More

    ಮಕ್ಕಳ ಕಾಳಜಿಯಲ್ಲಿ ಜಾಲಿಗೆ ಪಂಚಾಯಿತಿ ಮುಂಚೂಣಿ

    ವಿಜಯವಾಣಿ ಸುದ್ದಿಜಾಲ ಕುಂದಾಣ
    ಗ್ರಾಮಾಂತರ ಜಿಲ್ಲೆಯ ಜಾಲಿಗೆ ಮತ್ತು ಬೆಟ್ಟಕೋಟೆ ಪಂಚಾಯಿತಿ ಮಕ್ಕಳ ರಕ್ಷಣೆ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಕಾಳಜಿ ವಹಿಸುವ ವಿಶೇಷ ಪಂಚಾಯಿತಿಗಳ ಪಟ್ಟಿಯಲ್ಲಿದ್ದು, ವಿಶೇಷವಾಗಿ ಬೆಟ್ಟಕೋಟೆಗಿಂತ ಜಾಲಿಗೆ ಪಂಚಾಯಿತಿ ಮುಂಚೂಣಿಯಲ್ಲಿದೆ ಎಂದು ಜಾಲಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಿಳಿಸಿದರು.
    ಕುಂದಾಣ ಹೋಬಳಿ ಜಾಲಿಗೆ ಪಂಚಾಯಿತಿಯಿಂದ ಬಸವನಪುರ ಸರ್ಕಾರಿ ಪೌಢಶಾಲೆಯಲ್ಲಿ \ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಪಂಚಾಯಿತಿಯಲ್ಲಿ 2 ಕೋಟಿ ರೂ.ಅನುದಾನವಿದ್ದು, ಶಾಲೆ ಅಭಿವೃದ್ಧಿಗೆ ವರ್ಗ ಒಂದರಲ್ಲಿ 8 ಲಕ್ಷ ರೂ.ಮೀಸಲಿಡಲಾಗಿದೆ. ತಿಂಡ್ಲುವಿನಲ್ಲಿ ಬಾಸ್ಕೆಟ್‌ಬಾಲ್ ಸೌಲಭ್ಯ ಕೇಳಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಅಗತ್ಯ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
    ಪಂಚಾಯಿತಿ ವ್ಯಾಪ್ತಿಯಲ್ಲಿ 5ರಿಂದ 18 ವರ್ಷದವರೆಗೆ ಸುಮಾರು 1,574 ಮಕ್ಕಳು ಇದ್ದಾರೆ. ಆರೋಗ್ಯ ಇಲಾಖೆಯಿಂದ ನೀಡುವ ಮಾಸಿಕ ಚುಚ್ಚುಮದ್ದು, ಶಾಲೆಗೆ ಗೈರು, ಇತ್ಯಾದಿ ಮಾಹಿತಿ ಕಲೆ ಹಾಕಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಕ್ಕಳ ಸಹಾಯವಾಣಿ ನೆನಪಿಟ್ಟುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.
    ಮಕ್ಕಳಲ್ಲೇ ಪ್ರತಿನಿಧಿಗಳ ನೇಮಕ ಮಾಡಿ ಮಕ್ಕಳು ಬಯಸುವ ಸಾಮಾಜಿಕ, ವೈಯಕ್ತಿಕ ಮಾಹಿತಿಯನ್ನು ಪಂಚಾಯಿತಿಗೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಖಿನ್ನತೆಗೆ ಒಳಗಾಗುವ ಮಕ್ಕಳ ಬಗ್ಗೆ ಶಿಕ್ಷಕರು ನಿಗಾ ವಹಿಸಿ ಅಂಥ ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ಆತ್ಮಹತ್ಯೆಯಂಥ ಯೋಚನೆ ಬೇಡ:
    ಪ್ರತಿಯೊಬ್ಬರ ಜೀವನ ಅಮೂಲ್ಯ. ಸಣ್ಣಪುಟ್ಟ ವಿಚಾರಗಳಿಗೆ ಆತ್ಮಹತ್ಯೆಯಂಥ ಯೋಚನೆ ಮಾಡಬಾರದು ಎಂದು ಪಿಡಿಒ ಪ್ರಕಾಶ್ ಮಕ್ಕಳಿಗೆ ಸಲಹೆ ನೀಡಿದರು. ಯಾವುದೇ ಸಮಸ್ಯೆ ಎದುರಾದರೂ ಧೈರ್ಯವಾಗಿ ಎದುರಿಸಬೇಕು. ಪಾಲಕರೊಂದಿಗೆ ಮುಕ್ತವಾಗಿ ಚರ್ಚಿಸಿ ಅವರ ಮಾರ್ಗದರ್ಶನ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಗ್ರಾಪಂ ಗ್ರಂಥಾಲಯದಲ್ಲಿ 6 ಸಾವಿರ ಪುಸ್ತಕಗಳಿವೆ, 1 ಸಾವಿರಕ್ಕೂ ಹೆಚ್ಚು ಮಕ್ಕಳು ನೋಂದಣಿಯಾಗಿದ್ದಾರೆ. ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಿ ಪ್ರಕಟಿಸುವ ‘ವಿದ್ಯಾರ್ಥಿ ಉದ್ಯೋಗ ಮಿತ್ರ’ ಪತ್ರಿಕೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts