More

    ಜನರ ಸಮಸ್ಯೆ ಮೊದಲು ಬಗೆಹರಿಸಿ

    ಬಾದಾಮಿ: ಕೋವಿಡ್ 3ನೇ ಅಲೆ ಬರುತ್ತದೆಂದು ತಜ್ಞರು ಹೇಳಿದ್ದು 2ನೇ ಅಲೆಯಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿವೆ. ಜನತೆ ನಿರ್ಲಕ್ಷ ವಹಿಸದೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆ ಸೇರಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಮಾಸಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.

    ಪಟ್ಟಣದ ಹೇಮರಡ್ಡಿ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಕರೊನಾ ಕೇಸ್‌ಗಳು ಶೂನ್ಯವಾಗಿದೆ. ತಾಲೂಕು ಮತ್ತು ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ. ಆದರೆ ರೋಗದಿಂದ ಬಳಲಿ ಸಾವು ಸಂಭವಿಸಿವೆ ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಅವರು ಸರಿಯಾದ ಮಾಹಿತಿ ಕೊಡದೆ ಇರುವ ಕಾರಣ ತರಾಟೆಗೆ ತೆಗೆದುಕೊಂಡರು. ನಾನು ಕೊಡಮಾಡಿದ ಬೆಡ್ ಏಕೆ ಹಂಚಿಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ ಪಾಟೀಲ, ಮುಂದಿನ 2-3 ದಿನಗಳಲ್ಲಿ ಹಂಚುತ್ತೇನೆ ಎಂದು ಹೇಳಿದರು.

    ಸಭೆಗೆ ತಡವಾಗಿ ಬಂದ ಡಿಡಿಪಿಯು ಎಚ್.ಪಿ. ಪೂಜಾರ, ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
    ನನ್ನ ಜತೆ ಬಹಳಷ್ಟು ಜನರು ಇದ್ದಾರೆ. ಮಾಸ್ಕ್ ಧರಿಸಿಲ್ಲ. ಕೋವಿಡ್ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಂಡಿದ್ದೀರಿ? ಎಂದು ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

    ಆಗ ಸಿಪಿಐ ರಮೇಶ ಹಾನಾಪುರ ಉತ್ತರಿಸಿ ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಜಾಗೃತಿ ಮೂಡಿಸಲಾಗಿದೆ ಎಂದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ನಾಗೂರ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಬಿತ್ತನೆ ಶೇ. 91.5 ರಷ್ಟಾಗಿದ್ದು ಒಟ್ಟು 52,154 ಹೆಕ್ಟೇರ್ ಪ್ರದೇಶ ಬಿತ್ತನೆ ಆಗಿದೆ ಎಂದು ಮಾಹಿತಿ ನೀಡಿದರು.

    ಶಾಸಕರ ಪ್ರದೇಶಾಭಿವೃದ್ಧಿ ನಿಧಿ 50 ಲಕ್ಷ ರೂ. ಅನುದಾನ ಬಿಡುಗಡೆಯಾದ ಪೈಕಿ ಬಾದಾಮಿಗೆ 30 ಲಕ್ಷ ರೂ., ಕೆರೂರ ಹಾಗೂ ಗುಳೇದಗುಡ್ಡಕ್ಕೆ 20 ಲಕ್ಷ ರೂ. ಖರ್ಚು ಭರಿಸಲಾಗಿದೆ ಎಂದು ಟಿ.ಎಚ್.ಓ. ಪಾಟೀಲ ಮಾಹಿತಿ ನೀಡಿದ ವೇಳೆ ನೀವು ಮುಂದಿನ ಸಭೆಗೆ ಬಂದಾಗ ಇದರ ಖರ್ಚು ವೆಚ್ಚದ ಮಾಹಿತಿ ಕೊಡಬೇಕು. ಕೊಡದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ ಮಾತನಾಡಿ, 36 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದ ಪೈಕಿ 28 ಕೋಟಿ ರೂ. ಖರ್ಚು ಆಗಿ 7 ಕೋಟಿ ರೂ. ಉಳಿಕೆಯಾಗಿದೆ. ತಾಲೂಕಿನಲ್ಲಿ ಒಟ್ಟು 337 ಅಂಗನವಾಡಿ ಕೇಂದ್ರಗಳಿದ್ದು ಈಗ 234 ಕಟ್ಟಡ ಕಾಮಗಾರಿ ನಡೆದಿವೆ ಎಂದು ಸಭೆಗೆ ಮಾಹಿತಿ ನೀಡಿದರು.

    ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ವಿಪ ಸದಸ್ಯ ಆರ್.ಬಿ. ತಿಮ್ಮಾಪುರ, ಪುರಸಭೆ ಅಧ್ಯಕ್ಷ ಮಂಜು ಹೊಸಮನಿ, ಉಪಾಧ್ಯಕ್ಷೆ ರಾಮವ್ವ ಪೂಜಾರ, ಜಿ.ಪಂ. ಉಪ ಕಾರ್ಯದರ್ಶಿ ಅಮರೇಶ ನಾಯಕ, ತಹಸೀಲ್ದಾರ್ ಸುಹಾಸ ಇಂಗಳೆ, ತಾ.ಪಂ. ಇಒ ಮಲ್ಲಿಕಾರ್ಜುನ ಕಲಾದಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಪಿಡಬ್ಲುೃಡಿ ಎಇಇ ಶಿವಾನಂದ ಜಾಡರ, ಬಿಇಒ ಎಂ.ಪಿ. ಮಾಗಿ, ಮುಖ್ಯ ವೈದ್ಯಾಧಿಕಾರಿ ಡಾ. ಬಿ.ಎಚ್. ರೇವಣಸಿದ್ದಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಅಧಿಕಾರಿಗಳಿಗೆ ತರಾಟೆ
    ಬಾದಾಮಿ ತಾಲೂಕಿನಲ್ಲಿ ಅನುದಾನ ದುರುಪಯೋಗ, ಕಾಮಗಾರಿ ವಿಳಂಬ, ಭ್ರಷ್ಟಾಚಾರ, ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕೈಗೊಳ್ಳಲಾಗುವುದು. ಅಂಥವರು ನನ್ನ ಕ್ಷೇತ್ರದಲ್ಲಿ ಬೇಕಾಗಿಲ್ಲ, ಬೇರೆಡೆಗೆ ಹೋಗಬಹುದು. ಎಸ್‌ಇಪಿ, ಟಿಎಸ್‌ಪಿ ಕೆಲಸ ವಿಳಂಬವಾಗಕೂಡದು. ನಾನು ಬಂದಾಗ ಜನರು ಸಣ್ಣ ಸಣ್ಣ ಕೆಲಸಕ್ಕೂ ಭೇಟಿ ಮಾಡಿ ದೂರು ಕೊಡದಂತೆ ಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಇದನ್ನೇ ಅನೇಕ ಬಾರಿ ಹೇಳಿದ್ದರೂ ಬದಲಾವಣೆಯಾಗಿಲ್ಲ. ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts