More

    ಜಾತಿ ಗಣತಿಗೆ ಮುಂದುವರಿದ ಸಮಾಜಗಳಿಂದ ಅಡ್ಡಿ

    ರಾಯಚೂರು: ಜಾತಿ ಗಣತಿ ನಡೆಸುವ ಮೂಲಕ ಜಾತಿವಾರು ಜನಸಂಖ್ಯೆ ಮಾಹಿತಿ ಸಂಗ್ರಹಕ್ಕೆ ಮುಂದುವರಿದ ಸಮಾಜಗಳು ಅಡ್ಡಿಪಡಿಸುತ್ತಿವೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ, ಮಾಹಿತಿ ಸಂಗ್ರಹಕ್ಕೆ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಶಾಸಕ ಹಾಗೂ ಭಗೀರಥ ಉಪ್ಪಾರ ಸಮಾಜ ಸಂಘದ ಅಧ್ಯಕ್ಷ ಪುಟ್ಟರಂಗಶೆಟ್ಟಿ ತಿಳಿಸಿದರು.
    ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಕಾಂತರಾಜು ಆಯೋಗದ ಮೂಲಕ ವರದಿ ಪಡೆಯಲು ಮಾಹಿತಿ ಪಡೆಯಬೇಕು ಎನ್ನುವ ಸನ್ನಿವೇಶದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಡೆದರು ಎಂದರು.
    ಮಾಜಿ ಸಿಎಂ ಡಿ.ದೇವರಾಜ ಅರಸರನ್ನು ಉಪ್ಪಾರ ಸಮಾಜದ ಜನರು ಎಂದಿಗೂ ಮರೆಯಬಾರದು. ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಯತ್ನಿಸಿದರು. ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ ಕೂಡಾ ಸಿಎಂ ಇದ್ದಾಗ ಸಮಾಜದ ಜನರಿಗೆ ಸ್ಥಾನಮಾನ ನೀಡಿದ್ದಾರೆ.
    ಸಮಾಜದವರು ರಾಜಕೀಯವಾಗಿ ಮುಂದೆ ಬರಬೇಕು. ಯಾವ ಪಕ್ಷ ಸಮಾಜಕ್ಕೆ ಉತ್ತಮ ಸ್ಥಾನಮಾನ ನೀಡುತ್ತದೆ ಅಂಥವರನ್ನು ಬೆಂಬಲಿಸಬೇಕು. ಕಳೆದ ಸರ್ಕಾರದಲ್ಲಿ ಹಿಂದುಳಿದ ಜಾತಿಗಳಿಗೆ 7 ಕೋಟಿ ರೂ. ಕೊಡಲಾಗಿತ್ತು. ಅದರಿಂದ ಏನೂ ಮಾಡಲು ಸಾಧ್ಯವಿದೆ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
    ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಒಬ್ಬಿಬ್ಬರು ರಾಜಕೀಯವಾಗಿ ಬೆಳೆದರೆ ಏನೂ ಉಪಯೋಗವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಾಗ ಮಾತ್ರ ಸಮಾಜವೂ ಬೆಳೆಯುತ್ತದೆ. ಉಪ್ಪಾರ ಸಮಾಜಕ್ಕೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾಗಿದೆ.
    ಸಮಾಜ ಅಭಿವೃದ್ಧಿ ಹೊಂದಲು ಮೀಸಲಾತಿ ಸೌಲಭ್ಯ ದೊರೆಯಬೇಕಾಗಿದ್ದು, ರಾಜಕೀಯ ಸ್ಥಾನಮಾನದ ಅಗತ್ಯವಿದೆ. ಸಮಾಜದ ಕಲ್ಯಾಣ ಮಂಟಪಕ್ಕೆ ಕಳೆದ ಬಾರಿ 50 ಲಕ್ಷ ರೂ. ನೀಡಲಾಗಿದ್ದು, ಈ ಬಾರಿ 15 ಲಕ್ಷ ರೂ.ಗಳನ್ನು ಶಾಸಕರ ಅನುದಾನದಡಿ ನೀಡಲಾಗುವುದು ಎಂದರು.
    ಕ್ಯಾನ್ಸರ್ ತಜ್ಞ ವೈದ್ಯ ಡಾ.ರಮೇಶ ಸಾಗರ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಹಾಗೂ ವೈದ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
    ಮಲ್ದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೇವಣ್ಣ ನವಲಕಲ್, ಅಧ್ಯಕ್ಷ ಎನ್.ಬುಗ್ಗಾರೆಡ್ಡಿ, ಪದಾಕಾರಿಗಳಾದ ಯು.ವೆಂಕೋಬ, ಶ್ರೀಕಾಂತ, ಆದಿರಾಜ ಆದೋನಿ ಎನ್.ರಾಮಾಂಜಿನೇಯ, ಬನ್ನಪ್ಪ, ಎಂ.ಸುಭಾಷಚಂದ್ರ, ರಮೇಶ ಮೇಟಿ, ಶ್ರೀನಿವಾಶ ಶೆಟ್ಟಿ, ದೇವರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts