More

    ಕೃಷ್ಣಭಕ್ತಿಯ ಅನನ್ಯ ಅಭಿವ್ಯಕ್ತಿ ಪು.ತಿ. ನರಸಿಂಹಾಚಾರ್; ಇಂದು ಜನ್ಮದಿನ

    ಕೃಷ್ಣಭಕ್ತಿಯ ಅನನ್ಯ ಅಭಿವ್ಯಕ್ತಿ ಪು.ತಿ. ನರಸಿಂಹಾಚಾರ್; ಇಂದು ಜನ್ಮದಿನ| ಚಿಂತಾಮಣಿ ಕೊಡ್ಲೆಕೆರೆ

    ಕನ್ನಡ ನವೋದಯ ಸಾಹಿತ್ಯದ ರತ್ನತ್ರಯರಲ್ಲಿ ಒಬ್ಬರೆಂದು ಕಾವ್ಯರಸಿಕರ ಆದರ, ಗೌರವ ಪಡೆದವರು ಪು.ತಿ.ನರಸಿಂಹಾಚಾರ್. ಕುವೆಂಪು, ಬೇಂದ್ರೆ, ಪು. ತಿ. ನ. – ಈ ಮೂರೂ ಮಹಾಪ್ರತಿಭಾವಂತರ ಸಾಧನೆಗಳೂ ಅನನ್ಯ, ಅಸಾಧಾರಣ. ಪು. ತಿ. ನ. ಜನಿಸಿದ್ದು ಮೇಲುಕೋಟೆಯಲ್ಲಿ. ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ನಡೆಯಿತು. ಅದರೊಟ್ಟಿಗೆ ಅವರ ತಂದೆಯವರಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ಅವರಿಂದ ನರಸಿಂಹಾಚಾರ್​ರಿಗೆ ಸಾಂಪ್ರದಾಯಿಕ ಶಾಸ್ತ್ರೀಯ ಶಿಕ್ಷಣವೂ ದೊರೆಯಿತು. ಧಾರ್ವಿುಕ ಆಚರಣೆಗಳು, ವೇದ ಉಪನಿಷತ್ತುಗಳ ಆಳವಾದ ಅಧ್ಯಯನ, ಸಂಸ್ಕೃತಜ್ಞಾನ, ಮಹಾಕಾವ್ಯಗಳ ಓದು ಇವೆಲ್ಲವೂ ಅವರಿಗೆ ಎಳವೆಯಲ್ಲಿಯೇ ದೊರೆತು ಅವರ ಕಾವ್ಯ ವ್ಯಕ್ತಿತ್ವಕ್ಕೆ ಒಂದು ಭದ್ರ ಬುನಾದಿ ಒದಗಿಬಂತು. ಮೈಸೂರಿನಲ್ಲಿ ಅವರ ಕಾಲೇಜು ಶಿಕ್ಷಣ, ಮುಂದೆ ಬೆಂಗಳೂರಿನಲ್ಲಿ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದರು. ಇದು ಸಂಕ್ಷಿಪ್ತವಾಗಿ ಅವರ ಜೀವನದ ರೇಖಾಚಿತ್ರ.

    ಕಾವ್ಯ, ಕಾವ್ಯ ಮೀಮಾಂಸೆ, ಗೀತರೂಪಕ, ಪ್ರಬಂಧಗಳು – ಪು. ತಿ .ನ. ಅವರ ಪ್ರತಿಭೆಯ ಚತುಮುಖ ಸಾಧನೆಗಳು. ಈ ವಿಶಾಲವಾದ ಪ್ರಪಂಚವು ತಮ್ಮ ಚಿಕ್ಕ ಹೃದಯವನ್ನು ಪ್ರವೇಶಿಸಿ ಅದು ಹೇಗೆ ಸಾರವತ್ತಾಗಿ, ಅಸಂಕುಚಿತವಾಗಿ ನಿಂತಿತು ಎಂದು ಅವರು ತಮ್ಮ ಕಾವ್ಯಸೃಷ್ಟಿಯ ಕುರಿತು ಬೆರಗಿನಿಂದ ನುಡಿಯುತ್ತಾರೆ. ಹಿರಿಯ ವಿದ್ವಾಂಸರಾದ ಎಂ.ಹಿರಿಯಣ್ಣನವರು ಈ ಕವಿಯ ಎರಡನೇ ಕವನ ಸಂಕಲನಕ್ಕೆ ಮುನ್ನುಡಿ ಬರೆಯುವ ಹೊತ್ತಿಗೇ ‘ಇವರ ಗೀತೆಗಳ ವಿಶ್ರಾಂತಿ ಸ್ಥಾನ ಭಕ್ತಿ ಭಾವ’ ಎಂದೂ, ‘ಇಲ್ಲಿ ಶಾಂತರಸಕ್ಕೆ ಉಳಿದ ವರ್ಣನಾತಿಶಯಗಳೆಲ್ಲ ಅಂಗವಾಗಿದ್ದು ಅದನ್ನು ಪರಿಪೋಷಿಸುವವು’ ಎಂದೂ ಗುರುತಿಸಿದರು. ‘ಇವರ ಕವಿತೆ ಹಿಂದಿನವರ ಶೈಲಿಗಿಂತ ಭಿನ್ನವಾಗಿದ್ದರೂ, ಈ ಭಾವ ಅಥವಾ ರಸ ಪಾರಮ್ಯದಲ್ಲಿ ಅದು ಅತ್ಯುತ್ತಮವಾದ ಪ್ರಾಚೀನ ಕವಿತಾ ಸರಣಿಯನ್ನೇ ಅನುಸರಿಸುವುದು’ ಎಂದು ಹಿರಿಯಣ್ಣನವರು ನರಸಿಂಹಾಚಾರ್ಯರ ಕಾವ್ಯದ ಸ್ವಭಾವದ ಕುರಿತು ನಿರ್ಣಯದ ಮಾತುಗಳನ್ನಾಡಿದರು. ಪುತಿನರ ಯಾವುದೇ ಸುಪ್ರಸಿದ್ಧ ಹಾಡೂ ಇದಕ್ಕೆ ನಿದರ್ಶನವಾಗಿ ನಿಲ್ಲುತ್ತದೆ:

    ಮಳೆಯು ನಾಡ ತೊಯ್ಯುತಿರೆ,

    ಮಿಂಚಿಗಿರುಳು ಬೆದರುತಿರೆ,

    ಗೂಡ ಮುದ್ದು ಗೊಲ್ಲನೆಡೆಯೊಳೊಂದು ಹಣತೆ ಮಿನುಗುತಿರೆ

    ಮುದವದೊಂದು ಮೊಳೆವುದು

    ಬಗೆಯ ಕಣ್ಣು ತೆರೆವುದು

    ಶ್ರೀಕೃಷ್ಣನ ಜನನ ಸಂದರ್ಭದ ಮಾಯಾಚಿತ್ರವನ್ನು ಕಟ್ಟುವ ಈ ಕವಿತೆ ಅವರ ಮೊದಲ ಸಂಕಲನ ‘ಹಣತೆ’ಯಲ್ಲಿದೆ. ಎಂಬತ್ತರ ಇಳಿವಯಸ್ಸಿನಲ್ಲಿ ‘ಶ್ರೀಹರಿಚರಿತೆ’ ಎಂಬ ಹೆಸರಿನ ಅವರ ಮಹಾಕಾವ್ಯ ಪ್ರಕಟವಾಯಿತು. ಬೃಹಚ್ಛಂದಸ್ಸಿನಲ್ಲಿರುವ ಈ ಮಹಾಕಾವ್ಯದ ಹೊತ್ತಿಗೆ ಅವರ ಭಕ್ತಿ, ಜ್ಞಾನ, ಕಾವ್ಯಶಕ್ತಿಗಳ ಅಪೂರ್ವ ವಿಕಾಸವನ್ನು ಕಾಣುತ್ತೇವೆ. ‘ಶ್ರೀಕೃಷ್ಣ ನನ್ನ ಆತ್ಮಕ್ಕೆ ತುಂಬ ಹತ್ತಿರದ ದೇವರು’ ಎಂಬ ಅವರ ಮಹಾಕಾವ್ಯದ ಅರಿಕೆಯ ಮಾತು ಗಮನಿಸಿ. ಅದು ಆತ್ಮದ ಅರಿವು, ಪರಮಾತ್ಮದ ಹಂಬಲ, ಈ ಎರಡರ ಭೇದ ಮತ್ತು ಸಾಮೀಪ್ಯದ ಆಸೆ ಎಲ್ಲವನ್ನೂ ಹೇಳುತ್ತಿದೆ. ‘ಕೊನೆವರೆಗು ದೀಪಿಸುತಿರಲಿ ಎಡಬಿಡದೆನ್ನ ಮಾನಸವ ಕೃಷ್ಣಸ್ಮರಣೆ’- ಇದು ಈ ಮಹಾಕಾವ್ಯದ ಒಂದು ಸಾಲು. ಈ ಕವಿಯ ಸಾಂಪ್ರದಾಯಿಕ ಸಾಧನೆ ಮತ್ತು ’ಅತ್ಯಾಧುನಿಕ’ ಕಾವ್ಯ ಸೃಷ್ಟಿಗಳು ಮೇಳೈಸಿ ಹುಟ್ಟಿಸಿದ ಬೆಳಕನ್ನು ಹಿಡಿದಿಡುವ ಕಾವ್ಯಭಾಗ (ಭಾಗ್ಯ)ವಿದು.

    ‘ಗೋಕುಲಾಷ್ಟಮಿ’ಯಂಥ ಪ್ರಬಂಧ ಇರಬಹುದು, ‘ಗೋಕುಲ ನಿರ್ಗಮನ’ದಂಥ ಗೀತರೂಪಕ ಇರಬಹುದು, ಅವರ ಕಾವ್ಯ ಜೀವಿತದ ಅತ್ಯದ್ಭುತ ಸಾಧನೆಯಂತಿರುವ ಅವರ ಕಾವ್ಯಮೀಮಾಂಸೆಯಲ್ಲಿ ಅವರಿಗೆ ಅಡಿಗಡಿಗೆ ಕೃಷ್ಣನೋ, ಗೀತೆಯೋ ನೆನಪಿಗೆ ಬರುವ ಸಂದರ್ಭಗಳಿರಬಹುದು – ಎಲ್ಲಿಯೂ, ಎಲ್ಲೆಲ್ಲಿಯೂ ಪ್ರಕಟಗೊಳ್ಳುವ ಅವರ ಆತ್ಮಸಖ (ಶ್ರೀಕೃಷ್ಣ) ಸದಾ ತೇಜಸ್ವಿ, ಚಿಂತಕ, ರಸಹೃದಯಿ. ಇಂಥದೊಂದು ಅನನ್ಯ ಸಾಹಿತ್ಯದ ನಿರ್ವಿುತಿ ಪು. ತಿ . ನ. ಕನ್ನಡಿಗರಿಗೆ ಬಿಟ್ಟು ಹೋದ ದೊಡ್ಡ ಆಸ್ತಿ. ದುರ್ದೈವವೆಂದರೆ ನಮಗೆ ಇದು ಅಮೂಲ್ಯವಾದುದು ಎಂಬ ಅರಿವೂ ಇಲ್ಲದಿರುವುದು.

    ಈ ಮಹಾಕವಿಯ ಕಾವ್ಯ ಚಿಂತನೆಯ ಬಹುಪಾಲನ್ನು ಸಮರ್ಥವಾಗಿ ಹೇಳುವ ಸಾಲುಗಳಿವು: ‘ಕವಿತೆ ಜೀವಕಾಮಸ್ತರದ ಮಾತಲ್ಲ, ಆತ್ಮಕಾಮಸ್ತರದ ಮಾತು. ಕವಿ ಸ್ವತಂತ್ರ ಸತ್ವಶಾಲಿ, ಪ್ರಚಲಿತ ಕಾಲಕ್ಕೆ ಇದಿರು ಹಾಯಬಲ್ಲ. ಎಲ್ಲ ಬಾಳಿನಲ್ಲೂ ದಿವ್ಯ ಸ್ತರ ಒಂದಿದೆ. ಅದನ್ನು ತನ್ನ ಬಾಳಿನಲ್ಲಿ ಕಂಡುಕೊಂಡು ಮಿಕ್ಕ ಜೀವರಿಗೆ ಅರಿಯಿಸುವುದು ಕವಿ ಮತ್ತು ಕಲಾಧರರಿಗೆ ಪ್ರಕೃತಿ ಕೊಟ್ಟಿರುವ ವರ.’

    ಪದ್ಮಶ್ರೀ, ಪಂಪ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಕವಿಗೆ ಸಂದ ಕೆಲವು ಮುಖ್ಯ ಗೌರವಗಳು. ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಕಾಲಿಕ ಪ್ರಸ್ತುತತೆಯ ಘನವಾದ ಸಾಹಿತ್ಯ ಸೃಷ್ಟಿಯಲ್ಲಿಯೇ ಅವರು ನಿಜವಾದ ತೃಪ್ತಿಯನ್ನು ಕಂಡುಕೊಂಡರು.

    (ಲೇಖಕರು ಖ್ಯಾತ ಕವಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts