More

    ಗಡಿ ಭಾಗದ ಹಳ್ಳಿಗಳೂ ಸೀಲ್‌ಡೌನ್

    ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಶಿನೋಳಿ ವೈದ್ಯನಲ್ಲಿ ಗುರುವಾರ ಕರೊನಾ ವೈರಸ್ ದೃಢವಾಗಿದ್ದು ಶಿನೋಳಿ, ಕುದ್ರೇಮನಿ ಸೇರಿ 10 ಹಳ್ಳಿಗಳು ಸೀಲ್‌ಡೌನ್ ಆಗಿವೆ.

    ಆ ಭಾಗದ ಜನರಲ್ಲಿ ಆತಂಕ ಶುರುವಾಗಿದ್ದು, ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ಸೀಲ್‌ಡೌನ್ ಮಾಡಿದ್ದಾರೆ. ಗ್ರಾಮಗಳಲ್ಲಿ ಡಂಗುರ ಸಾರಿ ಜನರಿಗೆ ತಿಳಿಸಲಾಗಿದೆ. ಸೋಂಕಿತ ವೈದ್ಯ ಶಿನೋಳಿ ಗಡಿಯಲ್ಲಿ ಆಸ್ಪತ್ರೆ ತೆರೆದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಗ್ರಾಮಗಳ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಪಡೆದವರೆಲ್ಲ ಭೀತಿಗೊಳಗಾಗಿದ್ದಾರೆ.

    ಮನೆ ಮನೆಗೆ ತೆರಳಿ ಪತ್ತೆ ಕಾರ್ಯ: ಕರೊನಾ ಶಂಕಿತ ವೈದ್ಯ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊದಲೇ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ಗುರುವಾರ ಅವರಿಗೆ ವೈರಸ್ ದೃಢಪಡುತ್ತಿದ್ದಂತೆ ಖಾಸಗಿ ಆಸ್ಪತ್ರೆಯಿಂದ ರಾತ್ರೋರಾತ್ರಿ ಚಂದಗಡಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲು ದಾಖಲಿಸಿದ್ದಾರೆ. ಸೋಂಕಿತ ವೈದ್ಯನಿಂದ ಚಿಕಿತ್ಸೆ ಪಡೆದವರನ್ನು ಗಡಿ ಗ್ರಾಮದ ಗ್ರಾ.ಪಂ. ಅಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.

    ಅಧಿಕಾರಿಗಳಿಗೆ ತಲೆಬಿಸಿ: ಮಹಾರಾಷ್ಟ್ರದಿಂದ ರತ್ನಾಗಿರಿ ಹಾಗೂ ಅಂಬೋಲಿ ಮಾರ್ಗದಿಂದ ಹೆಚ್ಚು ಜನ ಬಂದಿರುವುದರಿಂದ ಚಂದಗಡ ತಾಲೂಕಿನಲ್ಲಿ ಕರೊನಾ ಪಾಸಿಟಿವ್‌ಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಚಂದಗಡ ತಾಲೂಕಿನ ಶಿನೋಳಿ ಗ್ರಾಮ ಕರ್ನಾಟಕದ ಗಡಿ ಭಾಗವಾಗಿದ್ದರಿಂದ ಸಹಜವಾಗಿ ಕಳ್ಳ ಮಾರ್ಗದಿಂದ ಬೆಳಗಾವಿಗೆ ಪ್ರವೇಶಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಮತ್ತೊಂದೆಡೆ, ಶಿನೋಳಿಯಲ್ಲಿ ಕೆಲಸ ಹುಡುಕಿಕೊಂಡು ಕರ್ನಾಟಕದ ಗಡಿ ಗ್ರಾಮದ ಜನ ಕೂಡ ಅತ್ತ ಹೋಗುವುದರಿಂದ ಯಾರು ಎಲ್ಲಿಂದ ಬರುತ್ತಾರೆ ಎನ್ನುವುದೇ ಎರಡೂ ರಾಜ್ಯದ ಅಧಿಕಾರಿಗಳಿಗೆ ತಿಳಿಯದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts