More

    ಕಮಲ ತೆಕ್ಕೆಗೆ ಪಿಎಲ್‌ಡಿ ಬ್ಯಾಂಕ್

    ಚಿಕ್ಕಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಕಮಲ ತೆಕ್ಕೆಗೆ ಸೇರಿದೆ. 12 ಸ್ಥಾನಗಳ ಪೈಕಿ 8ರಲ್ಲಿ ಬಿಜೆಪಿ ಬೆಂಬಲಿತರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

    ನಗರಸಭಾ ಚುನಾವಣೆ ಬಳಿಕ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಿಎಲ್‌ಡಿ ಬ್ಯಾಂಕ್ ಆಡಳಿತ ಯಂತ್ರಾಂಗದ ಚುಕ್ಕಾಣಿ ಹಿಡಿಯಲು ಪೈಪೋಟಿ ನಡೆಸಿದ್ದವು, ಆದರೆ ವೈದ್ಯಕೀಯ ಸಚಿವ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ಕಮಲ ಮೇಲುಗೈ ಸಾಧಿಸಿದೆ. ಮೈತ್ರಿ ಮೂಲಕ ಚುನಾವಣೆ ಎದುರಿಸಿದರೂ ಕಾಂಗ್ರೆಸ್- -ಜೆಡಿಎಸ್ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಭಾನುವಾರ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಪೆರೆಸಂದ್ರ ಕ್ಷೇತ್ರದಿಂದ ತಿರುಮಳಪ್ಪ (ಪರಿಶಿಷ್ಟ ಜಾತಿ) ಹಾಗೂ ಅಗಲಗುರ್ಕಿ ಕ್ಷೇತ್ರದಿಂದ ಪಿ.ನಾಗೇಶ್ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.

    ಉಳಿದ 10 ಸ್ಥಾನಗಳಿಗೆ ನಗರದ ತಾಲೂಕು ಕಚೇರಿ, ತಾಪಂ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 10 ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ಚಲಾಯಿಸಲು ಅವಕಾಶ ನೀಡಲಾಗಿತ್ತು.
    12 ಸ್ಥಾನಗಳಿಗೆ 23 ಮಂದಿ ಕಣದಲ್ಲಿದ್ದರು. ಮತದಾರರು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅಭ್ಯರ್ಥಿಗಳು ಮತ್ತು ಬೆಂಬಲಿತ ರಾಜಕೀಯ ಪಕ್ಷಗಳ ಮುಖಂಡರು ಕೊನೇ ಕ್ಷಣದವರೆಗೂ ಮತದಾರರ ಮನವೊಲಿಸಲು ಕಸರತ್ತು ನಡೆಸಿದರು.

    ಮತಗಟ್ಟೆ ಕೇಂದ್ರದಲ್ಲಿ ಮಾತಿನ ಚಕಮಕಿ: ಹೆಚ್ಚಿನ ಬೆಂಬಲಿತರ ಆಯ್ಕೆ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಸರತ್ತಿನ ನಡುವೆ ಮತಗಟ್ಟೆ ಕೇಂದ್ರದಲ್ಲಿ ಮಾತಿನ ಚಕಮಕಿ ನಡೆಯಿತು. ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ ಸೇರಿ ಮತದಾರರಲ್ಲದ ಹಲವರನ್ನು ಮತಗಟ್ಟೆಯೊಳಗೆ ಬಿಡಲಾಗಿದೆ ಎಂದು ಆರೋಪಿಸಿ ಮೈತ್ರಿ ಮುಖಂಡರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪರಸ್ಪರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಗಲಾಟೆಗೆ ಮುಂದಾಗುತ್ತಿದ್ದವರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಕೊನೆಗೆ ನೂರಾರು ಕಾರ್ಯಕರ್ತರ ಜಮಾವಣೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಅರಿತು ಎಲ್ಲರನ್ನು ಹೊರಗೆ ಕಳುಹಿಸಲಾಯಿತು.

    ಕಾರ್ಯಕರ್ತರಿಗೆ ಮಾರ್ಗದರ್ಶನ : ಮತಗಟ್ಟೆ ಬಳಿಗೆ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಪ್ರತ್ಯೇಕವಾಗಿ ಭೇಟಿ ನೀಡಿ, ಆಗಾಗ ಕಾರ್ಯಕರ್ತರಿಂದ ಚುನಾವಣಾ ಮಾಹಿತಿ ತಿಳಿದುಕೊಳ್ಳುವುದರ ಜತೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ ಮತ್ತು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಬಿಜೆಪಿ ಬೆಂಬಲಿತ ಸದಸ್ಯರಿಗೆ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಮುಖಂಡರಾದ ಕೆ.ವಿ.ನವೀನ್ ಕಿರಣ್, ವಿನಯ್ ಶ್ಯಾಮ್ ಕೈ ಬೆಂಬಲಿತರಿಗೆ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್ ಬೆಂಬಲಿತರ ಪರವಾಗಿ ಉಸ್ತುವಾರಿ ವಹಿಸಿಕೊಂಡಿದ್ದರು.

    ಬಟ್ಟೆ ಹರಿದುಕೊಂಡರು : ಲಿತಾಂಶ ಪ್ರಕಟಣೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ನಡೆದು ಪರಸ್ಪರ ಬಟ್ಟೆ ಹರಿದುಕೊಂಡ ಘಟನೆಯೂ ನಡೆಯಿತು. ಮತಗಟ್ಟೆಗೆ ಅನ್ಯರ ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆ ಬಗ್ಗೆ ಕಾಂಗ್ರೆಸ್ ಮುಖಂಡ ಲಾಯರ್ ನಾರಾಯಣಸ್ವಾಮಿ ಅಧಿಕಾರಿಗಳ ಗಮನ ಸೆಳೆಯುತ್ತಿದ್ದಂತೆ ಗಲಾಟೆ ಉಂಟಾಯಿತು. ಇದೇ ವೇಳೆ ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕರ್ತರು ಎಳೆದಾಡಿಕೊಂಡಿದ್ದು ಅಂಗಿಯ ಗುಂಡಿಗಳು ಕಿತ್ತಿವೆ. ತಕ್ಷಣ ಎಸ್‌ಐ ಚೇತನ್ ಆಕ್ರೋಶಗೊಂಡಿದ್ದವರನ್ನು ಸ್ಥಳದಿಂದ ಹೊರಗಡೆ ಕರೆದುಕೊಂಡು ಹೋದರು. ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts