More

    ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಉತ್ತಮ ಸಾಧನೆ

    ಶಿವಮೊಗ್ಗ: ಬೆಂಗಳೂರು ವಲಯದಲ್ಲೇ 2021-22ನೇ ಸಾಲಿಗೆ ಶಿವಮೊಗ್ಗ ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ ಅತ್ಯುತ್ತಮ ಸಾಧನೆ ಮಾಡಿದೆ. ಬ್ಯಾಂಕ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಕೃಷಿ ಸಾಲ ನೀಡಿದ್ದು, ಹೆಚ್ಚು ಲಾಭ ಗಳಿಸಿದ್ದು, ಹೆಚ್ಚಿನ ಡಿವಿಡೆಂಡ್(ಶೇ.6) ವಿತರಣೆ ಡಿಸಿಸಿ ಬ್ಯಾಂಕ್ ಹೆಗ್ಗಳಿಕೆಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ತಿಳಿಸಿದರು.
    ಬ್ಯಾಂಕ್‌ನ 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ 22.99 ಕೋಟಿ ರೂ. ನಿವ್ವಳ ಲಾಭ ಗಳಿಸಲಾಗಿದೆ. ಜಿಲ್ಲೆಯಲ್ಲಿ 28 ಶಾಖೆಗಳನ್ನು ಹೊಂದಿರುವ ಬ್ಯಾಂಕ್‌ಗೆ 173 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೂ ಸೇರಿದಂತೆ 708 ಸಹಕಾರ ಸಂಘಗಳು ಸದಸ್ಯತ್ವ ಪಡೆದಿವೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ 30 ಕೋಟಿ ರೂ. ನಿವ್ವಳ ಲಾಭದ ಗುರಿ ಹೊಂದಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    2022ರ ಮಾರ್ಚ್ ಅಂತ್ಯಕ್ಕೆ ಡಿಸಿಸಿ ಬ್ಯಾಂಕ್ 1244.36 ಕೋಟಿ ರೂ. ಠೇವಣಿ ಸಂಗ್ರಹಣೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹವನ್ನು 1,350 ಕೋಟಿ ರೂ.ಗೆ ಏರಿಕೆ ಮಾಡುವ ಗುರಿ ಹೊಂದಿದ್ದೇವೆ. ಜಿಲ್ಲೆಯ ಜನರು ಪ್ರಸ್ತುತ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
    ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಲಾಗವುದು. ಡಿಸಿಸಿ ಬ್ಯಾಂಕ್‌ನ ಸದಸ್ಯರು ಮನೆ ಬಾಗಿಲಲ್ಲೇ ವ್ಯವಹಾರ ನಡೆಸಲು ಇದರಿಂದ ಅನುಕೂಲವಾಗಲಿದೆ. ಆರ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲು ಅನುಮತಿ ದೊರೆತಿದೆ ಎಂದು ತಿಳಿಸಿದರು.
    2013ರಲ್ಲಿ ಬ್ಯಾಂಕ್‌ನ ಸ್ಥಿತಿ ತೀರಾ ಗಂಭೀರವಾಗಿತ್ತು. ಜನರು ಬ್ಯಾಂಕ್‌ನ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ಬಳಿಕ ಬ್ಯಾಂಕ್‌ನ ಪ್ರಗತಿಗೆ ಎಲ್ಲರೂ ಕೈ ಜೋಡಿಸಿದರು. ಠೇವಣಿ ಪ್ರಮಾಣ ಹೆಚ್ಚಳವಾಯಿತು. ರೈತರ ನೆರವಿಗೆ ಡಿಸಿಸಿ ಬ್ಯಾಂಕ್ ಸದಾ ಸಿದ್ಧವಿದೆ. ಮುಂದೆ ಈ ಬ್ಯಾಂಕ್‌ನ್ನು ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ಆಡಳಿತ ಮಂಡಳಿಯ ಗುರಿಯಾಗಿದೆ ಎಂ.ಬಿ.ಚನ್ನವೀರಪ್ಪ ಹೇಳಿದರು.
    ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಎಸ್.ಡೋಂಗ್ರೆ, ನಿರ್ದೇಶಕರಾದ ಎಸ್.ಪಿ.ದಿನೇಶ್, ಜಿ.ಎನ್.ಸುದೀರ್, ಕೆ.ಪಿ.ದುಗ್ಗಪ್ಪ ಗೌಡ, ಎಂ.ಎಂ.ಪರಮೇಶ್, ಜೆ,ಪಿ.ದುಗ್ಗಪ್ಪಗೌಡ, ಎಚ್.ಕೆ.ವೆಂಕಟೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts