More

    ಕೋವಿಡ್ ಏಟು; ನರೇಗಾಕ್ಕೆ ಹಿಂದೇಟು



    ವಿಜಯವಾಣಿ ವಿಶೇಷ ಗದಗ

    ಕರೊನಾ 2ನೇ ಅಲೆ ಕೂಲಿಕಾರ್ವಿುಕರ ಕೆಲಸಕ್ಕೂ ಕುತ್ತು ತಂದಿದೆ. ಕೆಲಸ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಮನಸಿದ್ದರೂ ಸೋಂಕಿನ ರುದ್ರನರ್ತನ ಕಾರ್ವಿುಕರಲ್ಲಿ ಭೀತಿ ಹುಟ್ಟಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಸೋಂಕಿನ ಅಟ್ಟಹಾಸದಿಂದ ಜನರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
    ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ, ಉದ್ಯೋಗ ಖಾತ್ರಿ ಯೋಜನೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿ ಇತ್ತೀಚೆಗೆ ಆದೇಶ ಹೊರಡಿಸಿತು. ಆದೇಶ ಹೊರಡಿಸಿದ ಎರಡೇ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ವಿುಕರಿಗೆ ಕೆಲಸ ನೀಡಬೇಕು. ಒಂದು ಕಾಮಗಾರಿಯಲ್ಲಿ ಕೇವಲ 40 ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಜತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮತ್ತೊಂದು ಆದೇಶ ಹೊರಡಿಸಿತು. ಇದರಿಂದ ಜನರು ಗೊಂದಲಕ್ಕೆ ಒಳಗಾದರು. ಹೀಗಾಗಿ, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಡಂಗುರ ಸಾರಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ನಿರೀಕ್ಷಿಸಿದಷ್ಟು ಜನರು ಕೆಲಸ ಮಾಡಲು ಬರುತ್ತಿಲ್ಲ.
    ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿರುವ ಜನರು ಹಾಗೂ ನೋಂದಾಯಿತ ಜಾಬ್ ಕಾರ್ಡ್ ಫಲಾನುಭವಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ.
    ಮನೆಮನೆ ಸರ್ವೆ: ಗ್ರಾಮೀಣ ಭಾಗದಲ್ಲಿಯೂ ಕರೊನಾ ತನ್ನ ಕಬಂಧಬಾಹು ಚಾಚಿದ್ದರಿಂದ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಕಾರ್ಯಕರ್ತೆಯರಿಂದ ಮನೆಮನೆ ಆರೋಗ್ಯ ಸರ್ವೆ ಮಾಡಿಸಲಾಗುತ್ತಿದೆ. ಕೆಮ್ಮು, ನೆಗಡಿ ಜ್ವರ ಸೇರಿ ಕರೊನಾ ಲಕ್ಷಣಗಳು ಕಂಡುಬಂದರೆ ಕೂಡಲೇ ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಪರೀಕ್ಷೆ ಮಾಡಿಸಲಾಗುತ್ತಿದೆ. ಇಂತಹ ಲಕ್ಷಣ ಹೊಂದಿರುವ ಸಾವಿರಾರು ಜನರು ಉದ್ಯೋಗ ಖಾತ್ರಿ ಯೋಜನೆಯಿಂದ ದೂರ ಉಳಿಯುತ್ತಿದ್ದಾರೆ.
    ಸ್ವಂತ ಗ್ರಾಮಗಳಲ್ಲಿ ಕೆಲಸ: ನರೇಗಾ ಯೋಜನೆಯಡಿ ಬದುವು ನಿರ್ವಣ, ಬಚ್ಚಲುಗುಂಡಿ ನಿರ್ವಣ, ಕೆರೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ದಿನಕ್ಕೆ 25ರಿಂದ 30 ಸಾವಿರ ಕೂಲಿಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 1ರಿಂದ ಮೇ 16 ರವರೆಗೆ ಜಿಲ್ಲೆಯಲ್ಲಿ ಒಟ್ಟು 7 ಲಕ್ಷ 90 ಸಾವಿರ ಮಾನವ ದಿನಗಳ ಸೃಜನೆ ಮಾಡಲಾಗಿದೆ. 22,83,10,000 ರೂಪಾಯಿಗಳನ್ನು ಕೆಲಸ ಮಾಡಿರುವ ಕೂಲಿಕಾರ್ವಿುರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇ 16ರ ವರೆಗೆ ಶೇ.80ರಷ್ಟು ಪೇಮೆಂಟ್ ಪಾವತಿಯಾಗಿದೆ.
    3518 ಹೊಸ ಜಾಬ್ ಕಾರ್ಡ್ ವಿತರಣೆ:ನರೇಗಾ ಯೋಜನೆಯಡಿ ಕೆಲಸ ಮಾಡಲು ಜಾಬ್ ಕಾರ್ಡ್ ಅವಶ್ಯಕ. ಆದರೆ, ವಲಸೆ ಬಂದಿರುವ ಜನರಿಗೆ ಜಾಬ್ ಕಾರ್ಡ್​ಗಳು ಇರುವುದಿಲ್ಲ. ಅಂಥವರಿಗೂ ಸಹ ಜಾಬ್ ಕಾರ್ಡ್ ನೀಡಿ ಕೆಲಸ ಕೊಡುವ ಕಾರ್ಯ ನಡೆದಿದೆ. ಜನತಾ ಕರ್ಫ್ಯೂ ನಂತರ ಇಲ್ಲಿಯವರೆಗೆ 2500 (ಅಂದಾಜು 5ರಿಂದ 7 ಸಾವಿರ ಜನರು) ಕುಟುಂಬಗಳು ಜಿಲ್ಲೆಗೆ ಆಗಮಿಸಿವೆ. ಅದರಲ್ಲಿ ಶೇ. 40ರಷ್ಟು ಜನರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 1.54 ಲಕ್ಷ ಜನರು ಜಾಬ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ ಏ.1ರಿಂದ 1.22 ಲಕ್ಷ ಜನರು ಕೆಲಸ ಮಾಡಿದ್ದಾರೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಗಣನೀಯ ಕುಸಿದಿದೆ. 60ರಿಂದ 70 ಸಾವಿರ ಜನರು ಮಾತ್ರ ನರೇಗಾದಲ್ಲಿ ಕೆಲಸ ಮಾಡಿದ್ದಾರೆ.

    ತಾಲೂಕುವಾರು ಮಾನವ ದಿನಗಳ ಸೃಜನೆ
    ಗದಗ – 1,17,230
    ಮುಂಡರಗಿ- 1,37,528
    ಗಜೇಂದ್ರಗಡ – 86,275
    ಲಕ್ಷೆ್ಮೕಶ್ವರ – 74,307
    ಶಿರಹಟ್ಟಿ – 65,694
    ನರಗುಂದ – 14,523
    ರೋಣ – 3, 06,915
    ಬಹುತೇಕ ಗ್ರಾಪಂಗಳಲ್ಲಿ ಸ್ಥಗಿತ
    ರೋಣ: ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬಹುತೇಕ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಕೆಲಸ ಮಾಡಲು ಆಸಕ್ತಿ ಇರುವವರಿಗೆ ಕೆಲಸ ನೀಡಲಾಗುತ್ತಿದೆ. ಮುಶಿಗೇರಿ ಗ್ರಾಪಂನ ನೆಲ್ಲೂರ ಗ್ರಾಮದಲ್ಲಿ ಪರಸ್ಪರ ಅಂತರದ ಜತೆಗೆ ಕೋವಿಡ್ ನಿಯಮ ಪಾಲಿಸಿ ಕೃಷಿ ಹೊಂಡ ನಿಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಮೂಹಿಕವಾಗಿ ಉದ್ಯೋಗ ಖಾತ್ರಿ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಆದರೆ, ಕೆಲಸ ಮಾಡ ಬಯಸುವವರು ಕರೊನಾ ನಿಯಮಗಳನ್ನು ಪಾಲಿಸಿ ವೈಯಕ್ತಿಕ ಕಾಮಗಾರಿ ಕೈಗೊಳ್ಳುವುದಾದರೆ ಅಂಥವರಿಗೆ ಕೆಲಸ ನೀಡುತ್ತೇವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.
    ಊರಿಗೆ ಮರಳಿದವರಿಗೆ ಆಸರೆ
    ಲಕ್ಷೇಶ್ವರ: ಕರೊನಾ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಲಾಕ್​ಡೌನ್ ಜಾರಿಗೊಳಿಸಿದ್ದರಿಂದ ಬೇರೆಡೆಯಿಂದ ಸ್ವಂತ ಗ್ರಾಮಗಳಿಗೆ ವಲಸೆ ಬಂದಿರುವ ಯುವಕರು, ಕೃಷಿ ಕೂಲಿಕಾರ್ವಿುಕರು, ಅಂಗವಿಕಲರ ಬದುಕಿಗೆ ನರೇಗಾ ಕೆಲಸ ಆಸರೆಯಾಗಿದೆ.
    ಏಕಾಏಕಿ ಪಟ್ಟಣ ಪ್ರದೇಶಗಳಿಂದ ಹಳ್ಳಿಗಳತ್ತ ಬಂದಿರುವ ಖಾಸಗಿ ಕಂಪನಿ ಉದ್ಯೋಗಿಗಳು, ನಿರುದ್ಯೋಗಿ ಯುವಕರಿಗೆ ನರೇಗಾ ನೆರವಾಗಿದೆ. ಸದ್ಯ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ ಬದುವು ನಿರ್ವಣ, ಕೆರೆ ಹೂಳೆತ್ತುವುದು ಹಾಗೂ ವೈಯಕ್ತಿಕ ಕಾಮಗಾರಿಗಳಾದ ಇಂಗುಗುಂಡಿ, ದನದ ಕೊಟ್ಟಿಗೆ ನಿರ್ಮಾಣ ಕಾರ್ಯ ನಡೆದಿವೆ.


    ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ಗೋವಾ, ಮಂಗಳೂರು, ಉಡುಪಿ, ಬೆಂಗಳೂರು ಮತ್ತಿತರ ಕಡೆ ಹೋಗಿರುವ ನಮ್ಮಂತಹ ಅನೇಕ ಯುವಕರಿಗೆ ನರೇಗಾ ಕೆಲಸದಿಂದ ಸಿಗುವ 289 ರೂಪಾಯಿ ಆಸರೆಯಾಗಿದೆ.
    | ಪ್ರವೀಣ ಲಮಾಣಿ, ಇಂಜಿನಿಯರಿಂಗ್ ವಿದ್ಯಾರ್ಥಿ, ಆದ್ರಳ್ಳಿ ತಾಂಡಾ

    ರೈತನಿಗೆ ಭೂಮಿತಾಯಿಯೇ ಆಸ್ತಿ. ಇತ್ತೀಚಿನ ವರ್ಷಗಳಲ್ಲಿ ಕೃಷಿಯಿಂದ ದೊಡ್ಡ ಲಾಭ ಸಿಗುತ್ತಿಲ್ಲ. ಖರ್ಚು ವೆಚ್ಚಕ್ಕೆ ಸರಿಯಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿನ ಮಣ್ಣಿನ ಸಂರಕ್ಷಣೆ, ಫಲವತ್ತತೆ ಹೆಚ್ಚಳಕ್ಕಾಗಿ ಬದುವು ನಿರ್ಮಾಣ ಕಾರ್ಯ ಮಾಡಿಕೊಡುತ್ತಿರುವುದು ರೈತರ ಪಾಲಿನ ಆಶಾಕಿರಣವಾಗಿದೆ. ನನ್ನ ಜಮೀನಿನಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ವಿುಸಿದ ಬದುಗಳಲ್ಲಿ ಈಗ ಮಳೆ ನೀರು ನಿಂತಿರುವುದು ಹರ್ಷ ತಂದಿದೆ.
    | ಮಲ್ಲಪ್ಪ ರೋಣದ, ಅಕ್ಕಿಗುಂದ ರೈತ

    ಸಂಬಳ ಪಾವತಿಗೆ ತಾಂತ್ರಿಕ ಸಮಸ್ಯೆ: ನರಗುಂದ: ತಾಲೂಕಿನ 13 ಗ್ರಾಪಂ ವ್ಯಾಪ್ತಿಯ 30 ಗ್ರಾಮಗಳಲ್ಲಿ ಈಗಾಗಲೇ ನರೇಗಾ ಯೋಜನೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. 2021-22ನೇ ಸಾಲಿನಲ್ಲಿ 1,90,000 ಮಾನವ ದಿನಗಳ ಸೃಜನೆ ಗುರಿಯ ಪೈಕಿ 60 ವೈಯಕ್ತಿಕ ಬದುವು ನಿರ್ಮಾಣ ಮುಕ್ತಾಯಗೊಂಡಿದ್ದು, 150 ಪ್ರಗತಿ ಹಂತದಲ್ಲಿವೆ. 6 ಕೃಷಿ ಹೊಂಡ ಕಾಮಗಾರಿ ಪೈಕಿ 2 ಪೂರ್ಣಗೊಂಡು 4 ಪ್ರಗತಿಯಲ್ಲಿವೆ. ಕೆರೆ, ಕಾಲುವೆಗಳ ಹೂಳೆತ್ತುವುದು. ಬಚ್ಚಲು ಗುಂಡಿ ನಿರ್ವಣ, ದನದ ಕೊಟ್ಟಿಗೆ, ಅರಣ್ಯ ಸಸಿಗಳನ್ನು ಬೆಳೆಯುವುದು. ಪ್ರಸಕ್ತ ವರ್ಷದಿಂದ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ಯೋಜನೆ ಆರಂಭಿಸಿದೆ. ಇದರಿಂದ ಸಂಕಷ್ಟದಲ್ಲಿರುವ ಕೂಲಿ ಕಾರ್ವಿುಕರಿಗೆ ಉದ್ಯೋಗ ಸಿಕ್ಕಂತಾಗಿದೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದ 25 ದಿನಗಳಿಂದ ಕಾರ್ವಿುಕರಿಗೆ ಸರಿಯಾಗಿ ಸಂಬಳ ಪಾವತಿಯಾಗಿಲ್ಲ.












    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts