More

    ಮಂಡ್ಯ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಕಂದಕ: ಹುಲಿವಾನ ಸಮಾವೇಶಕ್ಕೆ ಹಲವರ ಗೈರು

    ಮಂಡ್ಯ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ, ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಹಂತ ಹಂತವಾಗಿ ಬಹಿರಂಗಗೊಳ್ಳುತ್ತಿದೆ. ಭಾನುವಾರ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಕರೆಯಲಾಗಿದ್ದ ಸಮಾವೇಶಕ್ಕೆ ಹಲವರು ಗೈರಾಗಿದ್ದು ಇದಕ್ಕೆ ಪುಷ್ಟಿ ನೀಡಿದೆ.
    ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪೈಪೋಟಿ ಜತೆಗೆ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾಕಾಂಕ್ಷಿಯೂ ಆಗಿರುವ ಪಕ್ಷದ ಜಿಲ್ಲಾ ಮಾಜಿ ಖಜಾಂಚಿ ಅಮರಾವತಿ ಚಂದ್ರಶೇಖರ್ ನೇತೃತ್ವದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಆಕಾಂಕ್ಷಿತರೆಲ್ಲರನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಹಲವರು ಸಮಾವೇಶಕ್ಕೆ ಬರಲಿಲ್ಲ. ಇದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಿತು.
    ಹಿರಿಯ ವರ್ಸಸ್ ಕಿರಿಯ: ಟಿಕೆಟ್ ವಿಚಾರದಲ್ಲಿ ಈಗಾಗಲೇ ಸ್ಪರ್ಧಾಕಾಂಕ್ಷಿಗಳ ನಡುವೆ ಶೀತಲ ಸಮರ ನಡೆಯುತ್ತಿದೆ. ಆದರೆ ಸಮಾವೇಶದಲ್ಲಿ ನಡೆದ ಬೆಳವಣಿಗೆಯನ್ನು ಗಮನಿಸಿದರೆ ಹಿರಿಯ ವರ್ಸಸ್ ಕಿರಿಯರ ನಡುವೆ ಪೈಪೋಟಿ ನಡೆಯುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕಾರಣವೂ ಇದೆ. ಸಮಾವೇಶದಲ್ಲಿ ಸ್ಪರ್ಧಾಕಾಂಕ್ಷಿಗಳೂ ಆದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಮಾಜಿ ಖಜಾಂಚಿ ಅಮರಾವತಿ ಚಂದ್ರಶೇಖರ್, ಮುಖಂಡರಾದ ಎಂ.ಎಸ್. ಚಿದಂಬರ್, ಕೆ.ಕೆ.ರಾಧಾಕೃಷ್ಣ ಕೀಲಾರ ಸೇರಿದಂತೆ ಕೆಲವರಿದ್ದರು. ಇತ್ತ ರವಿಕುಮಾರ್ ಗಣಿಗ, ಉಮ್ಮಡಹಳ್ಳಿ ಶಿವಪ್ಪ, ಸಿದ್ಧಾರೂಢ ಸತೀಶ್‌ಗೌಡ, ಡಾ.ಕೃಷ್ಣ ಗೈರಾಗಿದ್ದರು. ಮಾತ್ರವಲ್ಲದೆ, ಪಕ್ಷದ ಹಿರಿಯ ನಾಯಕರು ಕೂಡ ಆಗಮಿಸದಿರುವುದು ಚರ್ಚೆಗೆ ಕಾರಣವಾಯಿತು.
    ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕೈ ನಾಯಕರು ಹೇಳುವುದಕ್ಕೆ ತದ್ವಿರುದ್ಧವಾಗಿ ಸಮಾವೇಶ ನಡೆದಂತಿತ್ತು. ಈ ನಡುವೆ, ಆಗಮಿಸಿದವರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಹಾಜರಿದ್ದಷ್ಟು ಜನ ವೇದಿಕೆ ಕಾರ್ಯಕ್ರಮದಲ್ಲಿ ಇರಲಿಲ್ಲ.
    ಅಸಮಾಧಾನಕ್ಕೆ ಕಾರಣವಾಯ್ತ ಹೇಳಿಕೆ?: ಸಮಾವೇಶದ ಪೂರ್ವಭಾವಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಅಮರಾವತಿ ಚಂದ್ರಶೇಖರ್ ಹೇಳಿಕೆ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಕಳೆದ ಚುನಾವಣೆಯ ಸೋಲಿಗೆ ಅಭ್ಯರ್ಥಿ ರವಿಕುಮಾರ ಗಣಿಗ ಅವರ ವೈಫಲ್ಯ ಕಾರಣ ಎಂದಿದ್ದರು. ಇದು ಪಕ್ಷದೊಳಗೆ ಇರಿಸುಮುರಿಸು ಸೃಷ್ಟಿಸಿದೆ. ಪರಿಣಾಮ, ಸಮಾವೇಶಕ್ಕೆ ಹಲವರು ಗೈರಾಗಲು ಕಾರಣವಾಗಿದೆ.
    ಇತ್ತ ರವಿಕುಮಾರ ಗಣಿಗ ಹಾಗೂ ಸಿದ್ಧಾರೂಢ ಸತೀಶ್ ಅವರ ಬಹಿರಂಗ ಅಸಮಾಧಾನದ ಮಾತುಗಳು ಕೆ.ಕೆ.ರಾಧಾಕೃಷ್ಣಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಪರಿಣಾಮ ಹಿರಿಯರ ಪಾಳಯ ಸೇರಿರುವ ಕೆಕೆಆರ್, ಹುಲಿವಾನ ಸಮಾವೇಶದಲ್ಲಿಯೂ ತಮ್ಮದು ಕಾಂಗ್ರೆಸ್‌ಗಾಗಿ ದುಡಿದ ಕುಟುಂಬ ಎನ್ನುವುದನ್ನು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರು.
    ಒಟ್ಟಾರೆ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎನ್ನುವಂತಾಗಿದೆ ಕಾಂಗ್ರೆಸ್‌ನ ಪರಿಸ್ಥಿತಿ. ಒಗ್ಗಟ್ಟಿನಲ್ಲಿ ಎಂಎಲ್‌ಸಿ ಚುನಾವಣೆಯನ್ನು ಗೆದ್ದು ಬೀಗುತ್ತಿದ್ದ ಕೈ ಪಾಳಯದಲ್ಲಿಯೂ ಕೆಸರೆರಚಾಟ ಪ್ರಾರಂಭವಾಗಿದ್ದು, ಸ್ಪರ್ಧೆ ವಿಚಾರಕ್ಕೆ ಕಂದಕ ಹೆಚ್ಚುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಯಾವೆಲ್ಲ ಬೆಳವಣಿಗೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts