More

    ವಿಪತ್ತು ಕಾಲಕ್ಕೆ ಆಪತ್ಬಾಂಧವ ಹೊಯ್ಸಳ!

    ಬಾಗಲಕೋಟೆ: ನಿತ್ಯವು ಜಗಳ, ಪರಸ್ಪರ ಕಚ್ಚಾಟ, ದೌರ್ಜನ್ಯ, ಅಗ್ನಿ ಅವಘಡ, ಅತ್ಯಾಚಾರ ಸೇರಿ ನಾನಾ ರೀತಿ ಅವಘಡಗಳು ಸಂಭವಿಸಲಿರುತ್ತವೆ. ಆದರೆ, ತಕ್ಷಣಕ್ಕೆ ಸಹಾಯ ಹಸ್ತ ದೊರೆಯುವುದು ದುರ್ಲಬ. ಹೀಗಾಗಿ ಪೊಲೀಸ್ ಇಲಾಖೆ ಹೊಯ್ಸಳ ಹೆಸರಿನಲ್ಲಿ ವಿಶೇಷ ಪೊಲೀಸ್ ಪಡೆ ರಚಿಸಿದ್ದು, ವಿಪತ್ತು ಕಾಲಕ್ಕೆ ಆಪತ್ಬಾಂಧವರಂತೆ ತ್ವರಿತಗತಿಯಲ್ಲಿ ಸ್ಪಂದಿಸಲಿದ್ದಾರೆ.

    ಹೌದು, ಜಿಲ್ಲೆಯಲ್ಲಿ ಪುಂಡ ಪೋಕರಿಗಳು, ರೌಡಿಗಳು, ಸಮಾಜ ಘಾತುಕ ಶಕ್ತಿಗಳು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಶಾಂತಿ, ಸಹನೆ ಕದಡುವ ಪ್ರಯತ್ನ ಮಾಡಿದಲ್ಲಿ ಹೊಯ್ಸಳ ಪಡೆ ಕ್ಷಣ ಮಾತ್ರದಲ್ಲಿ ಆಗಮಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆಯಲ್ಲಿ ಸಿಲುಕಿದವರಿಗೆ ಅಭಯ ನೀಡಲಿದೆ.

    ತಂಡದ ಕಾರ್ಯಗಳೇನು ?
    ಹೊಯ್ಸಳ ಪಡೆಯು ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಪೊಲೀಸ್ ಇಲಾಖೆ ಎಲ್ಲ ಜಿಲ್ಲೆಗಳಿಗೂ ವಿಸ್ತಾರ ಮಾಡಿದೆ. ಕೋಟೆನಾಡಿಗೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. 15 ವಾಹನಗಳು ಬಂದಿವೆ. ಇದಕ್ಕಾಗಿ 120 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 24 *7 ಸೇವೆ ಒದಗಿಸಲಿದೆ. ಪ್ರತಿ ವಾಹನದಲ್ಲಿ 3 ಸಿಬ್ಬಂದಿ ಇರಲಿದ್ದಾರೆ. 112 ನಂಬರ್ ಕರೆ ಮಾಡಿದಲ್ಲಿ ಬೆಂಗಳೂರಿನಲ್ಲಿರುವ ಕಾಲ್ ಸೆಂಟರ್‌ಗೆ ಅದು ರಿಂಗಣಿಸುತ್ತದೆ. 15 ಸೆಕೆಂಡ್‌ಗಳಲ್ಲಿ ಅಲ್ಲಿನ ಸಿಬ್ಬಂದಿ ಕರೆ ಸ್ವೀಕಾರಿಸಿ ಸಮಸ್ಯೆ ಆಲಿಸಿ ಸ್ಥಳದ ಮಾಹಿತಿ ಪಡೆಯಲಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಚೇರಿ ಸ್ಥಾಪಿಸಲಾಗಿರುವ ವಿಶೇಷ ಕಂಟ್ರೋಲ್ ರೂಮ್‌ಗೆ ಏಕಕಾಲಕ್ಕೆ ಮಾಹಿತಿ ರವಾನೆ ಆಗಲಿದೆ. ನಂತರ ಹೊಯ್ಸಳ ವಾಹನಕ್ಕೆ ಸೂಚನೆ ನೀಡಲಾಗುತ್ತದೆ. ಶೀಘ್ರ ಗತಿಯಲ್ಲಿ ಪೊಲೀಸ್ ಪಡೆ ಆಗಮಿಸಿ ತ್ವರಿಗತಿಯಲ್ಲಿ ಪರಿಹಾರ ನೀಡುತ್ತಾರೆ.

    ಸಿಬ್ಬಂದಿಗೆ ವಿಶೇಷ ತರಬೇತಿ
    ಪೊಲೀಸ್, ಅಗ್ನಿ, ವಿಪತ್ತು ಮೂರು ಟ್ಯಾಗ್‌ಲೈನ್ ಮೂಲಕ ಹೊಯ್ಸಳ ಸೇವೆ ಒದಗಿಸಲಾಗಿದೆ. ಯಾವುದೇ ಕಠಿಣ ಸಂದರ್ಭದಲ್ಲಿ ಇದ್ದರು ಕರೆ ಮಾಡುವ ದೂರುದಾರರಿಗೆ ಅಥವಾ ಸಮಸ್ಯೆಯಲ್ಲಿ ಸಿಲುಕಿದ್ದವರಿಗೆ ಯಾವಾಗ ಸ್ಪಂದಿಸಬೇಕು, ಹೇಗೆ ಮಾತನಾಡಬೇಕು, ಪ್ರಥಮ ಚಿಕಿತ್ಸೆ ಯಾವ ರೀತಿ ನೀಡಬೇಕು, ಕೈಗೊಳ್ಳಬೇಕಾದ ಮುಂದಿನ ಕ್ರಮಗಳನ್ನು ಹೇಗೆ ಅನುಸರಿಸಬೇಕು, ತುರ್ತು ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

    ಒಟ್ಟಾರೆ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹಾಗೂ ಸಂಕಷ್ಟಕ್ಕೆ ಸಿಲುಕಿದವರಿಗೆ ತ್ವರಿಗತಿಯಲ್ಲಿ ಸಹಾಯ ನೀಡುವ ಉದ್ದೇಶದಿಂದ ಹೊಯ್ಸಳ ಪಡೆ ಸೇವೆ ಸಲ್ಲಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

    ಹೊಯ್ಸಳ ಸೇವೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಪೊಲೀಸ್ ಇಲಾಖೆ ಇನ್ನಷ್ಟು ಜನ ಸ್ನೇಹಿಯಾಗಬೇಕು, ಸಮಸ್ಯೆ, ಆಪತ್ತಿನಲ್ಲಿ ಇದ್ದವರಿಗೆ ನೆರವಿಗೆ ನಿಲ್ಲುವ ಉದ್ದೇಶ ಇದಾಗಿದೆ. ಜಿಲ್ಲೆಯ ಸಾರ್ವಜನಿಕರು 112 ಗೆ ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು. ಸುಖಾಸುಮ್ಮನೆ ಕರೆ ಮಾಡಿ ಚೆಲ್ಲಾಟವಾಡಿದಲ್ಲಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
    ಲೋಕೇಶ ಜಗಲಾಸರ್ ಎಸ್ಪಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts