More

    ಸ್ಥಳದಲ್ಲೇ ಪರಿಹಾರ ಸಂಸದ ನಾರಾಯಣಸ್ವಾಮಿ ಸ್ಟೈಲ್

    ಚಿತ್ರದುರ್ಗ: ಸಾರ್ವಜನಿಕ ಜೀವನದಲ್ಲಿ ಶೋಷಿತರ ಪರ ನಿರಂತರ ಹೋರಾಟಕ್ಕೆ ಹೆಸರಾದ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕರೊನಾದಂಥ ಸಂಕಷ್ಟದ ಸಮಯದಲ್ಲೂ ತಮ್ಮ ಜನಪರ ಕಾಳಜಿ ಮರೆತಿಲ್ಲ.

    ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರಾದ್ಯಂತ ಸತತ ಪ್ರವಾಸ, ಅಧಿಕಾರಿಗಳ ಸಭೆ, ಬಡವರಿಗೆ ನೆರವು, ಕರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಲಾಕ್‌ಡೌನ್ ವೇಳೆ ಸಾವಿರಾರು ಜನರಿಗೆ ಅನ್ನ ಕೊಡುವ ಪುಣ್ಯದ ಕೆಲಸವನ್ನೂ ಮಾಡುತ್ತಿದ್ದಾರೆ.

    ವಿಧಾನಸೌಧ ಅಥವಾ ಪಾರ್ಲಿಮೆಂಟ್ ಇರಲಿ, ಸದಾ ನೊಂದವರ ದನಿಗೆ ದನಿಯಾಗಲು ಬಯಸುವ, ತಮ್ಮ ಹೋರಾಟದ ಗುಣಗಳಿಂದಾಗಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ನಾಯಕರಾಗಿ ನಾರಾಯಣಸ್ವಾಮಿ ಹೊರ ಹೊಮ್ಮುತ್ತಿದ್ದಾರೆ.

    ಶಾಸಕ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ತಮ್ಮ ಈ ಹಿಂದಿನ ಅನುಭವಗಳನ್ನೆಲ್ಲ ಧಾರೆ ಎರೆದು ಲೋಕಸಭಾ ಕ್ಷೇತ್ರದ ಜನರ ಸಂಕಷ್ಟ ಪರಿಹರಿಸಲು ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ತಾಲೂಕು, ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

    ವೈಯಕ್ತಿಕ ನೆರವು: ಪೊಲೀಸ್, ಆರೋಗ್ಯ ಇಲಾಖೆ ಸಹಿತ ಸೋಂಕು ಹತೋಟಿಗಾಗಿ ಶ್ರಮಿಸುತ್ತಿರುವ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಈವರೆಗೆ ವೈಯಕ್ತಿಕ ಖರ್ಚಿನಲ್ಲಿ ಅಂದಾಜು 12 ಸಾವಿರ ಸ್ಯಾನಿಟೈಸರ್, 10 ಸಾವಿರ ಮಾಸ್ಕ್, 8 ಸಾವಿರ ಹ್ಯಾಂಡ್‌ಗ್ಲೌಸ್ ವಿತರಿಸಿದ್ದಾರೆ. ಚಿತ್ರದುರ್ಗ, ಚಳ್ಳಕೆರೆ, ಪರಶುರಾಮಪುರ ಹಾಗೂ ಹಿರಿಯೂರಲ್ಲಿ ಬಡವರಿಗೆ ಅನ್ನದಾಸೋಹ ಕೇಂದ್ರ ಸ್ಥಾಪಿಸಿದ್ದಾರೆ.

    ಆನೇಕಲ್ ತಾಲೂಕಿನ ಅತ್ತಿಬೆಲೆ, ಬೊಮ್ಮಸಂದ್ರದಲ್ಲಿ ಅನ್ನದಾಸೋಹ ಕೇಂದ್ರ ಹಾಗೂ ಸರ್ಜಾಪುರದಲ್ಲಿ ತಮ್ಮ ಹೆಸರಲ್ಲಿ ಆಹಾರ ವಿತರಣೆಗೆ ಕ್ಯಾಂಟೀನ್ ಸ್ಥಾಪಿಸಿದ್ದಾರೆ. ಹೊಸದುರ್ಗ, ಶಿರಾ ಸೇರಿ ಬಡ ಕುಟುಂಬಗಳು ಹಾಗೂ ಪೌರ ಕಾರ್ಮಿಕರಿಗೆ 5 ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ ವಿತರಿಸಿದ್ದಾರೆ.

    ಖಡಕ್ ಮಾತುಗಳಿಗೆ ಹೆಸರಾದ ನಾರಾಯಣಸ್ವಾಮಿ, ನೋಡೋಣ, ಮಾಡೋಣ ಎನ್ನದೇ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಒಮ್ಮೊಮ್ಮೆ ಇವರ ಸ್ಪೀಡ್‌ಗೆ ಅಧಿಕಾರಿಗಳು ಕಂಗಾಲಾಗಿದ್ದೂ ಇದೆ.

    ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಕುರಿತು ಸಚಿವರು, ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರತಿಷ್ಠಾನದ ಅನುದಾನವನ್ನು ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಆಸ್ಪತ್ರೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕೆಂದು ಬಲವಾಗಿ ಪ್ರತಿಪಾದಿಸಿ ಅಲ್ಲೂ ಯಶಸ್ವಿಯಾಗಿದ್ದಾರೆ.

    ಕರೊನಾ ಸಂಕಷ್ಟ ಆರಂಭವಾದಾಗಿನಿಂದ ಈವರೆಗೆ ವಿವಿಧ ಹಂತಗಳಲ್ಲಿ ಅಧಿಕಾರಿಗಳ ಸಭೆ ನಡೆಸಿಕೊಂಡು ಬಂದಿದ್ದಾರೆ. ಸಭೆಗಳ ಬಳಿಕ ಆಹಾರ ಧಾನ್ಯಗಳ ಕಿಟ್, ಅನ್ನಸಂತರ್ಪಣೆ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿಮ್ಮ ಸಂಕಷ್ಟದಲ್ಲಿ ನಾನಿದ್ದೇನೆ ಎಂಬ ಭರವಸೆ ಮೂಡಿಸುತ್ತಿದ್ದಾರೆ.

    ಲಾಕ್‌ಡೌನ್ ಘೋಷಣೆ ಆದಂದಿನಿಂದಲೂ ಆರೋಗ್ಯ ಇಲಾಖೆ ಹಾಗೂ ಜಿಲ್ಲೆ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಪ್ರತ್ಯೇಕ ಸಭೆಗಳನ್ನು ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೋವಿಡ್-19 ಆಸ್ಪತ್ರೆ ಸಹಿತ ಕ್ಷೇತ್ರದಲ್ಲಿ ಕರೊನಾ ಹತೋಟಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಆಗಬೇಕಿರುವ ಕೆಲಸಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.

    ಲೋಕಸಭಾ ಕ್ಷೇತ್ರ ಜನರ ಹಿತರಕ್ಷಣೆಯೊಂದಿಗೆ ಆನೇಕಲ್‌ನ ಸಾವಿರಾರು ಅಭಿಮಾನಿಗಳು ನಾರಾಯಣಸ್ವಾಮಿ ಬೆನ್ನಿಗಿರುವುದು ಅವರು ಅಲ್ಲೂ ಪ್ರಬಲ ಪ್ರಭಾವ ಹೊಂದಿದ್ದಾರೆಂಬ ಮಾತಿಗೆ ಪೂರಕವಾಗಿದೆ.

    ಭದ್ರಾ ಮೇಲ್ದಂಡೆ ಯೋಜನೆಗಿದ್ದ ಅಡ್ಡಿ ನಿವಾರಣೆ: ಶಿಕ್ಷಣ ಕ್ಷೇತ್ರ ಸುಧಾರಣೆ ಕುರಿತು ಸದಾ ಚಿಂತನೆ ನಡೆಸುವ ನಾರಾಯಣಸ್ವಾಮಿ, ರೈತರ ಹಿತವನ್ನು ಕಡೆಗಣಿಸಿಲ್ಲ. ದಶಕಗಳ ಹೋರಾಟದ ಫಲವಾಗಿ ಮಂಜೂರಾದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ತೊಡಕಾಗಿದ್ದ ಅಜ್ಜಂಪುರ-ಶಿವನಿ ಮಾರ್ಗದ ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ ಇತ್ತೀಚೆಗೆ ಬಿಡುವಿಲ್ಲದೆ ಓಡಾಡಿದ್ದಾರೆ.

    ಕಾಮಗಾರಿ ಸಲುವಾಗಿ ರೈಲುಗಳ ಸಂಚಾರ ಸ್ಥಗಿತಕ್ಕೆ ಪಟ್ಟು ಹಿಡಿದಿದ್ದ ನಾರಾಯಣಸ್ವಾಮಿ, ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಂದ ರೈಲು ಸಂಚಾರ ಸ್ಥಗಿತಕ್ಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ನೇತೃತ್ವದಲ್ಲಿ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.

    ಈಗ ಅಂಡರ್‌ಪಾಸ್ ಕಾಮಗಾರಿ ಸ್ಥಳದ ಬಳಿ ಪ್ರತ್ಯೇಕ ಸಿಂಗಲ್ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಕಾರಿಗಳು ಒಪ್ಪಿದ್ದು, ಒಂದು ತಿಂಗಳ ಒಳಗೆ ಮಾರ್ಗ ನಿರ್ಮಾಣವಾಗಲಿದೆ. ಪಟ್ಟು ಹಿಡಿದು ಕೆಲಸ ಮಾಡಿಸುವ ನಾರಾಯಣಸ್ವಾಮಿ ಅವರ ಶೈಲಿಗೆ ಇದು ಸಾಕ್ಷಿ.

    ಬರದಿಂದ ಬಳಲುತ್ತಿರುವ ಚಿತ್ರದುರ್ಗ ಜಿಲ್ಲೆಗೆ ನೀರು ಕೊಡಿಸಲು ಶ್ರಮಿಸುವುದು ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸಬೇಕಿದೆಯೇ ಹೊರತು ಸುಮ್ಮನೆ ಮಾತನಾಡಿದರೆ ಪ್ರಯೋಜನವಿಲ್ಲ ಎನ್ನುತ್ತಾರೆ ಸಂಸದರು.

    ಚಳ್ಳಕೆರೆಗೆ ನೀರು: ಚಳ್ಳಕೆರೆಗೆ ವೇದಾವತಿ ನೀರು ಕೊಡಿಸಲು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆ, ವಿವಿ ಸಾಗರದಿಂದ ನೀರು ಬಿಡಿಸುವ ನಿಟ್ಟಿನಲ್ಲಿ ಪಕ್ಷ ಭೇದ ಮರೆತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಜತೆ ನಾರಾಯಣಸ್ವಾಮಿ ಕೈಜೋಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ನೀರು ಹರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಶ್ರಮ ಸಾರ್ಥಕವಾಗಿದ್ದನ್ನು ಕಂಡು ಹರ್ಷಿಸಿದ್ದಾರೆ.

    ನಾಲ್ಕು ತಾಲೂಕುಗಳಲ್ಲಿ ಅನ್ನದಾಸೋಹ ಕೇಂದ್ರ: ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡವರಿಗೆ ನಿತ್ಯ ಸಂಸದರ ಅನ್ನದಾಸೋಹ ಕೇಂದ್ರದಲ್ಲಿ ಹಸಿದವರಿಗೆ ಉಚಿತವಾಗಿ ಆಹಾರ ಬಡಿಸುವ ಕೆಲಸ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಹಾಗೂ ಅನೇಕಲ್ ವಿಧಾನಸಭಾ ಕ್ಷೇತ್ರದ ಹಲವೆಡೆ ಸಂಸದರು ದಾಸೋಹ ಕೇಂದ್ರಗಳನ್ನು ವೈಯಕ್ತಿಕ ಖರ್ಚಿನಲ್ಲಿ ಆರಂಭಿಸಿದ್ದಾರೆ.

    ಚಿತ್ರದುರ್ಗ-ಏಪ್ರಿಲ್ 20-ಮೇ 4ರ ವರೆಗೆ
    ಹಿರಿಯೂರು-ಏಪ್ರಿಲ್ 27-ಮೇ4ರ ವರೆಗೆ
    ಚಳ್ಳಕೆರೆ-ಏಪ್ರಿಲ್ 29ರಿಂದ ಮೇ 17ರ ವರೆಗೆ
    ಪರಶುರಾಮಪುರ-ಏಪ್ರಿಲ್ 29ರಿಂದ ಮೇ 17ರ ವರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts