More

    ವಾರದೊಳಗೆ ಅತಿಕ್ರಮಣ ತೆರವುಗೊಳಿಸಿ

    ಜಮಖಂಡಿ: ತಾಲೂಕಿನ ಮಧುರಖಂಡಿ ಗ್ರಾಪಂ ವ್ಯಾಪ್ತಿಯಲ್ಲಿನ ಆಶ್ರಯ ಕಾಲನಿ(ಹುಲಿಕೋಡಿ)ಯ ಸರ್ವೇ ನಂ. 23 ರಲ್ಲಿನ ಅತಿಕ್ರಮಣ ತೆರವಿಗೆ ತಾಲೂಕಾಡಳಿತ ಹಾಗೂ ತಾಲೂಕು ಪಂಚಾಯಿತಿ ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ತಾಲೂಕು ಆಡಳಿತ ಸೌಧದ ಎದುರು ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಎಚ್ಚರಿಸಿದ್ದಾರೆ.

    ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಡತನ ರೇಖೆಗಿಂತ ಕೆಳಗಿರುವ ಕಂದಾಯ ಭೂಮಿಯಲ್ಲಿ ಗ್ರಾಮದ ಸರ್ವೇ ನಂ. 23 ರಲ್ಲಿ 10 ಎಕರೆ 35 ಗುಂಟೆಯಲ್ಲಿ 1991-92 ರಲ್ಲಿ ಆಶ್ರಯ ಯೋಜನೆಯಲ್ಲಿ ಎಲ್ಲ ವರ್ಗದವರಿಗೆ ಅಂದಾಜು 100 ಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಇಲ್ಲಿ ರಸ್ತೆ ಇರುವ ಬಗ್ಗೆ ಸ್ಥಳೀಯರು ಅನುಮಾನಗೊಂಡು ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಿದಾಗ ರಸ್ತೆ ಜಾಗ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

    ರಸ್ತೆ ಅತಿಕ್ರಮಣ ತೆರವಿಗಾಗಿ ಕಳೆದ ಜೂನ್‌ನಲ್ಲಿ ತಾಪಂ ಕಚೇರಿ ಆವರಣದಲ್ಲಿ ಸಾರ್ವಜನಿಕರು ಮತ್ತು ಡಿಎಸ್‌ಎಸ್ ಸಂಘಟನೆಯಿಂದ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ತಾಲೂಕು ಅಧಿಕಾರಿಗಳು ಮತ್ತು ತಹಸೀಲ್ದಾರ್‌ರ ಸರ್ವೇ ನಕ್ಷೆ ಪ್ರಕಾರ ತೆರವುಗೊಳಿಸುತ್ತಿರುವಾಗ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಕೋರ್ಟ್ ನಿರ್ದೇಶನ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಪಿಡಿಒ ಹಿಂಬರಹ ನೀಡಿದ್ದರು ಎಂದರು.

    ಇಲ್ಲಿಯವರೆಗೆ ಪಿಡಿಒ ಆಗಲಿ ಅಥವಾ ತಾಪಂ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
    ಇಲ್ಲಿನ ಗ್ರಾಪಂ ಪಿಡಿಒ ಸರ್ಕಾರಿ ನೌಕರರಾಗಿದ್ದು, ಸಾರ್ವಜನಿಕರ ರಸ್ತೆ ಅತಿಕ್ರಮಣ ಮಾಡಿದವರಿಗೆ ಬೆಂಬಲಿಸುತ್ತ ಜನರ ಕಾನೂನಿನ ವಿರೋಧಿಗಳಾಗಿದ್ದಾರೆ. ಇವರ ನಡೆ ಅನುಮಾನಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳು ಕೂಲಂಕಷವಾಗಿ ಅವಲೋಕಿಸಿ ಇಲ್ಲಿನ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಸದಾಶಿವ ಐನಾಪುರ, ಶ್ರೀಶೈಲ ಕಾಂಬಳೆ, ಬಸವರಾಜ ದೊಡಮನಿ, ಕಲ್ಲಪ್ಪ ತೇಲಿ, ಶೇಖರ ಭಜಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts