More

    ಕಾಲರಾ ಪತ್ತೆಯಿಂದ ಆತಂಕ ಸೃಷ್ಟಿ

    ಬೆಂಗಳೂರು: ಸುಡುಬಿಸಿಲು, ನೀರಿನ ಸಮಸ್ಯೆಯ ನಡುವೆ ಬೆಂಗಳೂರಿನಲ್ಲಿ ಇದೀಗ ಕಾಲರಾ (ವಾಂತಿ ಭೇದಿ) ರೋಗದ ಭೀತಿ ಎದುರಾಗಿದ್ದು, ಮಲ್ಲೇಶ್ವರದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಇದರ ನಿಖರ ಮಾಹಿತಿಗಾಗಿ ಹೆಚ್ಚಿನ ಪರೀಕ್ಷೆ (ಕಲ್ಚರ್ ಟೆಸ್ಟ್ ) ನಡೆಸಲಾಗುತ್ತಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ನಗರದಲ್ಲಿ ಕೆಲ ದಿನಗಳಿಂದ ಕಾಲರಾ ರೋಗ ಲಕ್ಷಣ ಪ್ರಕರಣಗಳು ಹೆಚ್ಚಾಗುತ್ತಿವೆ. ನೀರಿನ ಕೊರತೆ, ಕಲುಷಿತ ನೀರು ಮತ್ತು ಆಹಾರ ಸೇವನೆ, ಕಳಪೆ ನೈರ್ಮಲ್ಯ, ಅಶುಚಿತ್ವ, ಕಲುಷಿತ ನೀರಿನ ಮೂಲಗಳು ಇದಕ್ಕೆ ಕಾರಣವಾಗಿವೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಇದು ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ವೈದ್ಯರು.

    ನೀರಿನ ಬಿಕ್ಕಟ್ಟೂ ಕಾರಣ: ಈ ಬಾರಿ ನೀರಿನ ತೀವ್ರ ಸಮಸ್ಯೆಯೂ ಕಾಲರಾ, ಗ್ರಾೃಸ್ಟ್ರೋಎಂಟರೈಟಿಸ್ ಸೇರಿ ನಾನಾ ರೀತಿಯ ಉದರ ಸಮಸ್ಯೆಗೆ ಕಾರಣವಾಗಿದೆ. ನೀರಿನ ಕೊರತೆಯಿಂದಾಗಿ ಹೆಚ್ಚಿನ ದಿನ ತೊಟ್ಟಿ ಹಾಗೂ ಡ್ರಮ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದನ್ನು ಅಡುಗೆ ತಯಾರಿಕೆ ಹಾಗೂ ಕುಡಿಯಲು ಬಳಕೆ ಮಾಡುವುದು, ಟ್ಯಾಂಕರ್ ನೀರಿನ ಅವಲಂಬನೆ, ರಸ್ತೆಬದಿ ವ್ಯಾಪಾರಿಗಳು ಡ್ರಮ್‌ಗಳಲ್ಲಿ ಸಂಗ್ರಹಿಸಿಟ್ಟ ನೀರು ಬಳಸುವುದರಿಂದಲೂ ಕಾಲರಾ ಸಾಧ್ಯತೆ ಹೆಚ್ಚಿದೆ.

    ಜಾತ್ರೋತ್ಸವಗಳಲ್ಲಿ ಜಾಗ್ರತೆ: ಇದೀಗ ಹಬ್ಬದ ಜತೆಗೆ ಸಾಲುಸಾಲು ಜಾತ್ರೆಗಳು ನಡೆಯುತ್ತಿವೆ. ಹೀಗಾಗಿ ಜನರು ಹೊರಗೆ ಆಹಾರ ಮತ್ತು ನೀರು ಸೇವಿಸುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಬಿಸಿಲ ಝಳ ಹೆಚ್ಚಿರುವುದರಿಂದ ಜನರು ಹೊರಗೆ ತಂಪುಪಾನೀಯ, ಐಸ್‌ಕ್ಯೂಬ್ ಬಳಕೆ, ಕತ್ತರಿಸಿದ ಹಣ್ಣುಗಳ ಮೊರೆ ಹೋಗುತ್ತಾರೆ. ಇಂತಹ ಕಡೆ ನೈರ್ಮಲ್ಯ ಕಾಪಾಡದಿದ್ದರೆ ವಾಂತಿಭೇಧಿ, ಹೊಟ್ಟೆ ನೋವಿನಂಥ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎನ್ನುತ್ತಾರೆ ವೈದ್ಯರು.

    ಕಾಲರಾ ರೋಗ: ವಿಷಕಾರಿ ಬ್ಯಾಕ್ಟೀರಿಯ ವಿಬ್ರಿಯೊ ಕಾಲರಾದಿಂದ ಸೋಂಕು ಹರಡುತ್ತದೆ. ಈ ಬ್ಯಾಕ್ಟೀರಿಯಾದಿಂದ ಕರುಳಿನ ಸೋಂಕು ಉಂಟಾಗುತ್ತದೆ. ಪರಿಣಾಮವಾಗಿ ತೀವ್ರವಾದ ವಾಂತಿ ಭೇದಿ ಉಂಟಾಗುತ್ತದೆ. ನೀರಿನ ಸಮಸ್ಯೆ ಹೆಚ್ಚು ಕಂಡುಬರುವ ಬೇಸಿಗೆಯಲ್ಲಿ ಇದು ಸಾಮಾನ್ಯ. ಹೀಗಾಗಿ ಜನರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಿದೆ.

    ರೋಗ ಲಕ್ಷಣಗಳು: ಹೊಟ್ಟೆ ನೋವು, ವಾಂತಿ-ಬೇಧಿ, ತಲೆ ಸುತ್ತುವಿಕೆ, ಆಯಾಸ, ರಕ್ತದ ಒತ್ತಡ ಕಡಿಮೆಯಾಗುವುದು, ಹೃದಯಬಡಿತ ಹೆಚ್ಚಳ, ಶರೀರದ ತೂಕ ಇಳಿಕೆ ಕಾಲರಾ ಲಕ್ಷಣಗಳಾಗಿವೆ. ಸೋಂಕು ತಗುಲಿದ 14-16 ದಿನಗಳಲ್ಲಿ ರೋಗ ಕಂಡುಬರುತ್ತದೆ.

    ಎಚ್ಚರಿಕೆ ಕ್ರಮಗಳು:
    * ಕುಡಿಯುವ ನೀರಿನ ಶುದ್ಧತೆ ಬಗ್ಗೆ ಎಚ್ಚರಿಕೆ ವಹಿಸಬೇಕು
    * ಶುದ್ಧೀಕರಿಸಿದ ಅಥವಾ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು
    * ಲಾವಂಚ ಬೇರು ಹಾಕಿ ನೀರು ಕುಡಿಯುವುದು ಒಳ್ಳೆಯದು
    * ಮಲ ವಿಸರ್ಜನೆ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು
    * ಆಹಾರ ಮತ್ತು ಸೊಪ್ಪು ಮತ್ತು ತರಕಾರಿಯನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು
    * ಅತಿಯಾಗಿ ಖಾರ, ಎಣ್ಣೆ, ಉಪ್ಪು ಹಾಗೂ ಮಸಾಲೆ ಪದಾರ್ಥಗಳನ್ನು ಸೇವಿಸಬಾರದು
    * ಗಂಜಿ, ಮಜ್ಜಿಗೆ, ಎಳನೀರು, ಹಣ್ಣಿನ ರಸದಂತಹ ಆಹಾರ ಸೇವನೆ ಒಳ್ಳೆಯದು
    * ದೇಹದಲ್ಲಿ ಬಳಲಿಕೆ ಕಂಡು ಬಂದ ಕೂಡಲೇ ಒಆರ್‌ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಬೇಕು
    * ಮನೆಯ ಆಹಾರ ಸೇವನೆಗೆ ಆದ್ಯತೆ ನೀಡಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts