ಯಾಧಿಕಾರಿಗಳಿಗೆ ತರಬೇತಿ: ಕರೊನಾ ಬಗ್ಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮಾ. 12ರಂದು ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ತರಬೇತಿ ಆಯೋಜಿಸಲಾಗಿದೆ.

    ಈ ಸಂಬಂಧ ಇತ್ತೀಚೆಗೆ ರಾಜ್ಯಮಟ್ಟದಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ ಬಂದಿರುವ ಜಿಲ್ಲೆಯ ಇಬ್ಬರು, ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ. ಪಿಪಿಟಿ ಮೂಲಕ ರೋಗದ ಲಕ್ಷಣಗಳು, ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯುವ ಕುರಿತು ಮಾಹಿತಿ ನೀಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

    ಗ್ರಾಪಂ ಮಟ್ಟದಲ್ಲಿ ಅರಿವು: ಕರೊನಾ ಕುರಿತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಅರಿವು ಮೂಡಿಸುವ ಕೆಲಸ ಕೆಲ ಗ್ರಾಪಂಗಳಲ್ಲಿ ಈಗಾಗಲೇ ಆರಂಭವಾಗಿದೆ. ಮುಂದಿನ ವಾರದಿಂದ ಎಲ್ಲ ಗ್ರಾಪಂ ಮಟ್ಟದಲ್ಲೂ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts