More

    ಗ್ರಾಪಂನಲ್ಲೇ ಬಿಪಿ, ಶುಗರ್ ತಪಾಸಣೆ

    ಬೆಳಗಾವಿ: ಹಳ್ಳಿಗಳಲ್ಲಿ ಕರೊನಾ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಪಂ ಗ್ರಾಪಂಗಳ ಮಟ್ಟದಲ್ಲಿಯೇ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಜ್ವರ ತಪಾಸಣೆಗೆ ನಿರ್ಧರಿಸಿದೆ. ರಾಜ್ಯದಲ್ಲಿ ಈ ಯೋಜನೆ ಜಾರಿಗೆ ತಂದ ಮೊದಲ ಜಿಲ್ಲೆ ಬೆಳಗಾವಿಯಾಗಿದೆ.

    ಕರೊನಾ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರನ್ನು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸುವ ಉದ್ದೇಶದಿಂದ ಜಿಲ್ಲೆಯ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 506 ಗ್ರಾಪಂ ವ್ಯಾಪ್ತಿಯ 1130 ಹಳ್ಳಿಗಳಲ್ಲಿ ಉಚಿತವಾಗಿ ಬಿಪಿ ಮತ್ತು ಶುಗರ್ ತಪಾಸಣೆ ಕಾರ್ಯ ನಡೆಯಲಿದೆ.

    ಪ್ರತ್ಯೇಕ ಅನುದಾನ ಇಲ್ಲ: ಗ್ರಾಪಂಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಕೇಂದ್ರಗಳಿಗೆ ಬಿಪಿ, ಶುಗರ್ ಹೊಂದಿರುವ ರೋಗಿಗಳು ಅಧಿಕ ಪ್ರಮಾಣದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ತಪಾಸಣೆ ನಡೆಸುವ ಸಲುವಾಗಿ ಗ್ರಾಪಂ ಮಟ್ಟದಲ್ಲಿ ಲಭ್ಯವಿರುವ ಆರೋಗ್ಯ ಸಹಾಯಕಿಯರನ್ನು ನಿಯೋಜನೆ ಮಾಡುವುದು. ಸ್ಪಿಗ್ಮೋಮೊನೋಮೀಟರ್, ಪಲ್ಸ್ ಆಕ್ಸಿಮೀಟರ್, ಸಕ್ಕರೆ ಕಾಯಿಲೆ, ಜ್ವರ ತಪಾಸಣೆ ಉಪಕರಣಗಳ ಖರೀದಿಗೆ ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಸರ್ಕಾರದಿಂದ ಪ್ರತ್ಯೇಕ ಅನುದಾನ ಇರುವುದಿಲ್ಲ. ಬದಲಾಗಿ ಗ್ರಾಪಂಗಳಲ್ಲಿನ ನಿಧಿ-2ರಲ್ಲಿ ಲಭ್ಯವಿರುವ ಅನುದಾನದಲ್ಲಿಯೇ ಉಪಕರಣ ಖರೀದಿಸಬೇಕು.

    ಆಶಾ ಕಾರ್ಯಕರ್ತೆಯರಿಗೆ ತರಬೇತಿ: ಕೋವಿಡ್-19ನಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರನ್ನು ರಕ್ಷಿಸುವುದು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಗ್ರಾಪಂಗಳ ಮಟ್ಟದಲ್ಲಿಯೇ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಗೆ ನುರಿತ ವೈದ್ಯರಿಂದ ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಈ ಯೋಜನೆಗೆ ಆಶಾ ಕಾರ್ಯಕರ್ತೆಯರ ನೆಟ್‌ವರ್ಕ್ ಸಹಕಾರಿಯಾಗಿದೆ. ಪರೀಕ್ಷೆ ಕುರಿತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಹಳ್ಳಿಯ ಮನೆಮನೆಗೆ ಹೋಗಿ ವಿಷಯ ಮುಟ್ಟಿಸುತ್ತಾರೆ. ಬಳಿಕ ನಿಗದಿತ ದಿನದಂದು ಪರೀಕ್ಷೆ ನಡೆಸಲಿದ್ದಾರೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಗ್ರಾಪಂಗಳಲ್ಲಿ ಆರ್ಥಿಕ ಸಮಸ್ಯೆ: ಣಲಾಕ್‌ಡೌನ್ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 506 ಗ್ರಾಪಂಗಳಲ್ಲಿ ಕರ ವಸೂಲಿ ಸಂಪೂರ್ಣ ಕೈಬಿಡಲಾಗಿದೆ. ಪರಿಣಾಮ ನಿಧಿ-2 ಖಾತೆಯಲ್ಲಿ ಅನುದಾನ ಲಭ್ಯವಿರದ ಕಾರಣ ಹೊರಗುತ್ತಿಗೆ ಸಿಬ್ಬಂದಿ ವೇತನ, ಕಚೇರಿ ಸಲಕರಣೆ ಸೇರಿ ಇನ್ನಿತರ ಖರೀದಿಗೆ ಆರ್ಥಿಕ ಸಮ್ಯಸ್ಯೆ ಉಂಟಾಗಿದೆ.

    ಇಂತಹ ಕಠಿಣ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಸಲಕರಣೆಗಳ ಖರೀದಿಗೆ ಪ್ರತ್ಯೇಕವಾಗಿ ಅನುದಾನ ನೀಡಿಲ್ಲ. ಬದಲಾಗಿ ನಿಧಿ-2 ಖಾತೆಯಿಂದಲೇ ಖರೀದಿಸಲು ಹಣ ಇಲ್ಲದೆ ಗ್ರಾಪಂಗಳ ಸಮಸ್ಯೆ ಎದುರಿಸುತ್ತಿವೆ.

    ಜಿಲ್ಲೆಯ 415 ಗ್ರಾಪಂಗಳಲ್ಲಿ ಆಡಳಿತಾಧಿಕಾರಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸ್ಪಿಗ್ಮೋಮೊನೋಮೀಟರ್, ಪಲ್ಸ್ ಆಕ್ಸಿಮೀಟರ್, ಸಕ್ಕರೆ ಕಾಯಿಲೆ, ಜ್ವರ ತಪಾಸಣೆ ಉಪಕರಣಗಳ ಖರೀದಿ ಜವಾಬ್ದಾರಿ ಆಡಳಿತಾಧಿಕಾರಿಗಳ ಮೇಲಿದೆ. ಅಲ್ಲದೆ ಚುನಾಯಿತ ಸದಸ್ಯರ ಆಡಳಿತ ಇರುವ ಗ್ರಾಪಂಗಳಲ್ಲಿ ಅಧ್ಯಕ್ಷ ಮತ್ತು ಪಿಡಿಒ ಜವಾಬ್ದಾರರಾಗುತ್ತಾರೆ. ಖರೀದಿಗೆ ಜಿಎಸ್‌ಟಿ ಬಿಲ್ ಕಡ್ಡಾಯಗೊಳಿಸಲಾಗಿದೆ.

    ಹಳ್ಳಿಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಪಂ ಮಟ್ಟದಲ್ಲೇ ಬಿಪಿ, ಶುಗರ್ ಪರೀಕ್ಷೆ ಮಾಡುವುದನ್ನು ಜಿಪಂನ ಹಿಂದಿನ ಸಿಇಒ ಡಾ.ಕೆ.ವಿ.ರಾಜೇಂದ್ರ ಜಾರಿಗೆ ತಂದಿದ್ದಾರೆ. ಕಾರ್ಯಕ್ರಮ ಮುಂದುವರಿಸಲಾಗುವುದು.
    | ಎಚ್.ವಿ.ಸುದರ್ಶನ ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts