More

    ಪ್ರಧಾನಿ ನರೇಂದ್ರ ಮೋದಿ ಕೆಳಗಿಳಿಸಲು ಷಡ್ಯಂತ್ರ

    ಬಾಳೆಹೊನ್ನೂರು: ಈ ಬಾರಿ ನಡೆಯುತ್ತಿರುವ ಚುನಾವಣೆ ಯಾವುದೇ ಭಾಗ್ಯಗಳ ಯೋಜನೆಗೆ ಸಂಬಂಧಿಸಿದ್ದಲ್ಲ. ರಾಷ್ಟ್ರದ ಹಿತಚಿಂತನೆ ಪರವಾಗಿ ಹಾಗೂ ವಿರುದ್ಧವಾಗಿ ಇರುವವರ ಸಿದ್ಧಾಂತದ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಪಟ್ಟರು.

    ರಂಭಾಪುರಿ ಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ದೇಶದ ನೇತೃತ್ವ ವಹಿಸಿಕೊಳ್ಳಬಾರದು, ದೇಶ ಹಾಳಾದರೂ ಪರವಾಗಿಲ್ಲ ಮೋದಿ ಅವರನ್ನು ಕಟ್ಟಿಹಾಕಬೇಕೆಂಬ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಮತ್ತೊಮ್ಮೆ ಮೋದಿ ದೇಶದ ನೇತೃತ್ವ ವಹಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯಾಗಿ ಭಾರತ ವಿಶ್ವಗುರುವಾಗಬೇಕು ಎಂದು ನಾವು ಈಗಾಗಲೇ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
    ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಕಾರ್ಯಕರ್ತರನ್ನು ಸೇರಿಸಿ ಶಿವಮೊಗ್ಗದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಸಮಾವೇಶ ನಡೆದಿದೆ. ಸಮಾವೇಶದಿಂದ ಒಳ್ಳೆಯ ಸಂದೇಶ ರವಾನೆಯಾಗಿದೆ. ಅದನ್ನು ಮತವಾಗಿ ಪರಿವರ್ತಿಸುವ ದಿಕ್ಕಿನಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
    ಅನ್ನಭಾಗ್ಯ ಯೋಜನೆಯ ಅಕ್ಕಿ ನಾವು ನೀಡಿದ್ದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ಬರುತ್ತಿರುವುದು ಕೇಂದ್ರ ಸರ್ಕಾರದ ಸಹಾಯಧನದ ಅಡಿಯಲ್ಲಿ ಬರುವ ಅಕ್ಕಿಯಾಗಿದೆ. ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ 29 ರೂ.ಗೆ ಗುಣಮಟ್ಟದ ಅಕ್ಕಿ ವಿತರಣೆ ಸಹ ಮಾಡುತ್ತಿದ್ದಾರೆ. ಈ ಬಗ್ಗೆಯೂ ಕೆಲವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅಕ್ಕಿ ವಿತರಣೆ ನಿಲ್ಲಿಸುವ ಷಡ್ಯಂತ್ರ ಮಾಡಿದ್ದಾರೆ. ರಾಜಕೀಯ ದುರುದ್ದೇಶದಿಂದ ಅಕ್ಕಿ ವಿತರಣೆ ನಿಲ್ಲಿಸಲು ಹೊರಟಿರುವುದು ಖಂಡನೀಯ ಎಂದರು.
    ಈ ಬಾರಿ ರಾಜ್ಯದಲ್ಲಿ ಎಲ್ಲ 28 ಸ್ಥಾನ ಗೆಲ್ಲುವ ಭರವಸೆಯಿದ್ದು, ಇದು ಅಹಂಕಾರದ ಮಾತಲ್ಲ. ನರೇಂದ್ರ ಮೋದಿ ಅಪೇಕ್ಷೆಯಂತೆ ದೇಶದಲ್ಲಿ 400 ಸ್ಥಾನಗಳ ಗುರಿ ಮುಟ್ಟುವುದು ನಿಶ್ಚಿತವಾಗಿದೆ. ಕಾಂಗ್ರೆಸೇತರ ಮತಗಳನ್ನು ಕ್ರೊಡೀಕರಿಸುವಲ್ಲಿ ಮೋದಿ ಯಶಸ್ವಿಯಾಗಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಂತಹ ಹಿರಿಯರು ನಮಗೆ ಬೆಂಬಲ ನೀಡಿರುವುದು ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
    ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ, ಮತ್ತಿತರ ಕಾರಣಗಳಿಂದ ಬಿಜೆಪಿಗೆ ಸೀಟುಗಳು ಕಡಿಮೆ ಬಂದಿವೆ. ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರಿಯುವ ಕೆಲಸ ಆಗಿದೆ. ಈ ಬಾರಿ ಮತದಾರರ ಕಣ್ಣಮುಂದೆ ಕಾಣುತ್ತಿರುವುದು ಕೇವಲ ನರೇಂದ್ರ ಮೋದಿ ಹಾಗೂ ಕಮಲದ ಗುರುತು ಮಾತ್ರ. ಆಕಸ್ಮಿಕವಾಗಿ ಅಭ್ಯರ್ಥಿ ಸರಿಯಿಲ್ಲ ಎಂದಾದರೆ ಕಿವಿ ಹಿಂಡಿ ತಿದ್ದುವ ಪ್ರಯತ್ನ ಜನರೇ ಮಾಡಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts