More

    ಬೆಂಗಳೂರು ವಿವಿ ನಿವೃತ್ತ ಪ್ರೊಫೆಸರ್ ಆತ್ಮಹತ್ಯೆ ಹಿಂದಿದೆ 2.5 ಕೋಟಿ ರೂಪಾಯಿ ರಹಸ್ಯ!

    ಬೆಂಗಳೂರು: ಕುಲಪತಿ ಹುದ್ದೆ ಪಡೆಯಲು 2.5 ಕೋಟಿ ರೂಪಾಯಿ ಸಾಲ ಮಾಡಿದ್ದೇ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್​ ಅಶೋಕ್​ ಕುಮಾರ್​ ಆತ್ಮಹತ್ಯೆಗೆ ಕಾರಣವಾಯಿತೇ?

    ಹೀಗೊಂದು ಅನುಮಾನವನ್ನು ಕಾಂಗ್ರೆಸ್​ ಹೊರಹಾಕಿದೆ. ರಾಜ್ಯದಲ್ಲಿ ಉಪಕುಲಪತಿ ಹುದ್ದೆಯನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಭ್ರಷ್ಟಾಚಾರವೇ ಪೊ.ಅಶೋಕ್​ ಕುಮಾರ್​ ಅವರ ಆತ್ಮಹತ್ಯೆಗೆ ಕಾರಣ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ಆಗ್ರಹಿಸಿದ್ದಾರೆ.

    ರಾಜ್ಯಕ್ಕೆ ಬೇಕಾದ, ಸಾವಿರಾರು ಪತ್ರಕರ್ತರನ್ನು ತಯಾರು ಮಾಡಿದ ಪ್ರೊ. ಅಶೋಕ್​​ ಕುಮಾರ್​ ಸಾಮಾನ್ಯ ವ್ಯಕ್ತಿಯಲ್ಲ. ಅವರ ಆತ್ಮಹತ್ಯೆ ವಿಚಾರ ಆಘಾತ ನೀಡಿದೆ. ಈ ಆತ್ಮಹತ್ಯೆಗೆ ಕಾರಣ ಏನು? ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಮಗೆ ತಿಳಿದಿರುವ ಪ್ರಕಾರ ನಾಲ್ಕು ಮಂದಿಯ ಹೆಸರು ಉಪಕುಲಪತಿ ಹುದ್ದೆಗೆ ಕೇಳಿಬಂದಿದ್ದು, ನೇಮಕ ವಿಚಾರದಲ್ಲಿ ಸಾಕಷ್ಟು ಪೈಪೋಟಿ, ವ್ಯಾಪಾರ ನಡೆದಿದೆ. ಪಾಪ ಆ ಪ್ರೊಫೆಸರ್​ ಬಡ್ಡಿಗೆ ಹಣ ತಂದು ಕೊಟ್ಟರೂ ಅವರನ್ನು ನೇಮಕ ಮಾಡಲಿಲ್ಲ. ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್​ ಬಾರದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

    ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಣವನ್ನು ಯಾವ ಅಧಿಕಾರಿ, ಮಂತ್ರಿ, ಮಧ್ಯವರ್ತಿ ತೆಗೆದುಕೊಂಡರೋ, ಈ ಎಲ್ಲದರ ಬಗ್ಗೆ ದೊಡ್ಡ ಮಟ್ಟದ ತನಿಖೆಯ ಅಗತ್ಯ ಕಾಣಿಸುತ್ತಿದೆ. ಆತ್ಮಹತ್ಯೆ ಪತ್ರದಲ್ಲಿ ಸಾವಿಗೆ ತಾವೇ ಕಾರಣ ಎಂದು ಬರೆದಿದ್ದರೂ, ಸರ್ಕಾರದಲ್ಲಿ ಇರುವವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.

    ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ವಿದ್ಯಾರ್ಥಿವರೆಗೂ ಉಪಕುಲಪತಿ ಹುದ್ದೆ ವ್ಯಾಪಾರಕ್ಕೆ ಇದೆ ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಯವರ ಹೆಸರಿಗೆ ಮಸಿ ಬಳೆಯುವ ಕೆಲಸವಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್​ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಅಶೋಕ್​ ಕುಮಾರ್​ ಅವರು ಎಂತಹ ಗಟ್ಟಿಯಾದ ವ್ಯಕ್ತಿ ಎಂದು ಅವರ ಪಾಠ ಕೇಳಿದ ಮಾಧ್ಯಮದವರಿಗೆ ಗೊತ್ತಿದೆ. ನಮಗೆ ಬಂದಿರುವ ಖಚಿತ ಮಾಹಿತಿ ಆಧಾರದ ಮೇಲೆ ನಾವು ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ಈ ವಿಚಾರದಲ್ಲಿ ತನಿಖೆ ಆದರೆ ಸತ್ಯಾಂಶ ಹೊರಬೀಳಲಿದೆ ಎಂದಿದ್ದಾರೆ.

    ಬೆಂಗಳೂರಿನ ಸಿಲ್ಕ್​ ಬೋರ್ಡ್ ಬಳಿ ಇರುವ ತಮ್ಮ ಮನೆಯಲ್ಲಿ ಅಶೋಕ್​ ಕುಮಾರ್​ ಅವರು ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

    ನನ್ನ ಸಾವಿಗೆ ನಾನೇ ಕಾರಣ; ಬರೆದಿಟ್ಟು ನೇಣಿಗೆ ಶರಣಾದರು ನಿವೃತ್ತ ಪ್ರೊಫೆಸರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts