More

    ಕಣದಲ್ಲಿ ಕೋಟಿ ವೀರರು

    ಕಾರವಾರ: ಕೋಟಿ ಆಸ್ತಿವಂತರಿಗೆ ಮಾತ್ರ ರಾಜಕೀಯ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ವಿಧಾನಸಭೆ ಚುನಾವಣೆಗೆ ಸರ್ಧಿಸಿದ ರಾಜಕೀಯ ಮುಖಂಡರು ತಮ್ಮ ಆಸ್ತಿಯ ವಿವರಗಳನ್ನು ನಿಯಮದಂತೆ ಘೋಷಿಸಿಕೊಂಡಿದ್ದು, ಅದರಲ್ಲಿ ಕೋಟಿ ವೀರರೇ ತುಂಬಿದ್ದಾರೆ.

    ಹೆಚ್ಚು ವಿದ್ಯಾರ್ಹತೆ ಹೊಂದಿದವರು ಕಡಿಮೆ. ಕಾರವಾರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳಿವೆ. ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ವಿರುದ್ಧ 2 ಕ್ರಿಮಿನಲ್ ಪ್ರಕರಣಗಳಿವೆ. ಸೂನೀಲ ಹೆಗಡೆ ಮೇಲೆ 1 ಪ್ರಕರಣವಿದೆ. ಸೋಮವಾರ ನಾಮಪತ್ರ ಸಲ್ಲಿಸಿದ ಪ್ರಮುಖರ ಆಸ್ತಿ ವಿವರ ಇಲ್ಲಿದೆ.

    ಕರಗಿದ 9 ಕೋಟಿ ಆಸ್ತಿ

    ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಆಸ್ತಿ ಕಳೆದ ಐದು ವರ್ಷಗಳಲ್ಲಿ 9.81 ಕೋಟಿ ರೂ. ಇಳಿಕೆಯಾಗಿದೆ. ಈ ಬಾರಿ ಅವರು ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಅಫಿಡವಿಟ್‌ನಲ್ಲಿ ಒಟ್ಟು 53.91 ಕೋಟಿ ರೂ. ಕುಟುಂಬದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 2018 ರಲ್ಲಿ ಅವರು 63.72 ಕೋಟಿ ರೂ. ಆಸ್ತಿ ಘೋಷಿಸಿದ್ದರು.
    ಈ ವರ್ಷ ಅವರ ಬಳಿ ಕಾರು, ಬಂಗಾರ, ಬ್ಯಾಂಕ್ ಡಿಫಾಸಿಟ್ ಸೇರಿ 29.23 ಕೋಟಿ ರೂ. ಚರ ಆಸ್ತಿಗಳು, 5.64 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳಿವೆ. ಅವರ ಪತ್ನಿ ಕಲ್ಪನಾ ಬಳಿ 16.69 ಕೋಟಿ ರೂ. ಚರ ಹಾಗೂ 40.35 ಲಕ್ಷ ರೂ. ಸ್ಥಿರ ಆಸ್ತಿಗಳಿವೆ. ಮಗಳು ಸಾದ್ವಿ ಹೆಸರಲ್ಲಿ 40.72 ಲಕ್ಷ ರೂ. ಚರ ಆಸ್ತಿಗಳು, 1.41 ಲಕ್ಷ ರೂ. ಸ್ಥಿರ ಆಸ್ತಿಗಳಿವೆ. ಇನ್ನೊಬ್ಬ ಮಗಳು ಸಾಚಿ ಬಳಿ 14 ಲಕ್ಷ 44 ಸಾವಿರ ರೂ. ಚರ ಆಸ್ತಿಗಳಿವೆ.

    ಸೈಲ್ ಹೆಸರಲ್ಲಿ 1.29 ಕೋಟಿ ರೂ. ಹಾಗೂ ಪತ್ನಿಯ ಹೆಸರಲ್ಲಿ 1.52 ಕೋಟಿ ರೂ. ಸಾಲವಿದೆ. ಇನ್ನು 14.54 ಕೋಟಿ ರೂ. ವೈಯಕ್ತಿಕವಾಗಿ ಕೊಡುವುದು ಬಾಕಿ ಇದೆ. 2018 ನೇ ಸಾಲಿನಲ್ಲಿ ಅವರ ಕುಟುಂಬದ ಹೆಸರಿನಲ್ಲಿ 23.79 ಕೋಟಿ ರೂ.ಸಾಲವಿತ್ತು. ಒಟ್ಟಾರೆ ಆಸ್ತಿ ಕಡಿಮೆಯಾಗಿದ್ದರೂ ಸಾಲದ ಹೊರೆಯೂ ಇಳಿದಿದೆ.
    13 ಪ್ರಕರಣ: ಸತೀಶ ಸೈಲ್ ಅವರ ಮೇಲೆ ಒಟ್ಟು 13 ಕ್ರಿಮಿನಲ್ ಪ್ರಕರಣಗಳಿವೆ. ಅಂಕೋಲಾ ಠಾಣೆಯಲ್ಲಿ 2, ಕಾರವಾರ ಠಾಣೆಯಲ್ಲಿ 3 ಹಾಗೂ ಉಳಿದ ಪ್ರಕರಣಗಳು ಅಕ್ರಮ ಅದಿರು ಸಾಗಣೆಗೆ ಸಂಬಂಸಿದಂತೆ ಸಿಬಿಐ ಸಲ್ಲಿಸಿದೆ. ಇದುವರೆಗೂ ಇವೆಲ್ಲ ವಿಚಾರಣೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದೆ.

    ರೂಪಾಲಿ ಆಸ್ತಿ 1.41 ಕೋಟಿ ಹೆಚ್ಚಳ

    ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರ ಕುಟುಂಬವು 5.76 ಕೋಟಿ ರೂ. ಆಸ್ತಿ ಹೊಂದಿದೆ. ಅವರ ಬಳಿ 4 ಕಾರು, 516 ಗ್ರಾಂ ಬಂಗಾರ ಎಲ್ಲ ಸೇರಿ 1.92 ಕೋಟಿ ರೂ. ಚರ ಆಸ್ತಿಗಳಿವೆ. ಕಾರವಾರ ನಗೆ ಕೋವೆ, ನಿವಳಿ, ಅಂಕೋಲಾದ ಹಿಲ್ಲೂರು, ಮೈಸೂರಿನಲ್ಲಿ ಕೃಷಿ ಜಮೀನು ಕೊಂಡಿದ್ದಾರೆ. ಕಾರವಾರ ನಗರದಲ್ಲಿ ಕೃಷಿಯೇತರ ಜಮೀನು, ಕಟ್ಟಡವಿದೆ. ಒಟ್ಟಾರೆ ಸೇರಿ 3.49 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಪತಿ ಸಂತೋಷ ನಾಯ್ಕ ಬಳಿ ಸ್ಕೂಟಿ ಮಾತ್ರ ಇದೆ. 13.96 ಲಕ್ಷ ರೂ. ಚರ, 21.70 ಲಕ್ಷ ರೂ. ಸ್ಥಿರ ಆಸ್ತಿಗಳಿವೆ. ರೂಪಾಲಿ ನಾಯ್ಕ ಅವರ ಹೆಸರಿನಲ್ಲಿ 1.45 ಕೋಟಿ ರೂ. ಸಾಲವಿದೆ. 2018 ರಲ್ಲಿ ಅವರು 4.35 ಲಕ್ಷ ರೂ. ಆಸ್ತಿ ಘೋಷಿಸಿಕೊಂಡಿದ್ದರು. 88.53 ಲಕ್ಷ ರೂ. ಸಾಲ ಇದೆ ಎಂದಿದ್ದರು. 5 ವರ್ಷಗಳಲ್ಲಿ 1.41 ಕೋಟಿ ರೂ. ಮೌಲ್ಯದ ಆಸ್ತಿ ಹೆಚ್ಚಿದೆ. ಜತೆಗೆ ಸಾಲವೂ ಹೆಚ್ಚಾಗಿದೆ.

    ದಿನಕರ 4.37. ಕೋಟಿ ಒಡೆಯ

    ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಕುಟುಂಬವು ಒಟ್ಟು 4.37 ಕೋಟಿ ರೂ. ಆಸ್ತಿ ಹೊಂದಿದೆ. ಅವರು ವೈಯಕ್ತಿಕವಾಗಿ 1 ಕಾರು ಸೇರಿ ಒಟ್ಟು 1.50 ಕೋಟಿ ರೂ. ಚರ ಆಸ್ತಿಗಳನ್ನು ಹೊಂದಿದ್ದಾರೆ. ಕಟ್ಟಿಗೆ ಸಾಮೀಲು , ಮನೆಯ ಜಾಗ ಸೇರಿ 90 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿಗಳಿವೆ. ಅವರ ಪತ್ನಿ ಉಷಾ ಬಳಿ 37 ಲಕ್ಷ ರೂ. ರೂ. ಚರ ಆಸ್ತಿಗಳಿದ್ದು, ಕುಮಟಾದಲ್ಲಿ ಕೃಷಿ ಹಾಗೂ ಕೃಷಿಯೇತರ ಜಮೀನು ಸೇರಿ 1.60 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ದಿನಕರರ ಹೆಸರಿನಲ್ಲಿ 9.77 ಲಕ್ಷ ರೂ. ಸಾಲವಿದೆ. 2018 ರ ಚುನಾವಣೆ ಸಂದರ್ಭದಲ್ಲಿ ಅವರು ಒಟ್ಟು 3.47 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. 35.96 ಲಕ್ಷ ರೂ. ಸಾಲವಿತ್ತು. ಈ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ 90 ಲಕ್ಷ ರೂ. ಆಸ್ತಿ ಹೆಚ್ಚಿದೆ. ಸಾಲ ಕಡಿಮೆಯಾಗಿದೆ.

    5 ವರ್ಷದಲ್ಲಿ 10 ಕೋಟಿ ಆಸ್ತಿ ಹೆಚ್ಚಳ

    ಕುಮಟಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾರದಾ ಮೋಹನ ಶೆಟ್ಟಿ ಅವರ ಕುಟುಂಬದ ಆಸ್ತಿ 18.66 ಕೋಟಿ ರೂ.ಗಳಾಗಿವೆ ಎಂದು ಅವರು ಘೋಷಿಸಿಕೊಂಡಿದ್ದಾರೆ. ಅವರ ಬಳಿ 1.11 ಕೋಟಿ ರೂ. ಚರ, 12.75 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಪುತ್ರ ರವಿಕುಮಾರ ಶೆಟ್ಟಿ ಅವರ ಬಳಿ 1.49 ಕೋಟಿ ರೂ. ಚರ ಹಾಗೂ 1.50 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಇನ್ನೊಬ್ಬ ಪುತ್ರ ದಿಲೀಪ ಬಳಿ 88.17 ಲಕ್ಷ ರೂ. ಚರ, 1.02 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಒಟ್ಟಾರೆ ಕುಟುಂಬದ ಹೆಸರಲ್ಲಿ 4.65 ಕೋಟಿ ರೂ. ಸಾಲಗಳಿವೆ. 2018 ರಲ್ಲಿ ಅವರ ಕುಟುಂಬದ ಬಳಿ 8.30 ಕೋಟಿ ರೂ. ಆಸ್ತಿ ಇದೆ ಎಂದು ಶಾರದಾ ಶೆಟ್ಟಿ ಅಫಿಡವಿಟ್ ಸಲ್ಲಿಸಿದ್ದರು. ಈಗ ಸುಮಾರು 10 ಕೋಟಿ ರೂ. ಹೆಚ್ಚಿದೆ.

    ಸೂರಜ್ ಕುಟುಂಬದ ಬಳಿ 12 ಕೋಟಿ ಆಸ್ತಿ

    ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಕುಟುಂಬ ಸುಮಾರು 12.82 ಕೋಟಿ ರೂ. ಆಸ್ತಿ ಹೊಂದಿದೆ. ಅವರ ಬಳಿ 23.77 ಲಕ್ಷ ರೂ.ಗಳ ಚರ ಆಸ್ತಿಗಳಿವೆ. ಪತ್ನಿ ವೀಣಾ ಬಳಿ 32.64 ಲಕ್ಷ ರೂ. ಚರ ಆಸ್ತಿಗಳಿವೆ. ಅಲ್ಲದೆ ಅವರು ಸೂರಜ್ ಅವರ ಬಳಿ 2.79 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಮತ್ತು ಎಸ್.ಜೆ.ನಾಯ್ಕ ಆ್ಯಂಡ್ ಕೋ ಎಂಬ ಕಂಪನಿಯಲ್ಲಿ ಅವರು ಪಾಲುದಾರಿಕೆ ಹೊಂದಿದ್ದು, ಅದು ಸುಮಾರು 8.81 ಕೋಟಿ ರೂ.ಗಳ ಸ್ಥಿರ ಆಸ್ತಿಗಳಿವೆ. ಅಲ್ಲದೆ, 67 ಲಕ್ಷ ರೂ. ಚರ ಆಸ್ತಿಗಳಿವೆ. ಸೂರಜ್ ಅವರ ಹೆಸರಿನಲ್ಲಿ 69.46 ಲಕ್ಷ ರೂ. ಕಂಪನಿಯ ಹೆಸರಿನಲ್ಲಿ 33.56 ಲಕ್ಷ ರೂ.ಸಾಲವಿದೆ. 2018 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅವರು ತಮ್ಮ ಕುಟುಂಬದ ಬಳಿ 1.21 ಕೋಟಿ ರೂ. ಆಸ್ತಿಯಿದೆ, 78 ಲಕ್ಷ ಸಾಲವಿದೆ ಎಂದು ಘೋಷಿಸಿಕೊಂಡಿದ್ದರು.

    ಭೀಮಣ್ಣ ಕುಟುಂಬದ ಆಸ್ತಿ 91 ಕೋಟಿ ರೂ. ಹೆಚ್ಚಳ

    ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಆಸ್ತಿ 5 ವರ್ಷಗಳಲ್ಲಿ ಸುಮಾರು 91 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಅವರು ಶುಕ್ರವಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ 122.35 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. 2018 ರ ರಲ್ಲಿ ಅವರು 31.22 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.
    ಭೀಮಣ್ಣ ನಾಯ್ಕ ಅವರ ಬಳಿ 15.08 ಕೋಟಿ ರೂ. ಚರ 28.18 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಪತ್ನಿ ಗೀತಾ ಅವರ ಬಲಿ 3.55 ಕೋಟಿ ರೂ. ಚರ, 51.42 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಪುತ್ರ ಅಶ್ವಿನ್ ಅವರ ಹೆಸರಲ್ಲಿ 6.30 ಕೋಟಿ ರೂ. ಚರ ಹಾಗೂ 20.02 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಸೊಸೆ ಪ್ರಿಯಾಂಕಾ ಬಳಿ 40 ಲಕ್ಷ ರೂ. ಚರ ಆಸ್ತಿಗಳಿವೆ.
    2018 ರಲ್ಲಿ ಅವರ ಕುಟುಂಬದ ಹೆಸರಲ್ಲಿ 23 ಕೋಟಿ ರೂ. ಸಾಲವಿತ್ತು. ಈ ಬಾರಿ ಸಾಲದ ಮೌಲ್ಯ 69.22 ಕೋಟಿ ರೂ.ಗಳಿಗೆ ಏರಿದೆ. ಅವರು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಸೇರಿ ಹಲವು ನಾಯಕರಿಗೂ ಕೋಟ್ಯಂತರ ರೂ. ಸಾಲ ನೀಡಿದ್ದಾರೆ. ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆ, ವಿವಿಧೆಡೆ ಕೃಷಿ, ಜಮೀನುಗಳನ್ನು ಹೊಂದಿದ್ದಾರೆ.

    9 ಕೋಟಿ ಆಸ್ತಿ 5.5 ಕೋಟಿ ಸಾಲ

    ಹಳಿಯಾಳ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ಕುಟುಂಬದ ಬಳಿ 9.09 ಕೋಟಿ ರೂ. ಆಸ್ತಿಗಳಿದ್ದು, 5.55 ಕೋಟಿ ರೂ.ಸಾಲವಿದೆ. ಅವರ ಬಳಿ 1.93 ಕೋಟಿ ರೂ. ಚರ, 6.38 ಕೋಟಿ ಸ್ಥಿರ ಆಸ್ತಿಗಳಿವೆ. ಪತ್ನಿ ಸುವರ್ಣಾ ಬಳಿ 57.45 ಲಕ್ಷ ರೂ. ಚರ, 7.33 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಮಗ ನಯನ್ ಹೆಸರಲ್ಲಿ 14.58 ಕೋಟಿ ರೂ. ಚರ ಆಸ್ತಿಗಳಿವೆ. ಸುನೀಲ ಅವರ ಹೆಸರಲ್ಲಿ 3.01 ಕೋಟಿ ರೂ.,ಪತ್ನಿಯ ಹೆಸರಿನಲ್ಲಿ 2.54 ಕೋಟಿ ರೂ. ಸಾಲವಿದೆ. 2018 ರಲ್ಲಿ ಅವರು 2.32 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. 85 ಲಕ್ಷ ರೂ. ಸಾಲವಿತ್ತು.

    ವೈದ್ಯ ಕುಟುಂಬದ ಆಸ್ತಿ 64 ಕೋಟಿ

    ಭಟ್ಕಳ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಅವರ ಕುಟುಂಬವು ಒಟ್ಟು 64.21 ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಅವರ ಕುಟುಂಬದ ಆಸ್ತಿಯು 52.42 ಕೋಟಿ ರೂ. ಹೆಚ್ಚಿದೆ. ವೈದ್ಯ ಅವರ ಬಳಿ 16.53 ಕೋಟಿ ರೂ. ಚರ, 10.78 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಪತ್ನಿ ಪುಷ್ಪಲತಾ ಅವರ ಬಳಿ1.60 ಕೋಟಿ ರೂ. ಚರ, 2.41 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಪಾಲುದಾರಿಕೆಯಲ್ಲಿ ಸ್ಕೂಲ್ ಬಸ್ ಸೇರಿ 1.77 ಕೋಟಿ ರೂ. ಚರ ಆಸ್ತಿಗಳು, 26.20 ಕೋಟಿ ರೂ ಸ್ಥಿರ ಆಸ್ತಿಗಳಿವೆ. ಮಗಳು ಬೀನಾ ಹೆಸರಲ್ಲಿ 51 ಲಕ್ಷ ಚರ 4.41 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಕುಟುಂಬದವರ ಹೆಸರಲ್ಲಿ ಒಟ್ಟು 52.42 ಕೋಟಿ ರೂ. ಸಾಲವಿದೆ.

    ದೇಶಪಾಂಡೆ ಆಸ್ತಿ 147 ಕೋಟಿ ಆಸ್ತಿ ಹೆಚ್ಚಳ

    ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಅವರ ಕುಟುಂಬದ ಆಸ್ತಿಯ ಮೌಲ್ಯ ಐದು ವರ್ಷಗಳಲ್ಲಿ 147.66 ಕೋಟಿ ರೂ. ಹೆಚ್ಚಿದೆ.
    2018 ರಲ್ಲಿ ಅವರು 215 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಈ ಬಾರಿ ಅವರ ಕುಟುಂಬದ ಆಸ್ತಿಯ ಮೌಲ್ಯ ಸುಮಾರು 362.66 ಕೋಟಿ ರೂ.ಗಳು ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಅವರ ಪತ್ನಿಯ ಬಳಿಯೇ ಅತಿ ಹೆಚ್ಚು ಆಸ್ತಿ ಇದೆ. ಅದರಲ್ಲಿ ಮುಖ್ಯವಾಗಿ ವಿವಿದ ಕಂಪನಿಗಳಲ್ಲಿ ಅವರ ಪತ್ನಿ ಹೂಡಿಕೆ ಮಾಡಿದ್ದು, ಅದರಲ್ಲಿ 207 ಕೋಟಿ ರೂ. ಚರ ಆಸ್ತಿಗಳಿವೆ. ದೇಶಪಾಂಡೆ ಅವರ ಬಳಿ 26.82 ಕೋಟಿ ರೂ. ಚರ ಆಸ್ತಿಗಳಿದ್ದು, 19.04 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಕುಟುಂಬದ ಪಾಲುದಾರಿಕೆಯಲ್ಲಿ 54.74 ಕೋಟಿ ರೂ. ಚರ ಹಾಗೂ 8.93 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಒಟ್ಟಾರೆ ಅವರ ಕುಟುಂಬ 14.7 ಕೋಟಿ ರೂ. ಸಾಲ ಹೊಂದಿದೆ. ಅವರ ಅಫಿಡವಿಟ್‌ನಲ್ಲಿ ಮಕ್ಕಳು ಹಾಗೂ ಅವರ ಕುಟುಂಬದ ಆಸ್ತಿಯ ವಿವರಗಳಿಲ್ಲ.

    ಇದನ್ನೂ ಓದಿ-ಎಚ್​.ಡಿ.ರೇವಣ್ಣ ನಾಮಪತ್ರ ಸಲ್ಲಿಕೆ; ಪತ್ನಿ ಭವಾನಿ ಬಳಿ ಇದೆ ಕೆಜಿಗಟ್ಟಲೆ ಬೆಳ್ಳಿ-ಬಂಗಾರ

    ವಿದ್ಯಾರ್ಹತೆ

    • ಆರ್.ವಿ.ದೇಶಪಾಂಡೆ-ಎಲ್.ಎಲ್.ಬಿ
    • ಸುನೀಲ ಹೆಗಡೆ -ಬಿಇ 2 ಸೆಮಿಸ್ಟರ್
    • ಸತೀಶ ಸೈಲ್- ಬಿಎಸ್‌ಸಿ
    • ರೂಪಾಲಿ ನಾಯ್ಕ-ಎಸ್‌ಎಸ್‌ಎಲ್‌ಸಿ
    • ದಿನಕರ ಶೆಟ್ಟಿ -ಪಿಯುಸಿ
    • ಶಾರದಾ ಶೆಟ್ಟಿ -ಪಿಯುಸಿ
    • ಸೂರಜ್ ನಾಯ್ಕ ಸೋನಿ -ಬಿಎಸ್‌ಸಿ, ಪಿಜಿಡಿಎಂ
    • ಭೀಮಣ್ಣ ನಾಯ್ಕ -7 ನೇ ತರಗತಿ
    • ಮಂಕಾಳ ವೈದ್ಯ -8 ನೇ ತರಗತಿ




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts