More

    ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

    ಬ್ಯಾಡಗಿ: ಕರೊನಾ ಶಂಕಿತನ ಶವವನ್ನು ಮುಟ್ಟಲು ಸಂಬಂಧಿಗಳು ಹಿಂಜರಿದ ಹಿನ್ನೆಲೆಯಲ್ಲಿ ಪಟ್ಟಣದ ಮುಸ್ಲಿಂ ಯುವಕರು ಅಂತ್ಯಕ್ರಿಯೆ ನಡೆಸಿದ ಘಟನೆ ತಾಲೂಕಿನ ಖುರ್ಧವೀರಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಖುರ್ಧವೀರಾಪುರ ಗ್ರಾಮದ ಶಿವಾಜೆಪ್ಪ ಮಾರ್ತಾಂಡೆಪ್ಪ ಕುಮ್ಮೂರು (45) ಹಾಗೂ ಪತ್ನಿ, ಮಗಳೊಂದಿಗೆ ತುಮಕೂರು ತಾಲೂಕಿನ ಪಾವಗಡದಲ್ಲಿ ವಾಸಿಸುತ್ತಿದ್ದರು. ಏ. 21ರಂದು ಸ್ವಗ್ರಾಮಕ್ಕೆ ಮರಳಿದ್ದ ಮಾರ್ತಾಂಡೆಪ್ಪ, ರಾಣೆಬೆನ್ನೂರಿನ ಓಂ ಹಾಸ್ಪಿಟಲ್​ನಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಸೋಮವಾರ ಶಿವಾಜೆಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವವನ್ನು ಸರ್ಕಾರಿ ಆಂಬುಲೆನ್ಸ್​ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಗ್ರಾಮ ಖುರ್ಧವೀರಾಪುರಕ್ಕೆ ತಂದಿದ್ದರು.

    ಶಿಶುಯೋಜನಾಧಿಕಾರಿ ಕಾರ್ಯಾಲಯದಲ್ಲಿ ಸೂಪರ್​ವೈಸ್​ರ ಆಗಿರುವ ಶಿವಾಜೆಪ್ಪ ಅವರ ಪತ್ನಿಯೂ ಅದೇ ಆಸ್ಪತ್ರೆಯಲ್ಲಿ ಹುಷಾರಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಗೆ ಕರೊನಾ ಶಂಕೆ ಸುದ್ದಿಯಿಂದ ಮೊದಲೇ ಆತಂಕದಲ್ಲಿದ್ದ ಮಗಳು, ತಂದೆ ಶವ ಕಂಡು ದಿಕ್ಕು ತೋಚದಂತಾಗಿ ಕಣ್ಣೀರು ಹಾಕುತ್ತಿದ್ದಳು. ಆದರೆ, ಸಂಬಂಧಿಗಳು ಸೇರಿದಂತೆ ಯಾರೊಬ್ಬರೂ ಶವದತ್ತ ಬರಲಿಲ್ಲ. ಹೀಗಾಗಿ ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ನಾಲ್ಕೈದು ತಾಸು ಕಾಯುವಂತಾಯಿತು.

    ನಂತರ ವಿಷಯ ತಿಳಿದು ಬ್ಯಾಡಗಿ ಮುಸ್ಲಿಂ ಸಮಾಜದ ಯುವ ಮುಖಂಡರಾದ ಮಂಜೂರು ಅಲಿ ಹಕೀಂ, ಅಹ್ಮದ ಮುಲ್ಲಾ, ಅಜೀಜ್ ಬಿಜಾಪುರ ಹಾಗೂ ಹಸನಾಲಿ ಕುಪೇಲೂರು ಸ್ಥಳಕ್ಕೆ ಧಾವಿಸಿ, ಆರೋಗ್ಯ ಸಿಬ್ಬಂದಿ ಜತೆ ಪಿಪಿಇ ಕಿಟ್ ಧರಿಸಿ, ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದರು.

    ಮೃತನ ಅಂತ್ಯಕ್ರಿಯೆ ನಡೆಸಲು ನೆರವಾದ ಮುಸ್ಲಿಂ ಯುವಕರು, ಮಾನವ ಧರ್ಮ ಶ್ರೇಷ್ಠವೆಂದು ನಂಬಿ ಭಾವೈಕ್ಯತೆ ಸಾರಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಸ್ಲಿಂ ಯುವಕರು, ‘ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಲು ಸಿದ್ಧ’ ಎಂದು ತಿಳಿಸಿದರು.

    ಕಂದಾಯ ಇಲಾಖೆಯ ಶಬ್ಬೀರ ಬಾಗೇವಾಡಿ, ಪಿಡಿಒ ನಾಗರಾಜ ಹಡಗಲಿ, ಆರೋಗ್ಯ ಸಿಬ್ಬಂದಿ ಸಾವಿತ್ರಾ ಗುರೇಮಟ್ಟಿ, ಎಂ.ಎನ್. ಕಂಬಳಿ, ಶಿಲ್ಪಾ ಸಂಕಣ್ಣನವರ, ರವಿ ಕೊಲ್ಲಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts