More

    ಸಮಸ್ಯೆಗಳ ಬಿಚ್ಚಿಟ್ಟ ಸದಸ್ಯರು

    ಬಾಗಲಕೋಟೆ: ನಗರದ ವಿವಿಧ ಭಾಗದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ರಸ್ತೆಗಳು ಹದಗೆಟ್ಟು ಹೋಗಿವೆ. ಬೀದಿ ದೀಪಗಳಂತೂ ಒಂದು ದಿನವು ಬೆಳಕು ನೀಡಿಲ್ಲ. ಶುದ್ಧ ಕುಡಿವ ನೀರಿನ ಘಟಕ ಬಂದ್ ಆಗಿವೆ. ಚರಂಡಿಗಳು, ಯುಜಿಡಿಗಳ ಪರಿಸ್ಥಿತಿ ಅಯೋಮಯವಾಗಿದೆ. ಎಷ್ಟೇ ಮನವಿ ಮಾಡಿದರೂ ನಗರಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿಲ್ಲ.

    ಹೀಗೆ ನವನಗರದ ನಗರಸಭೆ ಸಭಾಭವನದಲ್ಲಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು.

    ಅನೇಕ ಕಡೆ ಕುಡಿಯುವ ನೀರಿನ ಪೈಪ್ ಒಡೆದಿದ್ದು, ನೀರು ಪೋಲಾಗುತ್ತಿದೆ. ಚರಂಡಿ ನೀರು ಒಡೆದ ಪೈಪ್‌ನಲ್ಲಿ ಸೇರುವುದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ಹಂದಿ, ಬಿಡಾಡಿ ದನಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ನಗರಸಭೆ, ಬಿಟಿಡಿಎ ವ್ಯಾಪ್ತಿಯನಲ್ಲಿ ಸಮುದಾಯ ಭವನಗಳು, ಕಾಂಪ್ಲೆಕ್ಸ್‌ಗಳು ಹಾಳು ಕೊಂಪೆಯಂತಾಗಿವೆ. ಹೊಸದಾಗಿ ನಿರ್ಮಾಣವಾದ ಶೌಚಗೃಹಗಳು ಇನ್ನು ಉದ್ಘಾಟನೆಯಾಗಿಲ್ಲ. ಹಳೇ ಶೌಚಗೃಹಗಳು ಸಂಪೂರ್ಣಗಳು ದುಸ್ಥಿತಿಯಲ್ಲಿವೆ. 24*7 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದರೂ ಕೆಲವು ಪ್ರದೇಶದಲ್ಲಿ ಒಂದು ಹನಿ ನೀರು ಕೂಡ ಹರಿದಿಲ್ಲ. ಒಟ್ಟಾರೆ, ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿ ನಗರದಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ದೊರೆಯುತ್ತಿಲ್ಲ ಎಂದು ಸರ್ವ ಸದಸ್ಯರು ತಮ್ಮ ಅಳಲು ತೋಡಿಕೊಂಡರು.

    ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕ ವೀರಣ್ಣ ಚರಂತಿಮಠ, ಮಳೆ ಇರುವ ಕಾರಣಕ್ಕೆ ರಸ್ತೆಗಳ ಸುಧಾರಣೆ ಕಾಮಗಾರಿ ಕೈಗೊಳ್ಳದಿರಲು ಸೂಚನೆ ನೀಡಿದ್ದೆ. ಆದರೆ, ಶೌಚಗೃಹ, ಯುಜಿಡಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಗರಸಭೆ ನಿಷ್ಕಾಳಜಿ ವಹಿಸುವುದು ಸಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಮೃತ ಯೋಜನೆ, ನಗರೋತ್ಥಾನ ಯೋಜನೆ ಮೂಲಕ ಕೋಟ್ಯಂತರ ಅನುದಾನ ನೀಡಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ತಿಳಿಸಿದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸಿ ತ್ವರಿತಗತಿಯಲ್ಲಿ ಸಮಸ್ಯೆ ಪರಿಹರಿಸಬೇಕು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ನಗರ ಸಂಚಾರ ನಡೆಸಿ ನಗರದ ಸ್ವಚ್ಛತೆ, ಅಭಿವೃದ್ಧಿಗೆ ಒತ್ತು ನೀಡಬೇಕು. ಅಧಿಕಾರಿಗಳು, ಸದಸ್ಯರು ಪರಸ್ಪರ ಹೊಂದಾಣಿಕೆ ಮೂಲಕ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಅವ್ಯವಹಾರಕ್ಕೆ ಅವಕಾಶ ನೀಡಬಾರದು. ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

    ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾ ಆಯುಕ್ತ ಗಣಪತಿ ಪಾಟೀಲ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಸದಸ್ಯರಾದ ರತ್ನಾ ಕೆರೂರ, ಯಲ್ಲಪ್ಪ ನಾರಾಯಣಿ, ವಿ.ವಿ.ಶಿರಗನ್ನವರ, ಶ್ರೀಹರಿ ಠಿಕಾರಿ, ಚನ್ನಯ್ಯ ಹಿರೇಮಠ ಸೇರಿ ಇತರರು ಇದ್ದರು.

    ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿಲ್ಲ
    ಸಭೆ ಆರಂಭದಲ್ಲಿ ಕಾಂಗ್ರೆಸ್ ಸದಸ್ಯರಾದ ಚನ್ನವೀರ ಅಂಗಡಿ, ಹಾಜಿಸಾಬ ದಂಡಿನ ಶುದ್ಧ ಕುಡಿಯುವ ನೀರಿನ ಅವ್ಯವಸ್ಥೆ ಕುರಿತು ಸಮಸ್ಯೆ ಗಮನಕ್ಕೆ ತಂದರು. ಈ ವೇಳೆ ಶಾಸಕ ವೀರಣ್ಣ ಚರಂತಿಮಠ ಕೆಂಡಾಮಂಡಲರಾಗಿ, ಈ ಹಿಂದಿನ ಐದು ವರ್ಷದಲ್ಲಿ ಕಾಂಗ್ರೆಸ್ ನಗರದ ಅಭಿವೃದ್ಧಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ದೊಡ್ಡಮಟ್ಟದ ಗೋಲ್‌ಮಾಲ್ ನಡೆದಿದೆ ಎಂದು ದೂರಿದರು.

    ಅಂದಿನ ಆಯುಕ್ತ ರುದ್ರೇಶ ಕಾಟನ್ ಮಾರ್ಕೆಟ್ ಬಂದ್ ಮಾಡಿ ಸಾಧಿಸಿದ್ದಾರು ಏನು? 100 ವರ್ಷ ಲೀಜ್ ಕೊಡಲಾಗಿತ್ತು. ಯಾವ ಜಾಗೆಯಲ್ಲಿ 30 ವರ್ಷ ವಾಸವಿರುತ್ತಾರೆ ಅವರಿಗೆ ಅದು ಸಲ್ಲಬೇಕು ಎನ್ನುವುದು ಸುಪ್ರೀಕೋರ್ಟ್ ಅನೇಕ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಇಂದು ಕಾಟನ್ ಮಾರ್ಕೆಟ್ ಪರಿಸ್ಥಿತಿ ಏನಾಗಿದೆ. ಸರ್ಕಾರಕ್ಕೂ ಟ್ಯಾಕ್ಸ್ ನಷ್ಟವಾಗಿದೆ. ಕಾರ್ಮಿಕರು ಉದ್ಯೋಗವಿಲ್ಲದೆ ಸಮಸ್ಯೆ ಎದುರಿಸಿದರು. ಇನ್ನು 11 ಕೋಟಿ ರೂ. ಮೊತ್ತದ ಸಿಮೆಂಟ್ ಕ್ವಾರಿ ನೀರಿನ ಯೋಜನೆ ನಿಮ್ಮ ಕಾಲದಲ್ಲಿ ಉದ್ಘಾಟನೆಯಾಗಲಿಲ್ಲ. ಯಾವ ರೀತಿ ಅಭಿವೃದ್ಧಿ ಆಗಿದೆ ಹೇಳಿ ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ಹರಿಹಾಯ್ದರು. ಎಲ್ಲರೂ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ಮಾತ್ರ ಒತ್ತು ನೀಡಬೇಕು. ಇಲ್ಲಸಲ್ಲದ ವಿಷಯ ಪ್ರಸ್ತಾಪ ಮಾಡಿ ಸಭೆಯ ದಿಕ್ಕು ತಪ್ಪಿಸುವ ಯತ್ನ ಮಾಡಬಾರದು ಎಂದರು.

    ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿಲ್ಲ
    ನಗರದ ತ್ಯಾಜ್ಯವನ್ನು ಹಳೇ ಬಾಗಲಕೋಟೆ ನಗರದ ಹೊರ ವಲಯದ ಹಳೇ ಮಲ್ಲಾಪುರ ರಸ್ತೆ, ಹಳೇ ಎಪಿಎಂಸಿ ಸುತ್ತಲೂ ಹಾಕಲಾಗುತ್ತಿದೆ. ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ದುರ್ನಾತ, ಕಲುಷಿತ ಗಾಳಿ ಹೊರಸೂಸಿ ಅಸ್ತಮಾ, ಟಿಬಿಯಂತಹ ಕಾಯಿಲೆಗಳು ಉಲ್ಪಣಗೊಳ್ಳುತ್ತಿವೆ. ಅಲ್ಲದೆ, ಹಳೇ ನಗರದ ಸ್ಮಶಾನದಲ್ಲಿ ಶವಗಳ ಸುಡುವುದರಿಂದ (ಸಂಸ್ಕಾರ) ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಹರಿಸುತಿಲ್ಲ. ತ್ಯಾಜ್ಯಗಳ ಸರಿಯಾಗಿ ನಿರ್ವಹಣೆಗೆ ವೈಜ್ಞಾನಿಕ ಕ್ರಮ ಅನುಸರಿಬೇಕು. ವಿದ್ಯುತ್ ಚಾಲಿತ ಚಿತಾಗಾರ ಘಟಕ ಸ್ಥಾಪಿಸಬೇಕು ಎಂದು ಸದಸ್ಯ ಚನ್ನವೀರ ಅಂಗಡಿ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ವೀರಣ್ಣ ಚರಂತಿಮಠ ಈ ಬಗ್ಗೆ ನಗರಸಭೆ ಪರಿಸರ ವಿಭಾಗ ಗಮನ ಹರಿಸಬೇಕು. ತ್ಯಾಜ್ಯಗಳಿಂದ ಆಗುತ್ತಿರುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. ವಿದ್ಯುತ್ ಚಾಲಿತ ಚಿತಾಗಾರ ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts