More

    ಪಾವಗಡ ಠಾಣೆ ಪಿಎಸ್ಸೈ ಅಮಾನತಿಗೆ ಸಂಭ್ರಮ

    ಪಾವಗಡ: ಕರ್ತವ್ಯ ನಿರ್ಲಕ್ಷೃ ಹಿನ್ನೆಲೆಯಲ್ಲಿ ಪಾವಗಡ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ.

    ಆದೇಶ ಹೊರಬೀಳುತ್ತಿದ್ದಂತೆ ಪಟ್ಟಣದ ಶನಿಮಹಾತ್ಮ ಸರ್ಕಲ್ ಬಳಿ ಸಾರ್ವಜನಿಕರು ಹಾಗೂ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಂಚನೆ, ಕಳ್ಳತನ, ಜೇಬುಗಳ್ಳತನ ಸೇರಿ ಹಲವು ದೂರುಗಳನ್ನು ದಾಖಲಿಸದೆ ನಿರ್ಲಕ್ಷ್ಯ ತೋರಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದೆರಡು ವಾರಗಳಲ್ಲಿ ಇಬ್ಬರು ಪಿಎಸ್ಸೈ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಫೆ.1 ರಂದು ಜಯನಗರ ಪಿಎಸ್ಸೈ ಮುತ್ತುರಾಜ್ ಅವರನ್ನು ಅಮಾನತುಗೊಳಿಸಿ ಎಸ್ಪಿ ಕ್ರಮ ಕೈಗೊಂಡಿದ್ದರು.

    ಸಾರ್ವಜನಿಕರ ಸಂಭ್ರಮ: ಭ್ರಷ್ಟಾಚಾರ, ಮರಳುದಂಧೆ, ಉಡಾಫೆತನ, ಕರ್ತವ್ಯ ನಿರ್ಲಕ್ಷೃ ತೋರುತ್ತಿದ್ದ ಪಿಎಸ್ಸೈ ರಾಘವೇಂದ್ರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದವು. ಹಾಗಾಗಿ, ಗುರುವಾರ ಪಿಎಸ್ಸೈ ಅಮಾನತು ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಶನಿಮಹಾತ್ಮ ಸರ್ಕಲ್‌ನಲ್ಲಿ ಸಾರ್ವಜನಿಕರು ಹಾಗೂ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಜಿಲ್ಲಾ ಕೇಂದ್ರ ತುಮಕೂರಿನಲ್ಲಿಯೂ ಕರ್ತವ್ಯ ನಿರ್ವಹಿಸುವ ವೇಳೆ ರಾಘವೇಂದ್ರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು, ಕ್ಯಾತಸಂದ್ರ, ಹೊಸ ಬಡಾವಣೆ ಠಾಣೆಗಳಲ್ಲಿ ಸೇವೆ ಸಲ್ಲಿಸುವ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು.

    2018ರಲ್ಲೊಮ್ಮೆ ಅಮಾನತು: ಜುಲೈ 7, 2018ರಲ್ಲಿ ಉಚಿತ ಬಸ್ ಪಾಸ್‌ಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ್ದ ಹೋರಾಟ ಹಿಂಸಾರೂಪ ತಾಳಿತ್ತು. ಈ ಸಂದರ್ಭದಲ್ಲಿ ಹೊಸಬಡಾವಣೆ ಠಾಣೆ ಪಿಎಸ್ಸೈ ರಾಘವೇಂದ್ರ ಕರ್ತವ್ಯಲೋಪ ಎಸಗಿದ್ದ ಆರೋಪದಲ್ಲಿ ಅಂದಿನ ಎಸ್ಪಿ ಡಾ.ದಿವ್ಯಾಗೋಪಿನಾಥ್ ಅಮಾನತುಗೊಳಿಸಿದ್ದರು.

    ಪ್ರತಿಭಟನೆ ನಡೆಸಿದ್ದ ವಕೀಲರು: ಕುವೆಂಪುನಗರ ನಿವಾಸಿ ವಕೀಲ ಸಿ.ಎನ್.ಹನುಮಂತರಾಜು ಅವರ ಜತೆ ಅನುಚಿತವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ 2018ರ ಮಾರ್ಚ್ 12ರಿಂದ 12 ದಿನ ಪಿಎಸ್ಸೈ ರಾಘವೇಂದ್ರ ವಿರುದ್ಧ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಪಿಎಸ್ಸೈ ರಾಘವೇಂದ್ರ ಅವರನ್ನು ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಿ ಇಲಾಖೆ ಮಟ್ಟದ ವಿಚಾರಣೆಗೆ ಆದೇಶಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts